ಮಡಿಕೇರಿ: 1820ರಲ್ಲಿ ಕೊಡಗಿನ ರಾಜ 2ನೇ ಲಿಂಗರಾಜ ಒಡೆಯ ಅವರು ಇಲ್ಲಿ ನಿರ್ಮಿಸಿದ್ದ ಓಂಕಾರೇಶ್ವರ ದೇವಾಲಯದಲ್ಲಿ ಸದ್ಯ ಇರುವುದು ಕೇವಲ 22 ಗ್ರಾಂ 100 ಮಿಲಿ ಚಿನ್ನ ಮಾತ್ರ!
ಹಿಂದೂ ಧಾರ್ಮಿಕ ಸಂಸ್ಥೆಗಳು, ಧರ್ಮಾದಾಯ ದತ್ತಿಗಳ ಇಲಾಖೆಗೆ ಸೇರಿದ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಚುಮ್ಮಿ ದೇವಯ್ಯ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
‘2012ರಲ್ಲಿ ಮೌಲ್ಯಮಾಪನ ಮಾಡಿರುವ ಕುರಿತ ದಾಖಲೆ ಇದ್ದರೂ ಸಮರ್ಪಕವಾಗಿಲ್ಲ. ಆದರೆ, ಈಗ ಖಚಿತವಾಗಿ ಸಿಕ್ಕಿದ ಚಿನ್ನಾಭರಣಗಳ ಪಟ್ಟಿ ಬಹಿರಂಗಪಡಿಸಿದ್ದೇವೆ’ ಎಂದರು.
‘ಮೌಲ್ಯಮಾಪಕರ ಮೇಲುಸ್ತುವಾರಿಯಲ್ಲಿ ಪರಿಶೀಲಿಸಿದಾಗ ಚಿನ್ನದೊಂದಿಗೆ 83 ಕೆ.ಜಿ ಬೆಳ್ಳಿ, 40 ಕೆ.ಜಿ. ಹಿತ್ತಾಳೆ, 3 ಕೆ.ಜಿ ಕಂಚು ಪತ್ತೆಯಾಯಿತು. ಸಮೀಪದ ಆಂಜನೇಯ ದೇವಾಲಯದಲ್ಲಿ 1 ಗ್ರಾಂ ಚಿನ್ನ, 29 ಕೆ.ಜಿ ಬೆಳ್ಳಿ, ಕೋಟೆ ಗಣಪತಿ ದೇವಾಲಯದಲ್ಲಿ 120 ಗ್ರಾಂ ಚಿನ್ನ, 10 ಕೆ.ಜಿ ಬೆಳ್ಳಿ ಸಿಕ್ಕಿದೆ’ ಎಂದರು.
ಸಮಿತಿ ಸದಸ್ಯ, ವಕೀಲ ನಿರಂಜನ್, ‘ದೇಗುಲದ ಭೂಮಿ ಸ್ವಾಧೀನಕ್ಕೆ ಲಭ್ಯವಾಗಿಲ್ಲ. ಬಹುತೇಕ ಒತ್ತುವರಿ ಆಗಿದೆ. ಈ ಬಗ್ಗೆ ಕಾನೂನು ಹೋರಾಟ ರೂಪಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.