
ಗೋಣಿಕೊಪ್ಪಲು: ‘ವಿದ್ಯಾರ್ಥಿ ದಿಸೆಯಲ್ಲಿ ಸಮಯ ವ್ಯರ್ಥಮಾಡದೆ ಉತ್ತಮವಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು’ ಎಂದು ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.
ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಮ್ಮ ಭವಿಷ್ಯವನ್ನು ರೂಪಿಸುವಂಥ ಶಕ್ತಿ ನಮ್ಮ ಕೈಯಲ್ಲೇ ಇದೆ. ಪೋಷಕರು ಕೂಡ ಮಕ್ಕಳ ಭವಿಷ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು’ ಎಂದರು.
‘ಐಎಎಸ್, ಐಪಿಎಸ್ ಹುದ್ದೆಗಳಿಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಯ್ಕೆ ಆಗುತ್ತಿರುವುದು ಸಂತಸದ ವಿಷಯ, ಇದನ್ನೇ ಸ್ಫರ್ತಿಯಾಗಿಸಿಕೊಂಡು ಶ್ರದ್ಧೆ ಹಾಗೂ ಶ್ರಮಪಟ್ಟು ಓದುವ ಮೂಲಕ ನಿಮ್ಮ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕು’ ಎಂದು ಕರೆ ನೀಡಿದರು.
ಕೇಂದ್ರ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಟಿ.ಜಿ.ಸುರೇಶ್ ಮಾತನಾಡಿ, ‘ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಕ್ರಿಯಾಶೀಲತೆ ಮೈಗೂಡಿಸಿಕೊಳ್ಳಬೇಕು. ಪ್ರತಿನಿತ್ಯ ದಿನಪತ್ರಿಕೆಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ಮಾಡಿಕೊಳ್ಳಬೇಕು’ ಎಂದರು.
ಪ್ರಾಂಶುಪಾಲ ಎಸ್.ಎಸ್.ಮಾದಯ್ಯ ವಾರ್ಷಿಕ ವರದಿ ವಾಚಿಸಿದರು. ಕೊಡಗು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಚಿರಿಯಪಂಡ ಕೆ. ಉತ್ತಪ್ಪ, 2025 ರ ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ, ಮಣಿಪಾಲ್ ಎಂಐಟಿ ಕಾಲೇಜಿನ ಗಣಿತಶಾಸ್ತ್ರ ಪ್ರಾಧ್ಯಾಪಕಿ ಶೋಭಾ ಎ. ಅವರನ್ನು ಸನ್ಮಾನಿಸಲಾಯಿತು.
ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಮಂಡೆಪಂಡ ಸುಗುಣ ಮುತ್ತಣ್ಣ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಸಂಚಾಲಕ ಡಾ. ಲೆಫ್ಟಿನೆಂಟ್ ಎಂ. ಆರ್. ಅಕ್ರಮ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಸಂಘದ ಜಂಟಿ ನಿರ್ದೇಶಕರಾದ ಸಿ.ಎ.ಯತೀನ್ ಬೋಪಯ್ಯ, ಜನನಿ, ಕ್ರೀಡಾ ಕಾರ್ಯದರ್ಶಿ ಪಂಚಮಿ, ಚಿರಾಗ್ ಚಿಣ್ಣಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.