ಸುಂಟಿಕೊಪ್ಪ: ಇಲ್ಲಿನ ವಿಶ್ವ ಹಿಂದೂ ಪರಿಷತ್ ಮತ್ತು ಗೌರಿ- ಗಣೇಶೋತ್ಸವ ಸಮಿತಿಯಿಂದ 61ನೇ ಗೌರಿ- ಗಣೇಶೋತ್ಸವ ಆ.26ರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವೈದಿಕ ವಿಧಿವಿಧಾನಗಳೊಂದಿಗೆ 11 ದಿನಗಳ ಕಾಲ ನಡೆಯಲಿದೆ.
60 ವರ್ಷಗಳಿಂದ ಒಂದಲ್ಲ ಒಂದು ರೀತಿ ಆಕರ್ಷಣೆ ಮತ್ತು ಅದ್ಧೂರಿತನಕ್ಕೆ ಒತ್ತು ನೀಡುತ್ತಾ ಬಂದಿರುವ ಸಮಿತಿಯ ಯುವಕರು ಈ ಬಾರಿ ಆಚರಣೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಕೊರೊನಾ ಸಮಯದಲ್ಲಿ ಸರಳ ಆಚರಣೆಗೆ ಒತ್ತು ನೀಡಿದ್ದು ಹೊರತುಪಡಿಸಿದರೆ ಉಳಿದ ಎಲ್ಲ ವರ್ಷವು ವೈಭಯುತ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಈ ಹಿಂದೆ ಹಿರಿಯರು ಸಣ್ಣ ಚಪ್ಪರದೊಳಗೆ ಗೌರಿ-ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿ ಉತ್ಸವಕ್ಕೆ ನಾಂದಿ ಹಾಡಿದ್ದರು. ಬಳಿಕ ಪಕ್ಕದ ಕೋದಂಡರಾಮ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ಸಡಗರದಿಂದ ಇಲ್ಲಿಯವರೆಗೆ ಆಚರಿಸಿಕೊಂಡು ಬರಲಾಗುತ್ತಿದೆ. 2018ರಲ್ಲಿ ಭೂಕುಸಿತ, 2019ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದಾಗಿ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಿ ವಿಸರ್ಜನೋತ್ಸವದಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಲಾಗಿತ್ತು.
ಕೊಡಗಿನ ಇತಿಹಾಸದಲ್ಲಿಯೇ ಸುಂಟಿಕೊಪ್ಪದ ಗೌರಿ- ಗಣೇಶ ಉತ್ಸವಕ್ಕೆ ತನ್ನದೇ ಆದ ಪ್ರಾಧಾನ್ಯತೆ ಇದೆ. ಕೋದಂಡರಾಮ ದೇವಾಲಯದಲ್ಲಿ ಪೂಜಾ ಕೈಂಕರ್ಯದಲ್ಲಿ ಕೊಪ್ಪದ ಶ್ರೀನಿವಾಸ್ ಅವರ ತಂಡದ ನಾದಸ್ವರದ ಮೂಲಕ ಪಟ್ಟೆಮನೆ ಅವರ ಕುಟುಂಬಸ್ಥರಿಗೆ ಸೇರಿದ ಗೌರಮ್ಮನ ಬಾವಿಯತ್ತ ಸಾಗಿ ಅಲ್ಲಿಂದ ವಿಶೇಷ ಪೂಜೆಯನ್ನು ನಡೆಸಿ ಗಂಗಾಜಲದೊಂದಿಗೆ, ಮಹಿಳೆಯರು ಕುಂಭಕಳಸ ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಲಂಕೃತ ಮಂಟಪದಲ್ಲಿ ಗೌರಿಯ ಉತ್ಸವ ಮೂರ್ತಿಯ ಮೆರವಣಿಗೆ ಸಾಗಿ ನಂತರ ದೇವಾಲಯದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು.
ಅಂತಿಮ ಹಂತದ ಸಿದ್ಧತೆ:
ಈಗಾಗಲೇ ದೇವಾಲಯದ ಮುಖ್ಯ ರಸ್ತೆಯಲ್ಲಿ ಆಕರ್ಷಕ ಸ್ವಾಗತ ಕಮಾನುಗಳನ್ನು ಅಳವಡಿಸಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಕೇಸರಿ ಬಂಟಿಂಗ್ಸ್, ಬಾವುಟಗಳನ್ನು ಅಳವಡಿಸಲಾಗಿದೆ. ಮಾದಾಪುರ ರಸ್ತೆಯ ಮುಖ್ಯ ರಸ್ತೆಯು ದೇವಾಲಯದವರೆಗೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಸೋಮವಾರ ರಾತ್ರಿಯಿಡೀ ಬಾಳೆ ಕಂಬ, ಮಾವಿನ ಸೊಪ್ಪಿನ ತೋರಣವನ್ನು ಅಳವಡಿಸಲಾಯಿತು.
11 ದಿನಗಳವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಸ್ಪರ್ಧೆಗಳು, ವಿಶೇಷ ಪೂಜೆ ಕೈಂಕರ್ಯ ನಡೆಸಲು ಸಕಲ ಸಿದ್ಧತೆ ಮಾಡಿದ್ದು, ಸೆ.7ರ ಸಂಜೆ 4.30ರ ನಂತರ ವಿವಿಧ ಮನರಂಜನೆ ಕಾರ್ಯಕ್ರಮಗಳೊಂದಿಗೆ ವಿಸರ್ಜನಾ ಮೆರವಣಿಗೆ ನಡೆಯಲಿದೆ.
ಉತ್ತಮ ಕಾರ್ಯಕ್ರಮಗಳೊಂದಿಗೆ ಈ ಬಾರಿ ಹಬ್ಬವನ್ನು ಆಚರಿಲಾಗುವುದು. ಸಾರ್ವಜನಿಕರು ಈ ಎಲ್ಲ ಕಾರ್ಯದಲ್ಲೂ ಭಾಗವಹಿಸಬೇಕು.ನಿಖಿಲ್ ಸುಂಟಿಕೊಪ್ಪ ಗೌರಿ- ಗಣೇಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ
ಈ ಬಾರಿ ವಿವಿಧ ಕಲಾ ತಂಡಗಳ ಆಕರ್ಷಣೀಯ ಮೆರವಣಿಗೆ ನಡೆಯಲಿದೆ. ಆಕರ್ಷಕ ಮಂಟಪದ ವೈಭವ ಈ ಬಾರಿಯ ವಿಸರ್ಜನಾ ಮಹೋತ್ಸವಕ್ಕೆ ಕಳೆ ನೀಡಲಿದೆಬಿ.ಕೆ.ಪ್ರಶಾಂತ್ ಸಮಿತಿಯ ಉಪಾಧ್ಯಕ್ಷ
ಗೌರಿ ಗಣೇಶ ಹಬ್ಬದ ಕಾರ್ಯಕ್ರಮಗಳು
ಆ.26ರಂದು ಬೆಳಿಗ್ಗೆ 8ಕ್ಕೆ ದೇವಾಲಯದಿಂದ ಹೊರಟು ಪಟ್ಟೆಮನೆ ಗೌರಮ್ಮನ ಬಾವಿಯಿಂದ ಗಂಗಾಪೂಜೆ ಮಾಡಿ ಅಲ್ಲಿಂದ ಗೌರಮ್ಮನನ್ನು ಮೆರವಣಿಗೆ ಮೂಲಕ ತಂದು 10.30ಕ್ಕೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗುವುದು. 27ರಂದು ಬೆಳಿಗ್ಗೆ 10.30ಕ್ಕೆ ಗಣಪತಿ ಹೋಮ 11.30ಕ್ಕೆ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ಸೆ.7 ರಂದು ಸಂಜೆ 4.30ರ ನಂತರ ಕೋದಂಡ ರಾಮದೇವಾಲಯದಿಂದ ವಿದ್ಯುತ್ ದೀಪ ಅಲಂಕೃತವಾದ ಭವ್ಯ ಮಂಟಪದೊಂದಿಗೆ ಹೊರಟು ನಾದಸ್ವರ ವಾದ್ಯಗೋಷ್ಠಿ ನಾಸಿಕ್ ಬ್ಯಾಂಡ್ ನಗಾರಿ ಕೇರಳದ ಚಂಡೆ ವಿವಿಧ ಕಲಾ ತಂಡ ಹಾಗೂ ಗಂಭೀರ ಪಟಾಕಿಯೊಂದಿಗೆ ಸುಂಟಿಕೊಪ್ಪ ಪಟ್ಟಣದ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಸಾಗಿ ಗದ್ದೆಹಳ್ಳ ಯಂಕನ ಉಲ್ಲಾಸ್ ಮತ್ತು ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜನೆ ಮಾಡಲಾಗುವುದು. ‘ಪ್ರತಿ ದಿವಸ ಬೆಳಿಗ್ಗೆ 6.30ರಿಂದ ಮಧ್ಯಾಹ್ನ 12ರವರೆಗೆ ಸಂಜೆ 6.30ರಿಂದ ರಾತ್ರಿ 8.30ರವರೆಗೆ ಭಕ್ತರಿಂದ ಪೂಜೆ ದೇವರ ದರ್ಶನ ಇರಲಿದೆ’ ಎಂದು ಹಿರಿಯ ಅರ್ಚಕ ಹಾ.ಮಾ.ಗಣೇಶ ಶರ್ಮಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.