
ಮಡಿಕೇರಿ: ನದಿ ಉಳಿಸುವುದು, ಪರಿಸರ ಜಾಗೃತಿ, ಯೋಧರಿಗೆ ನಮನ ಹೀಗೆ ಬಿಡುವಿರದಷ್ಟು ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವವಳು ಕೊಡಗರಹಳ್ಳಿಯ ಸುಂಟಿಕೊಪ್ಪ ನಾಡು ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿರುವ ಶ್ರೀಶಾ.
ಶ್ರೀಜು ಮತ್ತು ಸಂಧ್ಯಾ ಅವರ ಪುತ್ರಿಯಾದ ಈಕೆ ಕಳೆದ ಹಲವು ವರ್ಷಗಳಿಂದ ಸದ್ದಿಲ್ಲದೇ ಹಲವು ಬಗೆಯ ಕಾರ್ಯಕ್ರಮಗಳನ್ನು ನೀಡುತ್ತಾ ಜನಜಾಗೃತಿ ಮೂಡಿಸುತ್ತಿದ್ದಾಳೆ.
ಕಳೆದ ವರ್ಷವಷ್ಟೇ ಈಕೆ 31ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪ್ರಬಂಧ ಮಂಡಿಸಿ ಎಲ್ಲರ ಗಮನ ಸೆಳೆದಿದ್ದಳು.
ತಲಕಾವೇರಿಯಿಂದ ಕೊಪ್ಪದವರೆಗೆ ಎಲ್ಲೆಲ್ಲಿ ಕಾವೇರಿ ನದಿ ಹರಿಯುತ್ತಿದೆಯೋ ಅಲ್ಲೆಲ್ಲ ನದಿ ಸ್ವಚ್ಛತೆ ಕುರಿತು ನಿರಂತರವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿ ನದಿ ಮಾಲಿನ್ಯ ತಡೆಯಲು ಜಾಗೃತಿ ಮೂಡಿಸುತ್ತಿದ್ದಾಳೆ.
ಇಲ್ಲಿಯವರೆಗೆ ವಿವಿಧ ವಿಷಯಗಳನ್ನು ಕುರಿತು ಸುಮಾರು 200ಕ್ಕೂ ಅಧಿಕ ಉಪನ್ಯಾಸಗಳನ್ನು ವಿವಿಧ ವೇದಿಕೆಗಳಲ್ಲಿ ನೀಡಿದ್ದಾಳೆ. ಇವುಗಳಿಂದ ಬಂದ ಗೌರವಧನವನ್ನು ಸೇರಿಸಿ ಪ್ರತಿ ವರ್ಷ ಯೋಧರಿಗೆ ನಮನ ಕಾರ್ಯಕ್ರಮ ಮಾಡುವ ಮೂಲಕ ಅಪರೂಪದ ಸಾಧಕ ಬಾಲಕಿ ಎಂಬ ಶ್ರೇಯಕ್ಕೆ ಪಾತ್ರಳಾಗಿದ್ದಾಳೆ.
ಪರಿಸರ ದಿನಾಚರಣೆ ಪ್ರಯುಕ್ತ ಪ್ರತಿ ವರ್ಷ ಶಾಲೆ, ಆಸ್ಪತ್ರೆ, ಪೊಲೀಸ್ ಠಾಣೆಯ ಆವರಣಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಮೂಡಿಸುತ್ತಿರುವುದು ವಿಶೇಷ.
ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ
ದುಂದುಭಿ ಸಿ.ಎಸ್.ಸುರೇಶ್ ನಾಪೋಕ್ಲು: ಟಿಸಿಎಸ್ ರಸಪ್ರಶ್ನೆಯಲ್ಲಿ ರಾಷ್ಟ್ರಮಟ್ಟದವರೆಗೆ ಆಯ್ಕೆಯಾಗಿ ಯಶಸ್ಸು ಪಡೆದವಳು ನಾಪೋಕ್ಲು ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಪಿ.ಬಿ.ದುಂದುಭಿ. ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತಿರುವ ಈಕೆ ಸುಲಲಿತ ಕನ್ನಡದ ಉತ್ತಮ ನಿರೂಪಕಿ. ಯಾವುದೇ ಕಾರ್ಯಕ್ರಮವಿದ್ದರೂ ಆಕರ್ಷಕ ನಿರೂಪಣೆ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಈಕೆ ಬರಹಗಾರ್ತಿಯೂ ಹೌದು. ದಿವಂಗತ ಮಾಜಿ ಸೈನಿಕ ಪಾಡಿಮಮ್ಮಂಡ ಬೆಳ್ಳಮಯ್ಯ ಹಾಗೂ ಗಾಯತ್ರಿ ಅವರ ಪುತ್ರಿಯಾದರ ಈಕೆ ಎಲ್ಲಾ ವಿಷಯದಲ್ಲೂ ಚುರುಕು. ಇವಳಿಗೆ ಹಾಡುವುದು ನೃತ್ಯ ಚಿತ್ರಕಲೆ ಪುಸ್ತಕಗಳನ್ನು ಓದುವುದೇ ಹವ್ಯಾಸ. ಶಾಲೆಯಲ್ಲೂ ಸದಾ ಸಕ್ರಿಯವಾಗಿರುವ ಇವಳು ಪ್ರತಿಭಾ ಕಾರಂಜಿಯ ವಿವಿಧ ಕಾರ್ಯಕ್ರಮಗಳಾದ ಭರತನಾಟ್ಯ ರಸಪ್ರಶ್ನೆ ರಂಗೋಲಿ ಭಾವಗೀತೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಶಾಲೆಯ ನಾಯಕಿ ಹಾಗೂ ರೋಟರಿ ಇಂಟರಾಕ್ಟ್ ಕ್ಲಬ್‌ನ ಅಧ್ಯಕ್ಷಳೂ ಆಗಿದ್ದಾಳೆ. ಪ್ರತಿಭಾನ್ವಿತೆಯಾಗಿರುವ ಇವಳು ಉತ್ತಮ ವಿದ್ಯಾಭ್ಯಾಸವನ್ನು ಪಡೆದು ಸೇನಾಧಿಕಾರಿಯಾಗುವ ಕನಸನ್ನು ಹೊಂದಿದ್ದಾಳೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.