ಸೋಮವಾರಪೇಟೆ: ಕಾಫಿ ತೋಟಗಳಲ್ಲಿ ನಿಗದಿಗೊಳಿಸಿದ ಸಮಯ ಕೆಲಸ ಮಾಡದೆ, ಹಿಂದಿರುತ್ತಿದ್ದ ಕಾರ್ಮಿಕರ ವಾಹನಗಳನ್ನು ದಾರಿಯಲ್ಲಿ ತಡೆದು, ನಿಯಮದಂತೆ 8 ಗಂಟೆಗಳ ಕಾಲ ಕೆಲಸ ಮಾಡುವಂತೆ ಎಚ್ಚರಿಕೆ ನೀಡಿ ಕಳಿಸಿದ ಘಟನೆ ಬುಧವಾರ ಸಂಜೆ ಹರಗ ಗ್ರಾಮದಲ್ಲಿ ನಡೆದಿದೆ.
ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ನಡುವಿನ ಸಮಯ ಪಾಲನೆ ವಿಷಯಕ್ಕೆ ಸಂಬಂಧಿಸಿದಂತೆ ಹಗ್ಗ ಜಗ್ಗಾಟ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಹರಗ ಗ್ರಾಮದ ಕಾಫಿ ಬೆಳೆಗಾರರು ಒಂದಾಗಿ ಕಾರ್ಮಿಕರನ್ನು ಸಾಗಿಸುತ್ತಿದ್ದ 6 ಪಿಕ್ಅಪ್ ವಾಹನಗಳನ್ನು ತಡೆದರು. ಇಲ್ಲಿ ಕೆಲಸ ಮಾಡಲು ಸೋಮವಾರಪೇಟೆ ಪಟ್ಟಣ, ಗಾಂಧಿ ನಗರ, ಹಾನಗಲ್ಲು ಗ್ರಾಮ, ಬಜೆಗುಂಡಿ, ಚೌಡ್ಲು ಸೇರಿದಂತೆ ಹಲವೆಡೆಗಳಿಂದ ಕಾರ್ಮಿಕರು ತೆರಳುತ್ತಾರೆ.
ಬೆಳಿಗ್ಗೆಯಿಂದ ಸಂಜೆಯವರೆಗೆ ಸರ್ಕಾರ ನಿಗದಿಗೊಳಿಸಿದಂತೆ 8 ಗಂಟೆ ಕಾರ್ಮಿಕರು ಕೆಲಸ ಮಾಡಬೇಕು. ಆದರೆ, ಇಲ್ಲಿಗೆ ಬರುವ ಕಾರ್ಮಿಕರು 6 ಗಂಟೆ ಕೆಲಸ ಮಾಡಿ ಹಿಂದಿರುತ್ತಿದ್ದಾರೆ. ಸಂಬಳ, ವಾಹನ ಬಾಡಿಗೆ ಹಾಗೂ ಮೇಸ್ತ್ರಿ ಕಮಿಷನ್ ನೀಡಲಾಗುತ್ತಿದೆ. ಮೊದಲೇ ಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಹೆಚ್ಚಿನ ನಷ್ಟವಾಗುತ್ತಿದೆ. ಹಲವಾರು ಭಾರಿ ಕಾರ್ಮಿಕರ ಗಮನಕ್ಕೆ ತರಲಾಗಿತ್ತು. ಆದರೂ, ಸಮಯ ಪಾಲನೆ ಮಾಡದ ಹಿನ್ನೆಲೆಯಲ್ಲಿ ಹರಗ ಗ್ರಾಮದಲ್ಲಿ ಸಂಜೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಪಿಕ್ಅಪ್ ಗಳನ್ನು ತಡೆಯಲಾಯಿತು ಎಂದು ಹರಗ ಗ್ರಾಮಾಧ್ಯಕ್ಷ ಬಿ.ಎ. ಧರ್ಮಪ್ಪ ತಿಳಿಸಿದರು.
ಮೊದಲೇ ಸಂಕಷ್ಟದಲ್ಲಿರುವ ಕಾಫಿ ಬೆಳೆಗಾರರಿಗೆ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಹೆಚ್ಚಿನ ಕೂಲಿ ನೀಡಿದರೂ, ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕಾಫಿ ಬೆಳೆಗಾರರು ಮತ್ತು ಕಾರ್ಮಿಕರ ನಡುವೆ ಹೊಂದಾಣಿಕೆ ಇದ್ದಲ್ಲಿ ಮಾತ್ರ ಸರಿಯಾಗಿ ಕೆಲಸ ಮಾಡಲು ಸಾಧ್ಯ. ಆದ್ದರಿಂದ ಕಾರ್ಮಿಕರು ಮುಂದಿನ ದಿನಗಳಲ್ಲಿ ನಿಗದಿತ ಸಮಯ ಕೆಲಸ ಮಾಡುವಂತೆ ಹೇಳಿ ಕಳಿಸಲಾಯಿತು ರಂದು ಹರಗ ಗ್ರಾಮದ ಶರಣ್ ಹೇಳಿದರು.
ಗ್ರಾಮದ ಕಾಫಿ ಬೆಳೆಗಾರರಾದ ಡಾಲಿ ಪ್ರಕಾಶ್, ಬಿ.ಬಿ. ನಾಗೇಶ್, ಶರತ್, ಆದಿತ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.