
ಸುಂಟಿಕೊಪ್ಪ: ಜೇನು ಹುಳುಗಳ ರಕ್ಷಣೆ ಪರಿಸರ ಸಮತೋಲನಕ್ಕೆ ಅಗತ್ಯ. ಇದರಿಂದ ಜೀವ ವೈವಿಧ್ಯ ಸಂರಕ್ಷಣೆ ಆಗಲಿದೆ ಎಂದು ಪೊನ್ನಂಪೇಟೆ ಅರಣ್ಯ ಕಾಲೇಜಿನ ಪ್ರಾಧ್ಯಾಪಕ ಆರ್.ಎನ್.ಕೆಂಚರೆಡ್ಡಿ ಹೇಳಿದರು.
ಸುಂಟಿಕೊಪ್ಪದ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ರೈನ್ ಫಾರೆಸ್ಟ್ ಹಾಗೂ ಬೈಫ್ ಅಭಿವೃದ್ಧಿ ಸಂಶೋಧನಾ ಪ್ರತಿಷ್ಠಾನದ ವತಿಯಿಂದ ಕೃಷಿಕರಿಗೆ ಆಯೋಜಿಸಲಾಗಿದ್ದ ರೈತರಿಗೆ ಸಮಗ್ರ ಹಾಗೂ ಪ್ರಾಯೋಗಿಕ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಜೇನು ಹುಳುಗಳು ಕೇವಲ ಉತ್ಪಾದನೆಗೆ ಮಾತ್ರವಲ್ಲ, ಪರಾಗ ಸಂಚಯ ಹೆಚ್ಚಿಸಿ ಉತ್ಪಾದಕತೆ ಹೆಚ್ಚಿಸುತ್ತವೆ. ಜೇನುಗಾರಿಕೆಯ ಮಹತ್ವ, ಜೇನು ಕುಟುಕುಗಳ ಸಂರಕ್ಷಣೆ, ಜೇನು ಉತ್ಪಾದನೆಯ ತಂತ್ರಜ್ಞಾನ ಮತ್ತು ಮಾರುಕಟ್ಟೆ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಅರಣ್ಯದಿಂದ ಕಾಫಿ, ಮೆಣಸು, ಹಣ್ಣು, ಗಿಡಗಳು ಹಾಗೂ ಅರಣ್ಯ ಮರಗಳ ಸಂಯೋಜಿತ ಕೃಷಿ ಮೂಲಕ ರೈತರಿಗೆ ದೀರ್ಘಕಾಲಿಕ ಆದಾಯಗಳಿಸಬಹುದು ಎಂದು ತಿಳಿಸಿದರು.
ಕಾಫಿ ಬೆಳೆ ನಿರ್ವಹಣೆ ಮತ್ತು ಉತ್ಪಾದಕತೆ ಕುರಿತು ಮಾಹಿತಿ ನೀಡಿದ ಕಾಫಿ ಬೋರ್ಡ್ ಸಂಸ್ಥೆಯ ಡಾ.ಮುಕಾರರಿಬ್, ಕಾಫಿ ಬೆರ್ರಿ ಬೋರರ್ ನಿಯಂತ್ರಣ ಹಾಗೂ ಎಲೆಗಳಿಗೆ ಬಾಧಿಸುವ ಕಾಯಿಲೆಗಳಿಂದ ಸಂರಕ್ಷಿಸುವ ಸಲುವಾಗಿ ಸಸ್ಯ ಸಂರಕ್ಷಣೆ ಕ್ರಮ ಹಾಗೂ ಹವಾಮಾನ ಬದಲಾವಣೆ ಪರಿಣಾಮ ತಡೆಗಟ್ಟುವಲ್ಲಿ ನೆರಳು ಮರಗಳ ಮಹತ್ವದ ಕುರಿತು ತಿಳಿಸಿದರು.
ಕೇಂದ್ರ ಕಾಫಿ ಸಂಶೋಧನಾ ಕೇಂದ್ರ ಚೆಟ್ಟಳ್ಳಿಯ ಮಣ್ಣು ವಿಜ್ಞಾನ ತಜ್ಞ ಡಾ.ಎಸ್.ಎ.ನಡಾಫ್, ಮಣ್ಣಿನ ಆರೋಗ್ಯದ ಕಾರ್ಯಾಗಾರದಲ್ಲಿ ಪಿಎಚ್ ಮಟ್ಟ, ಎನ್‌ಪಿಕೆ ಪ್ರಮಾಣ, ಸೂಕ್ಷ್ಮ ಪೋಷಕಾಂಶಗಳ ಪರೀಕ್ಷೆ ಮಾಡಿಸುವುದು ಮತ್ತು ಮಣ್ಣು ಪರೀಕ್ಷೆಯ ಮಹತ್ವ ಅರಿತುಕೊಳ್ಳಬೇಕು. ಹಸಿರು ಗೊಬ್ಬರ, ಎರೆಹುಳು ಗೊಬ್ಬರ ಬಳಕೆಯಿಂದ ಮಣ್ಣಿನ ಸಮತೋಲನ ಕಾಯ್ದಕೊಳ್ಳಬಹುದು. ಹೊದಿಕೆ ಕೃಷಿಯಿಂದ ಮಣ್ಣಿನ ತೇವಾಂಶ ಉಳಿಸಲು ಸತತ ಕೃಷಿ ವಿಧಾನ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಾಗಾರ ಉದ್ಘಾಟಿಸಿದ ತಾಲ್ಲೂಕು ಪಂಚಾಯಿತಿ ಇಒ ಪರಮೇಶ್, ಇಂತಹ ಸಮಾಲೋಚನಾ ಕಾರ್ಯಾಗಾರಗಳು ರೈತರ ಸಬಲೀಕರಣಕ್ಕೆ ಮಹತ್ತರವಾದ ಅವಕಾಶ ಕಲ್ಪಿಸಿ ಕೊಡುತ್ತದೆ ಎಂದು ಹೇಳಿದರು.
ಅರಣ್ಯ ಅಧಿಕಾರಿಗಳಾದ ಗಣೇಶ್ ಮಡಿಕೇರಿ, ಕೊಟ್ರೇಶ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ವಿ.ಜಿ.ಲೋಕೇಶ್, ಎಚ್.ಪಿ.ರವೀಶ್, ಬೈಫ್ ಸಂಸ್ಥೆಯ ಪ್ರಸನ್ನ ಎಚ್.ಕೆ.ರೇವಣ್ಣ, ಸಿದ್ದಪ್ಪ, ಸಾಗರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.