ಸುಂಟಿಕೊಪ್ಪ: 'ಸ್ವಚ್ಛ ಕೊಡಗು', 'ಸುಂದರ ಕೊಡಗು' ಎಂಬ ಧ್ಯೇಯ ವಾಕ್ಯದೊಂದಿಗೆ ಬುಧವಾರ ಜಿಲ್ಲೆಯ ಎಲ್ಲೆಡೆ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದ್ದು, ಸುಂಟಿಕೊಪ್ಪದಲ್ಲೂ ಗ್ರಾಮ ಪಂಚಾಯಿತಿ ಆಡಳಿತದ ನೇತೃತ್ವದಲ್ ಸಂಘಟನೆಗಳು ಸ್ವಚ್ಛತಾ ಕಾರ್ಯ ನಡೆಸಿ, ಕಸವನ್ನು ಅಲ್ಲಲ್ಲಿಯೇ ಬಿಟ್ಟು ಹೋಗಿರುವುದು ಪ್ರಜ್ಞಾವಂತರ ಅಸಮಾಧಾನ ವ್ಯಕ್ತವಾಗಿದೆ.
ಸ್ವಚ್ಛ, ಸುಂದರ ಜಿಲ್ಲೆ ಮಾಡಬೇಕೆನ್ನುವ ಆಕಾಂಕ್ಷೆ ಅನ್ವಯ ಬುಧವಾರ ಸ್ವಚ್ಛತಾ ಅಭಿಯಾನ ಯಶಸ್ವಿಯಾಗಿ ನಡೆಯಿತು. ಹಾಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ, ಹೋಟೆಲ್ ನೀಲ್ ಡೆಲಿಕೆಸಿ, ವಿವಿಧ ಸಂಘ ಸಂಸ್ಥೆಗಳು ಗದ್ದೆಹಳ್ಳದಿಂದ ಪ್ರಾರಂಭಿಸಿ ಅಯ್ಯಪ್ಪ ದೇವಸ್ಥಾನದ ವರೆಗೆ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆಗಳಲ್ಲಿ ಬಿದ್ದಿದ್ದ ತ್ಯಾಜ್ಯ ವಸ್ತು, ಕಸಕಡ್ಡಿ ,ಪ್ಲಾಸ್ಟಿಕ್ ಬಾಟಲಿಗಳನ್ನು ತೆಗೆದು ಟ್ರ್ಯಾಕ್ಟರ್ ಸಾಗಿಸಲಾಗಿತ್ತು.
ಆದರೆ ಸಂಜೆ ವೇಳೆಗೆ ರಾಷ್ಟ್ರೀಯ ಹೆದ್ದಾರಿ ಹಲವು ಕಡೆಗಳಲ್ಲಿ ಎರಡು ಬದಿ ಪ್ಲಾಸ್ಟಿಕ್ ಮತ್ತು ಇತರ ಚೀಲಗಳಲ್ಲಿ ಕಸವನ್ನ ತುಂಬಿಸಿ ತ್ಯಾಜ್ಯ ಘಟಕಕ್ಕೆ ಸಾಗಿಸದೆ ಇಡಲಾಗಿತ್ತು. ಮಾದಾಪುರ ರಸ್ತೆ, ಏಳನೇ ಹೊಸಕೋಟೆ ಮುಂತಾದೆಡೆ ಇಂಥದ್ದೇ ದೃಶ್ಯ ಕಂಡು ಬಂತ್ತು. ಸುಂಟಿಕೊಪ್ಪದಿಂದ ಬಸವನಹಳ್ಳಿವರೆಗೂ ಸ್ವಚ್ಛತಾ ಕಾರ್ಯ ಕೈಗೊಂಡಿರುವ ವಿವಿಧ ಸಂಘಟನೆಗಳು ಸಂಗ್ರಹಿಸಿದ ತ್ಯಾಜ್ಯ ವಸ್ತುಗಳನ್ನು ಸ್ಥಳಾಂತರಿಸದೆ ಅಲ್ಲಲ್ಲಿಯೇ ಇಟ್ಟು ಹೋಗಿರುವುದಕ್ಕೆ ಸ್ಥಳೀಯರು, ಸಾರ್ವಜನಿಕರು ಆಕ್ಷೇಪವ್ಯಕ್ತಪಡಿಸಿದ್ದಾರೆ.
ಇಲ್ಲಿಯ ವಿವಿಧ ಗ್ರಾಮಗಳಲ್ಲಿ ನಡೆಸಿದ ಸ್ವಚ್ಛತಾ ಕಾರ್ಯದಲ್ಲಿ ಸಂಗ್ರಹಿಸಿದ ಕಸ ತುಂಬಿದ ಚೀಲಗಳನ್ನು ಸುಂಟಿಕೊಪ್ಪದ ರಸ್ತೆ ಬದಿಯಲ್ಲಿ ಬಿಟ್ಟು ಹೋಗಿರುವ ಸಂಶಯ ಕೂಡ ವ್ಯಕ್ತವಾಗಿದೆ. ಅಭಿಯಾನಕ್ಕೆ ತದ್ವಿರುದ್ಧವಾಗಿ ಈ ಒಂದು ಅಶುಚಿತ್ವ ನಾಗರಿಕರಲ್ಲಿ ಬೇಸರ ತಂದಿದೆ.
ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಹಲವು ಬಡಾವಣೆಗಳ ಜನರು ಗ್ರಾಮ ಪಂಚಾಯಿತಿಯ ಕಸ ವಿಲೇವಾರಿವಾಹನಕ್ಕೆ ಕಸವನ್ನು ಹಾಕದೆ ಸೆಸ್ಕ್ ಕಚೇರಿ ಪಕ್ಕದ ಚರಂಡಿಯ ಪಕ್ಕ, ಮಾದಾಪುರ ರಸ್ತೆ ಬದಿ , ಪಂಪ ಹೌಸ್ ರಸ್ತೆಯ ಬದಿಗಳಲ್ಲಿ ಹಾಕಿ ಹೋಗಿದ್ದು, ಪ್ರಾಣಿಗಳು ಎಳೆದು ರಸ್ತೆಗೆ ಹಾಕಿ ಚೆಲ್ಲಾಪಿಲ್ಲಿ ಮಾಡಿ, ಗಬ್ಬೆದ್ದು ನಾರುತ್ತಿದೆ. ಪೌರಕಾರ್ಮಿಕರಿಗೆ ತೊಂದರೆಯಾಗುತ್ತಿದೆ ಎಂದು ಪ್ರಯಾಣಿಕರು ದೂರಿದ್ದಾರೆ.
ನಮ್ಮ ಉದ್ದೇಶ ಸ್ವಚ್ಛ ಸುಂಟಿಕೊಪ್ಪ ಆಗಬೇಕೆಂಬುದು. ಜನರು ನಮ್ಮೊಂದಿಗೆ ಸ್ಪಂದಿಸದಿರುವುದು ಬೇಸರ ತಂದಿದೆ.ಪಿ.ಆರ್ ಸುನಿಲ್ ಕುಮಾರ್ ಸುಂಟಿಕೊಪ್ಪ ಪಂಚಾಯಿತಿ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.