
ಮಡಿಕೇರಿ: ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿನ ತಲಕಾವೇರಿಯಲ್ಲಿ ಅಪಾರ ಜನಸ್ತೋಮ ಮೊಳಗಿಸಿದ ಜಯಘೋಷಗಳ ಮಧ್ಯೆ ಪೂರ್ವ ನಿಗದಿಯಂತೆ ಶುಕ್ರವಾರ ಮಧ್ಯಾಹ್ನ 1.44ಕ್ಕೆ ಕಾವೇರಿ ಪವಿತ್ರ ತೀರ್ಥೋದ್ಭವವಾಯಿತೆಂದು ಅರ್ಚಕ ವೃಂದ ತೀರ್ಥ ಪ್ರೋಕ್ಷಣೆ ಮಾಡುತ್ತಿದ್ದಂತೆ ಭಕ್ತರು ಪುಳಕಿತರಾದರು. ಎಲ್ಲಿಲ್ಲದ ಸಡಗರದೊಂದಿಗೆ ಬ್ರಹ್ಮಕುಂಡಿಕೆಯ ಮುಂದಿನ ಕಲ್ಯಾಣಿಯಲ್ಲಿ ಮುಳುಗೆದ್ದು, ತೀರ್ಥ ಪಡೆಯಲು ಮುಗಿ ಬಿದ್ದರು.
ಇದಕ್ಕೂ ಮುನ್ನ ಬೆಳಿಗ್ಗೆಯಿಂದಲೇ ತಲಕಾವೇರಿ ಕ್ಷೇತ್ರದಲ್ಲಿ ಸಂಭ್ರಮ ಮನೆ ಮಾಡಿತು. ಸಾಂಪ್ರದಾಯಿಕ ದಿರಿಸಿನಲ್ಲಿ ಭಕ್ತವೃಂದ ಬೆಟ್ಟಕ್ಕೆ ದೌಡಾಯಿಸಿತು. ಪಾದಯಾತ್ರೆಯಲ್ಲಿ ಹಾಡುಗಳನ್ನು ಹೇಳುತ್ತಾ, ಕಾವೇರಿ ಮಾತೆಯನ್ನು ಸ್ಮರಿಸುತ್ತಾ ಬಿಸಿಲು, ನೆರಳಿನ ಮಧ್ಯೆ ಬೆಟ್ಟ ಹತ್ತಿದರು. ಕಳೆದ ವರ್ಷದಂತೆ ಮಂಜಿನರಾಶಿ ಈ ಬಾರಿ ಕಾಣಸಿಗದೇ ಬಿಸಿಲಿನ ವಾತಾವರಣ ಇದ್ದುದ್ದರಿಂದ ಒಂದು ಬಗೆಯ ಆಹ್ಲಾದಕರ ವಾತಾವರಣಕ್ಕೆ ಭಕ್ತರು ಮನಸೋತರು.
ಬೆಳಿಗ್ಗೆಯೇ ಬ್ರಹ್ಮಕುಂಡಿಕೆಯನ್ನು ವಿವಿಧ ಬಗೆಯ ಹೂಗಳಿಂದ ಅಲಂಕರಿಸಲಾಗಿತ್ತು. ಬೆಳಿಗ್ಗೆ 11.30ಕ್ಕೆ ಅರ್ಚಕ ವೃಂದ ಬ್ರಹ್ಮಕುಂಡಿಕೆಗೆ ನಮಿಸಿ, ಕಲ್ಯಾಣಿಯಲ್ಲಿ ಮುಳುಗಿ, ಮಡಿಯುಟ್ಟು ವಿವಿಧ ಬಗೆಯ ಪೂಜಾಕೈಂಕರ್ಯಕ್ಕೆ ಆರಂಭವಿಸಿದರು. ಮಂತ್ರೋಚ್ಛಾರಣೆಯ ದನಿ ಕೇಳುತ್ತಿದ್ದಂತೆ ಸುತ್ತಲೂ ಇದ್ದ ಭಕ್ತವೃಂದ ಕಲ್ಯಾಣಿಯತ್ತ ದೃಷ್ಟಿನೆಟ್ಟಿತು.
ಅರ್ಚಕರು ಬ್ರಹ್ಮಕುಂಡಿಕೆಯನ್ನು ಮೊದಲಿಗೆ ಹೂಗಳಿಂದ ನಂತರ ಕುಂಕುಮದಿಂದ ಅರ್ಚನೆ ಮಾಡಿದ ಕ್ಷಣಗಳನ್ನು ಭಕ್ತರು ತದೇಕಚಿತ್ತದಿಂದ ವೀಕ್ಷಿಸಿದರು. ಪುರುಷರ ತಂಡ ಸಾಂಪ್ರದಾಯಿಕ ವಾದ್ಯ ಮತ್ತು ಹಾಡಿನೊಂದಿಗೆ ಕಲ್ಯಾಣಿಯ ಒಂದು ಬದಿಯಲ್ಲಿ ನಿಂತರೆ ಮತ್ತೊಂದು ಬದಿಯ ಮೆಟ್ಟಿಲುಗಳ ಮೇಲೆ ಮಹಿಳೆಯರು ದೀಪವಿಡಿದು ಕುಳಿತರು. ಸುತ್ತಲೂ ಸೇರಿದ್ದ ಭಕ್ತಜನ ಜಯಘೋಷ ಮೊಳಗಿಸಲಾರಂಭಿಸಿದರು.
‘ಉಕ್ಕಿ ಬಾ ಕಾವೇರಮ್ಮೆ’ ಮೊದಲಾದ ಘೋಷಣೆಗಳು ಪ್ರತಿಧ್ವನಿಸಿದವು. ಬಿಸಿಲು ವ್ಯಾಪಿಸಿದರೂ ಬಸವಳಿಯದ ಭಕ್ತರು ಜಯಘೋಷ ಮೊಳಗಿಸುತ್ತಲೆ ಇದ್ದರು. ಮಧ್ಯಾಹ್ನ 1 ಗಂಟೆಯ ನಂತರ ಬ್ರಹ್ಮಕುಂಡಿಕೆಯ ಸುತ್ತ ಹೆಚ್ಚಿನ ಸಂಖ್ಯೆಯಲ್ಲಿ ಗಣ್ಯರು ಸೇರಿದರು. ಮಂಗಳಾರತಿ ಬೆಳಗಿದ ಅರ್ಚಕರು ಮಧ್ಯಾಹ್ನ 1.44 ಆಗುತ್ತಿದ್ದಂತೆ ಬ್ರಹ್ಮಕುಂಡಿಕೆಯಿಂದ ತೀರ್ಥವನ್ನು ಸೇರಿದ್ದ ಭಕ್ತರ ಮೇಲೆ ಪ್ರೋಕ್ಷಣೆ ಮಾಡಿದರು. ತೀರ್ಥೋದ್ಭವಾಯಿತೆಂದು ಸುತ್ತಲೂ ಸೇರಿದ್ದ ಜನರು ನಮಿಸಿದರು.
ತೀರ್ಥ ಪಡೆಯಲು ಮುಗಿಬಿದ್ದ ಭಕ್ತರು: ತೀರ್ಥೋದ್ಭವದ ನಂತರ ಹೆಚ್ಚಿನ ಸಂಖ್ಯೆಯಲ್ಲಿ ಜನರು ತೀರ್ಥ ಪಡೆಯಲು ಮುಗಿಬಿದ್ದರು. ಮಹಿಳೆಯರೂ ಸೇರಿದಂತೆ ಹಲವು ಮಂದಿ ಕಲ್ಯಾಣಿಗೆ ಧುಮುಕಿದರು. ಕಲ್ಯಾಣಿಯಲ್ಲೇ ಸಾಗುತ್ತಾ ಬ್ರಹ್ಮಕುಂಡಿಕೆಯತ್ತ ಬಂದು ಕೊಡಗಳು, ಕ್ಯಾನ್‌ಗಳನ್ನು ಹಿಡಿದು ತೀರ್ಥಕ್ಕಾಗಿ ಹಂಬಲಿಸಿದರು. ಪೊಲೀಸರು ಸೇರಿದಂತೆ ಸ್ವಯಂಸೇವಕರಾದಿಯಾಗಿ ಬ್ರಹ್ಮಕುಂಡಿಕೆಯ ಬಳಿ ಇದ್ದವರು ಕುಂಡಿಕೆಯಲ್ಲಿದ್ದ ತೀರ್ಥವನ್ನು ಭಕ್ತಜನರಿಗೆ ನೀಡಿದರು. ಎಲ್ಲ ಕಡೆಯಿಂದಲೂ ಭಕ್ತರು ಕಲ್ಯಾಣಿಗೆ ಇಳಿದಿದ್ದರಿಂದ ಕೆಲಕಾಲ ಜನದಟ್ಟಣೆ ಹೆಚ್ಚಾಗಿತ್ತು.
ಮುಖ್ಯಮಂತ್ರಿಯ ಕಾನೂನು ಸಲಹೆಗಾರರು ಹಾಗೂ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಡಾ.ಮಂತರ್‌ಗೌಡ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ, ವಿಧಾನ ಪರಿಷತ್ ಮಾಜಿ ಸದಸ್ಯ ವೀಣಾ ಅಚ್ಚಯ್ಯ, ಭಾಗಮಂಡಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಕಾಳನ ರವಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲ್ಲೂಕು ಘಟಕದ ಅಧ್ಯಕ್ಷ ಮೋಹನ್ ದಾಸ್, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ, ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಾರಿಕೆ ದಿನೇಶ್ ಕುಮಾರ್, ಉಪ ವಿಭಾಗಾಧಿಕಾರಿ ನಿತಿನ್ ಚಕ್ಕಿ, ತಹಶಿಲ್ದಾರ್ ಶ್ರೀಧರ, ಭಗಂಡೇಶ್ವರ-ತಲಕಾವೇರಿ ದೇವಾಲಯ ಕಾರ್ಯನಿರ್ವಾಹಕ ಚಂದ್ರಶೇಖರ, ತಕ್ಕ ಮುಖ್ಯಸ್ಥರಾದ ಬಳ್ಳಡ್ಕ ಅಪ್ಪಾಜಿ, ಕೋಡಿ ಮೋಟಯ್ಯ ಕಣ್ತುಂಬಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.