
ವಿರಾಜಪೇಟೆ: ಕ್ರೀಡೆಗೆ ಬಹಳ ಮಹತ್ವವಿದ್ದು, ಕ್ರೀಡೆ ನಮ್ಮನ್ನು ಸಮಾಜಕ್ಕೆ ಪರಿಚಯಿಸುವಲ್ಲಿ ಹಾಗೂ ನಮ್ಮ ಪ್ರತಿಷ್ಠೆಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ ಎಂದು ಸಮೀಪದ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಕೊಡಗು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ 4ನೇ ವರ್ಷದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕೊಡಗು ಕ್ರೀಡೆಯ ತವರೂರು, ದಿನನಿತ್ಯ ಒಂದಲ್ಲ ಒಂದು ಪಂದ್ಯಾವಳಿ ನಡೆಯುತ್ತಿರುತ್ತದೆ. ಅದರಲ್ಲಿಯು ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯಿಂದ ಗ್ರಾಮೀಣ ಭಾಗದಲ್ಲಿ ಎಲೆ ಮರೆಯ ಕಾಯಿಯಂತಿರುವ ಯುವಕರ ಪ್ರತಿಭೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪ್ರತಿವರ್ಷ ಕ್ರೀಡಾಕೂಟ ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯ. ಕ್ರೀಡೆಯಿಂದ ಆರೋಗ್ಯವು ಉತ್ತಮವಾಗಿರುತ್ತದೆ. ಯುವಕರು ಕ್ರೀಡೆಯಲ್ಲಿ ಭಾಗವಹಿಸುವ ಮೂಲಕ ದೇಶದ ಉತ್ತಮ ಪ್ರಜೆಗಳಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ರಾಹ್ಮಣರ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಅವರು ಮಾತನಾಡಿ, ಕಳೆದ 4 ವರ್ಷಗಳಿಂದ ಕ್ರೀಡಾಕೂಟ ಆಯೋಜಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಹೆಚ್ಚಿನ ರೀತಿಯಲ್ಲಿ ಪಂದ್ಯಾಟ ಆಯೋಜಿಸಲಾಗುವುದು ಎಂದರು.
ಬ್ರಾಹ್ಮಣದ ವಿದ್ಯಾಭಿವೃದ್ಧಿ ನಿಧಿಯ ಜಿಲ್ಲಾ ಸಹಕಾರ್ಯದರ್ಶ ಎ.ವಿ.ಮಂಜುನಾಥ್ ಮಾತನಾಡಿ, ಬ್ರಾಹ್ಮಣರ ಸಂಘ ಇತರ ಸಂಘಗಳಂತೆ ಬಲಿಷ್ಠವಾಗಿ ಸಂಘಟಿತವಾಗಬೇಕು. ಬಡ ಕುಟುಂಬಗಳು ಸರ್ಕಾರದ ಸೌಲಭ್ಯಗಳನ್ನು ಪಡೆಯಲು ಮುಂದಾಗಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷಣ ಪಡೆದು ಉನ್ನತ ಹುದ್ದೆಗೇರಬೇಕು ಎಂದರು.
ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರನ್ನು ಸನ್ಮಾನಿಸಲಾಯಿತು. ಕೊಡಗು ಹವ್ಯಕ ಬ್ರಾಹ್ಮಣರ ಉತ್ತಮ ಜೀವನ ಸಹಕಾರ ಸಂಘದ ಹರಿಶಂಕರ್ ಪ್ರಸಾದ್, ಕ್ರೀಡಾ ಸಂಚಾಲಕ ಬಿ.ಕೆ. ಜಗದೀಶ್, ಸಹ ಸಂಚಾಲಕ ಸುಧೀರ್ ಮಕ್ಕಿಮನೆ, ನಾಪೋಕ್ಲುವಿನ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಮತ್ತು ಸಂಘಟನೆಯ ಪದಾಧಿಕಾರಿಗಳು, ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.