ಸುಂಟಿಕೊಪ್ಪ: ಹೋಬಳಿ ವ್ಯಾಪ್ತಿಯಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ, ಗಣೇಶ ಮೂರ್ತಿ ವಿಸರ್ಜನೋತ್ಸವ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು.
ಸಮೀಪದ ಕೊಡಗರಹಳ್ಳಿ ವಿಘ್ನೇಶ್ವರ ಸೇವಾ ಸಂಘದ 7ನೇ ವರ್ಷದ ಗೌರಿ ಗಣೇಶೋತ್ಸವದ ವಿಸರ್ಜನೋತ್ಸವವು ಶುಕ್ರವಾರ ಸಂಜೆ ವಿವಿಧ ಪೂಜಾ ಕೈಂಕರ್ಯದ ನಂತರ ಪ್ರಮುಖ ಬೀದಿಯಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮಂಟಪದಲ್ಲಿ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆ ನಡೆಯಿತು. ರಾತ್ರಿ ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಯಿತು.
ಸುತ್ತಮುತ್ತಲಿನ ನೂರಾರು ಮಂದಿ ಮಳೆಯ ನಡುವೆ ಡಿಜೆ ಹಾಡಿಗೆ ಕುಣಿದು ಕುಪ್ಪಳಿಸಿದರು.
ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಏಳನೇ ಮೈಲಿನಲ್ಲಿರುವ ಮಹಾದೇವ ಈಶ್ವರ ದೇವಾಲಯದಲ್ಲಿ ಬಾಲಕ ಭಕ್ತ ಮಂಡಳಿಯಿಂದ 13ನೇ ವರ್ಷದ ಅಂಗವಾಗಿ ಪ್ರತಿಷ್ಠಾಪಿಸಲಾಗಿದ್ದ ಗೌರಿ ಗಣೇಶ ಉತ್ಸವ ಮೂರ್ತಿಯ ಶೋಭಾಯಾತ್ರೆಯು ಕೆದಕಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯಿತು.
ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಕೂರಿಸಿ ಮೆರವಣಿಗೆ ಮೂಲಕ ಸಾಗಿ ದೇವಾಲಯದ ಬಳಿಯ ಕೆರೆಯಲ್ಲಿ ವಿಸರ್ಜಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.