ADVERTISEMENT

ಕೊಡಗು: ಮಳೆಯ ಅಬ್ಬರದ ನಡುವೆ ಹಾನಿಯ ಅಧ್ಯಯನ, ಕೇಂದ್ರ ತಂಡದ ಎದುರು ಬೆಳೆಗಾರರ ಅಳಲು

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2020, 13:13 IST
Last Updated 8 ಸೆಪ್ಟೆಂಬರ್ 2020, 13:13 IST
ಮಳೆಯ ನಡುವೆಯೂ ಹಾನಿಯ ಅಧ್ಯಯನ ನಡೆಸಿದ ಕೇಂದ್ರದ ತಂಡ
ಮಳೆಯ ನಡುವೆಯೂ ಹಾನಿಯ ಅಧ್ಯಯನ ನಡೆಸಿದ ಕೇಂದ್ರದ ತಂಡ   
""
""

ಮಡಿಕೇರಿ: ಕೊಡಗು ಜಿಲ್ಲೆಯ ವಿವಿಧೆಡೆ ಮಂಗಳವಾರ ಸುರಿದ ಭಾರಿ ಮಳೆಯ ನಡುವೆ ಕೇಂದ್ರ ತಂಡವು ಮಳೆ ಹಾಗೂ ಭೂಕುಸಿತದಿಂದ ಉಂಟಾಗಿರುವ ಹಾನಿ ಅಧ್ಯಯನ ನಡೆಸಿತು.

ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದ ಸ್ಥಳಕ್ಕೆ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್‌ ನೇತೃತ್ವದ ತಂಡವು ಬಂದಾಗ ವರುಣ ಅಬ್ಬರಿಸಲು ಆರಂಭಿಸಿತು. ಮಳೆಯಿಂದ ಕೆಲವೇ ನಿಮಿಷಗಳಲ್ಲಿ ಅಧಿಕಾರಿಗಳು ಅಧ್ಯಯನ ಮುಗಿಸಿ, ಕಾರನ್ನೇರಿ ಹೊರಟರು. ಗಜಗಿರಿ ಬೆಟ್ಟ ಕುಸಿತದಿಂದ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್‌ ಸೇರಿ ಐವರು ಮೃತಪಟ್ಟಿದ್ದರು.

ಪುತ್ರಿಯರ ಹುಡುಕಾಟ

ADVERTISEMENT

ಕೇಂದ್ರ ತಂಡವು ಭೇಟಿ ನೀಡಿದ್ದ ವೇಳೆ ನಾರಾಯಣ ಆಚಾರ್‌ ಪುತ್ರಿಯರಾದ ಶಾರದಾ ಆಚಾರ್‌ (ಶೆನೋನ್‌ ಫರ್ನಾಂಡಿಸ್‌) ಹಾಗೂ ನಮಿತಾ ಆಚಾರ್‌ (ನಮಿತಾ ನಝರತ್‌) ಅವರು ತಮ್ಮ ತಂದೆಯ ಮನೆಯಿದ್ದ ಸ್ಥಳದಲ್ಲಿ ಏನೋ ಹುಡುಕಾಟ ನಡೆಸುತ್ತಿದ್ದು ಕಂಡುಬಂತು. ಅಧಿಕಾರಿಗಳು, ಸ್ಥಳಕ್ಕೆ ಬಂದಾಗ ಅವರು ಅಲ್ಲಿಂದ ತೆರಳಿದರು.

ಕಾಫಿ ಬೆಳೆಗಾರರ ಕಣ್ಣೀರು

ತಾಲ್ಲೂಕಿನ ಕಡಗದಾಳು ಸಮೀಪದ ಬೊಟ್ಲಪ್ಪ ಎಂಬಲ್ಲಿ ಭೂಕುಸಿತದಿಂದ ಕಾಫಿ ತೋಟ ನಾಶವಾಗಿತ್ತು. ವೀಕ್ಷಣೆಗೆ ಬಂದ ಅಧಿಕಾರಿಗಳ ಎದುರು, ‘ಕಾಫಿ ಬೆಳೆಗಾರರು ಕಣ್ಣೀರು ಸುರಿಸಿದರು. ಹತ್ತಾರು ವರ್ಷದಿಂದ ಬೆಳೆದಿದ್ದ ಬೆಳೆ, ಆಶ್ರಯವಾಗಿದ್ದ ಕಾಫಿ ತೋಟ ನಾಶವಾಗಿದೆ. ಸೂಕ್ತ ಪರಿಹಾರ ಕೊಡಿಸಿ’ ಎಂದು ಬೆಳೆಗಾರರು ಆಗ್ರಹಿಸಿದರು.

ಚೇರಂಬಾಣೆ, ಕೋರಂಗಾಲ, ಬೇಂಗೂರು ಗ್ರಾಮದಲ್ಲಿ ಅತಿವೃಷ್ಟಿಯಿಂದ ಕಾಳು ಮೆಣಸಿನ ಬೆಳೆಗೂ ಹಾನಿಯಾಗಿದ್ದು, ಅಧಿಕಾರಿಗಳು ವೀಕ್ಷಿಸಿದರು. ಕುಸಿದ ಮನೆಗಳನ್ನು ಪರಿಶೀಲಿಸಿದರು.

‘ರಾಜ್ಯ ಸರ್ಕಾರದ ಮೇರೆಗೆ ಕೇಂದ್ರ ತಂಡವು ಕೊಡಗಿನಲ್ಲಿ ಅಧ್ಯಯನ ನಡೆಸಿದ್ದೇವೆ. ಭೂಕುಸಿತ ಪ್ರದೇಶ ವೀಕ್ಷಣೆ ಮಾಡಿದ್ದೇವೆ. ಬುಧವಾರ ಮಧ್ಯಾಹ್ನ 12.30ಕ್ಕೆ ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್‌. ಅಶೋಕ್‌ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಮತ್ತಷ್ಟು ಮಾಹಿತಿ ಪಡೆಯಲಾಗುವುದು’ ಎಂದು ಅಧ್ಯಯನ ತಂಡದಲ್ಲಿರುವ ಅಧಿಕಾರಿ ಮನೋಜ್‌ ರಂಜನ್‌ ಪ್ರತಿಕ್ರಿಯಿಸಿದರು.

‘ಮಳೆಯಿಂದ ₹ 600 ಕೋಟಿಗೂ ಅಧಿಕ ಪ್ರಮಾಣದ ಹಾನಿ ಸಂಭವಿಸಿದೆ’ ಎಂದು ಜಿಲ್ಲಾಧಿಕಾರಿ ಅನೀಸ್ ಜಾಯ್ ಕಣ್ಮಣಿ ಅವರು ಕೇಂದ್ರ ತಂಡಕ್ಕೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.