ADVERTISEMENT

ಸುಂಟಿಕೊಪ್ಪ | ಮಿತಿಮೀರಿದ ಬೀದಿನಾಯಿ ಕಾಟ: ಭಯದಿಂದಲೇ ಓಡಾಡುವಂತಹ ಸ್ಥಿತಿ

ಸುನಿಲ್ ಎಂ.ಎಸ್.
Published 22 ಆಗಸ್ಟ್ 2025, 4:32 IST
Last Updated 22 ಆಗಸ್ಟ್ 2025, 4:32 IST
ಸುಂಟಿಕೊಪ್ಪದಲ್ಲಿ ಮಿತಿಮೀರಿದ ನಾಯಿಗಳ ಹಿಂಡು ಆತಂಕ ಮೂಡಿಸಿದೆ 
ಸುಂಟಿಕೊಪ್ಪದಲ್ಲಿ ಮಿತಿಮೀರಿದ ನಾಯಿಗಳ ಹಿಂಡು ಆತಂಕ ಮೂಡಿಸಿದೆ    

ಸುಂಟಿಕೊಪ್ಪ: ಇಲ್ಲಿನ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರು, ಮಕ್ಕಳು ಭಯದಿಂದಲೇ ಓಡಾಡುವಂತಹ ಸ್ಥಿತಿ ಎದುರಾಗಿದೆ.

ಸುಂಟಿಕೊಪ್ಪ ಪುಟ್ಟ ಪಟ್ಟಣವಾಗಿದ್ದು, ಪಾರ್ಕಿಂಗ್ ವ್ಯವಸ್ಥೆಗೆ ಸಮಸ್ಯೆಯಾಗುತ್ತಿದೆ. ಈ ಸಮಯದಲ್ಲಿ ಎಲ್ಲೆಂದರಲ್ಲಿ ನಾಯಿಗಳ ಗುಂಪು ಎದುರಾಗುತ್ತವೆ. ಗ್ರಾಹಕರು ಅಂಗಡಿಗಳಿಗೆ ಆಗಮಿಸಿದಾಗ ನಾಯಿಗಳು ಕೂಡ ಅವರನ್ನು ಹಿಂಬಾಲಿಸಿ ಭಯವನ್ನು ಉಂಟುಮಾಡುತ್ತಿವೆ.

ಇಲ್ಲಿನ‌ ಗ್ರಾಮ ಪಂಚಾಯಿತಿಗೆ ಸೇರಿದ ಕೋಳಿ, ಕುರಿ, ಮೀನು ಮಳಿಗೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಭಾಗದಲ್ಲಂತೂ ಮಕ್ಕಳು, ಮಹಿಳೆಯರು ಹೋಗಲು ಭಯ ಪಡುವಂತಾಗಿದೆ‌‌.

ADVERTISEMENT

ಇಲ್ಲಿನ ರಾಮ ಬಡಾವಣೆ, ಅಪ್ಪಾರಂಡ, ಅಬ್ದುಲ್ ಕಲಾಂ ಬಡಾವಣೆ ಸೇರಿದಂತೆ ಇತರ ಕಡೆಗಳಲ್ಲಿ ತೆರಳುವ ರಸ್ತೆಯಲ್ಲಿ 20ಕ್ಕೂ ಹೆಚ್ಷು ನಾಯಿಗಳು ಮಲಗುತ್ತಿದ್ದು, ಪ್ರತಿದಿನ ಬೆಳಿಗ್ಗೆ ಮದರಸಗಳಿಗೆ ತೆರಳುವ ಮಕ್ಕಳು, ವಾಯುವಿಹರಕ್ಕೆ ತೆರಳುವ ಸಾರ್ವಜನಿಕರಿಗೆ ಬೊಗಳುತ್ತಾ ದಾಳಿ ಮಾಡುತ್ತಿದ್ದು, ಹೊರಗೆ ಬರಲು ಭಯ ಪಡುವಂತಾಗಿದೆ.

ಬೈಕ್‌, ಸೈಕಲ್, ಆಟೊ– ರಿಕ್ಷಾಗಳು ಸಂಚರಿಸುವ ಸಮಯದಲ್ಲಿ ಹಿಂಭಾಗದಲ್ಲಿಯೇ ಓಡಿ ಬರುತ್ತಿದ್ದು, ಹಲವು ಸವಾರರು ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೇ ನಾಯಿಗಳ ಹಿಂಡು ಕಂಡಾಗ ಪುಟಾಣಿ ಮಕ್ಕಳು ಹೆದರಿ ಓಡುವಂತಹ ಸಂದರ್ಭ ಅವರನ್ನು ಬೆನ್ನಟ್ಟಿ ಗಾಯಗೊಳಿಸಿದ ಉದಾಹರಣೆಗಳು ಬಹಳಷ್ಟು ಇವೆ.

ಕಳೆದ ಐದಾರು ತಿಂಗಳಿನಿಂದ ಸುಂಟಿಕೊಪ್ಪದಲ್ಲಿ ನೂರಾರು ಬೀದಿ ನಾಯಿಗಳು ಬೀಡುಬಿಟ್ಟಿದ್ದು, ರಾತ್ರಿ ವೇಳೆ ಬಡಾವಣೆಯ ಮನೆಗಳ ಮುಂದೆ ಜಗಳವಾಡುವ ನಾಯಿಗಳಿಂದಾಗಿ ಜನರು ಕಿರಿಕಿರಿ ಅನುಭವಿಸುವಂತಾಗಿದೆ. 

ಬೆಳಗಿನ ಸಮಯ ಮತ್ತು ಸಂಜೆಯ ವೇಳೆಯಲ್ಲಿ ಮನೆಗೆ ಬರಲು ಭಯಪಡುವಂತಾಗಿದೆ. ಎಲ್ಲಿ ನಾಯಿಗಳ ಹಿಂಡು ದಾಳಿ ಮಾಡುತ್ತವೋ ಎಂಬ ಆತಂಕ ಎದುರಾಗಿದೆ. ಕೂಡಲೇ ಗ್ರಾಮ ಪಂಚಾಯತಿ ಆಡಳಿತ ಮಂಡಳಿ ತುರ್ತು ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ರಾಮ ಬಡಾವಣೆ ವಿದ್ಯಾರ್ಥಿ ಭುವಿತ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಮಾಂಸ ಮೀನು ಖರೀದಿಸಲು ತೆರಳಿದರೆ ನಾಯಿಗಳು ದುರುಗುಟ್ಟಿ ನಿಲ್ಲುತ್ತವೆ. ಖರೀದಿ ಮಾಡಲು ಭಯಪಡುವಂತಾಗಿದೆ. ಸಂಬಂಧಪಟ್ಟವರು ಕೂಡಲೇ ಗಮನ ಹರಿಸಬೇಕಿದೆ
ಜಿ‌.ವಿ.ಕುಮಾರಿ ಸ್ಥಳೀಯ ನಿವಾಸಿ
ಮಳೆ ಕಡಿಮೆಯಾದ ಕೂಡಲೇ ಕ್ರಮ
ಬೇರೆ ಕಡೆಗಳಿಂದ ತಂದು ಸುಂಟಿಕೊಪ್ಪದಲ್ಲಿ ನಾಯಿಗಳನ್ನು ಬಿಡಲಾಗುತ್ತಿದೆ. ಆ ಕಾರಣದಿಂದ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು ಮಕ್ಕಳ ‌ಮೇಲೆ ದಾಳಿ ನಡೆಸುತ್ತಿರುವುದನ್ನು ಮ‌ನಗಂಡು ನಾಯಿಗಳನ್ನು ಹಿಡಿಯುವ ತಂಡಕ್ಕೆ ಮಾಹಿತಿ ನೀಡಿದ್ದೇವೆ. ಆದರೆ ಮಳೆಗಾಲವಾದ್ದರಿಂದ ಹಿಡಿಯಲು ಸಾದ್ಯವಿಲ್ಲ‌. ಮಳೆ ಕಡಿಮೆಯಾದ ಕೂಡಲೇ ಆಗಮಿಸಲಿದ್ದಾರೆ ಎಂದು ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.