
ಸೋಮವಾರಪೇಟೆ: ಐಗೂರಿನಲ್ಲಿ ನಡೆಯಲಿರುವ 9ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅಚ್ಚುಕಟ್ಟಾಗಿ ಮತ್ತು ಅರ್ಥಪೂರ್ಣವಾಗಿ ನಡೆಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಐಗೂರು ಕೃಷಿಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಈಚೆಗೆ ನಡೆದ ಸಾಹಿತ್ಯ ಸಮ್ಮೇಳನದ ವಿವಿಧ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ತಾಲ್ಲೂಕು ಸಮ್ಮೇಳನವಾದರೂ, ಐಗೂರು ಮತ್ತು ಸುತ್ತಮುತ್ತಲ ಹಳ್ಳಿಗಳ ಮನೆಯ ಉತ್ಸವವಾಗಬೇಕು. ಎಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳುವಂತಾಗಲು ಉಪಸಮಿತಿಯವರು ಶ್ರಮಿಸಬೇಕು. ಎಲ್ಲಾ ಗ್ರಾಮಗಳಲ್ಲಿ ಸಭೆ ಸೇರಿ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಬೇಕು. ತಾಲ್ಲೂಕಿನ ಎಲ್ಲ ಗ್ರಾಮಗಳಲ್ಲಿ ಪ್ರಚಾರ ಮಾಡುವ ಕೆಲಸ ಸಮಿತಿಯಿಂದಾಗಬೇಕು ಎಂದರು.
ಐಗೂರು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಜಿ.ಕೆ.ವಿನೋದ್ ಮಾತನಾಡಿ, ಈ ಸಮ್ಮೇಳನ ನಮ್ಮೆಲ್ಲರ ಪ್ರತಿಷ್ಠೆಯಾಗಿದೆ. ಇದನ್ನು ಸುಸೂತ್ರವಾಗಿ ನಡೆಸಿಕೊಂಡು ಹೋಗಲು ಪಂಚಾಯಿತಿಯಿಂದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು. ಗ್ರಾಮಸ್ಥರು ಸಹಕರಿಸುವ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಕೋರಿದರು.
ಸಮ್ಮೆಳನದ ಹಣಕಾಸು ಸಮಿತಿ ಅಧ್ಯಕ್ಷ ಕೆ.ಪಿ.ರಾಯ್ ಮಾತನಾಡಿ, ಸಾಹಿತ್ಯ ಸಮ್ಮೇಳನದ ವಿವಿಧ ಉಪ ಸಮಿತಿಗಳಲ್ಲಿರುವ 200ಕ್ಕೂ ಹೆಚ್ಚು ಸದಸ್ಯರು ಸಮ್ಮೇಳನಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
‘ಮಡಿಕೇರಿ– ಸೋಮವಾರಪೇಟೆ ರಸ್ತೆಯ ಸಂಪರ್ಕ ಸೇತುವೆ ಕೆಲಸ ನಡೆಯುತ್ತಿದ್ದು, ಮೆರವಣಿಗೆಯನ್ನು ಸಾಂಕೇತಿಕವಾಗಿ ಐಗೂರಿನಲ್ಲಿ ನಡೆಸಿ ನಂತರ ಕಾಜೂರು ಜಂಕ್ಷನ್‌ನಿಂದ ಸಮ್ಮೇಳನ ನಡೆಯುವ ಸರ್ಕಾರಿ ಪ್ರಾಥಮಿಕ ಶಾಲೆಯವರೆಗೆ ಸಮ್ಮೇಳನದ ಅಧ್ಯಕ್ಷರ ಮೆರವಣಿಗೆ ನಡೆಸಲಾಗುವುದು. ವಿವಿಧ ಕಲಾತಂಡಗಳು, ಡೊಳ್ಳು ಕುಣಿತ, ಕಳಸ ಹೊತ್ತ ಮಹಿಳೆಯರು, ಸ್ತ್ರೀಶಕ್ತಿ, ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಘ, ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ವಿದ್ಯಾರ್ಥಿಗಳು ಪಾಳ್ಗೊಂಡು ಮೆರವಣಿಗೆ ಮೂಲಕ ಸಮ್ಮೇಳನದ ವೇದಿಕೆಗೆ ಕರೆದುಕೊಂಡು ಬರಲಾಗುವುದು’ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ಡಿ.ಎಸ್.ಚಂಗಪ್ಪ ತಿಳಿಸಿದರು.
ವೇದಿಕೆಯಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್.ಡಿ.ವಿಜೇತ್, ಸಮ್ಮೇಳನದ ಮಹಾಪೋಷಕ ಟಿ.ಪಿ.ರಮೇಶ್, ಆಹಾರ ಸಮಿತಿಯ ಅಧ್ಯಕ್ಷ ಮಚ್ಚಂಡ ಅಶೋಕ್, ಸ್ಮರಣ ಸಂಚಿಕೆಯ ಸಂಪಾದಕ ಎಸ್.ಎಂ.ಚಂಗಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಎಚ್.ಕೆ.ಉಮೇಶ್, ಸಮ್ಮೇಳನ ಸಮಿತಿಯ ಕಾರ್ಯದರ್ಶಿ ನಂಗಾರು ಕೀರ್ತಿ ಪ್ರಸಾದ್, ಜೆ.ಸಿ.ಶೇಖರ್, ಎಚ್.ಜೆ.ಜವರಪ್ಪ, ಗೌರವ ಕಾರ್ಯದರರ್ಶಿ ಎ.ಪಿ.ವೀರರಾಜು ಇದ್ದರು.
‘ಆಕರ್ಷಕ ವೇದಿಕೆ ನಿರ್ಮಾಣ’ ‘ಆಕರ್ಷಕ ವೇದಿಕೆ ನಿರ್ಮಿಸಿ 2 ಸಾವಿರ ಜನ ಕುಳಿತುಕೊಳ್ಳಲು ಆಸನ ವ್ಯವಸ್ಥೆ ಮಾಡಲಾಗುವುದು. ವೇದಿಕೆಯಲ್ಲಿ ಎಲ್‌ಇಡಿ ಪರದೆ ಹಾಕಲಾಗುವುದು. ಸಮ್ಮೇಳನದಲ್ಲಿ ಪುಸ್ತಕ ಮಳಿಗೆ ಜನಪದ ಪಾರಂಪರಿಕ ವಸ್ತುಗಳ ಮಳಿಗೆ ರಚಿಸಲಾಗುವುದು’ ಎಂದು ಮೆರವಣಿಗೆ ಸಮಿತಿ ಅಧ್ಯಕ್ಷ ಸಿ.ಕೆ.ರೋಹಿತ್ ತಿಳಿಸಿದರು. ನೆನಪಿನ ದ್ವಾರ ರಚನೆ: ‘ತಾಲ್ಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ನೆನಪಿಗೆ ನಾಡಿಗೆ ಸೇವೆ ಸಲ್ಲಿಸಿ ಮರೆಯಾದ 9 ಹಿರಿಯರ ನೆನಪಿನ ದ್ವಾರ ರಚಿಸಲಾಗುವುದು. ನಗರ ಅಲಂಕಾರ ಮತ್ತು ಮೆರವಣಿಗೆ ನಡೆಯುವ ಸ್ಥಳವನ್ನು ಸುಂದರವಾಗಿ ಸಜ್ಜುಗೊಳಿಸಲಾಗುವುದು’ ಎಂದು ಅಲಂಕಾರ ಸಮಿತಿ ಅಧ್ಯಕ್ಷ ಕೆ.ಪಿ.ದಿನೇಶ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.