ಎಚ್ಐವಿ
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ ಎಚ್ಐವಿ ಹಾಗೂ ಏಡ್ಸ್ ಪೀಡಿತರ ಸಂಖ್ಯೆ ಮೂರಂಕಿಯಿಂದ ಎರಡಂಕಿಗೆ ಇಳಿಕೆ ಕಂಡಿದೆ. ಆದಾಗ್ಯೂ, ಪ್ರಸಕ್ತ ಸಾಲಿನಲ್ಲಿ ಕೇವಲ 7 ತಿಂಗಳಲ್ಲಿ 48 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 33 ಮಂದಿ ಮೃತಪಟ್ಟಿದ್ದಾರೆ. 2009ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಒಟ್ಟು 730 ಮಂದಿ ಏಡ್ಸ್‌ನಿಂದ ಅಸುನೀಗಿದ್ದಾರೆ.
2022–23ನೇ ಸಾಲಿನಲ್ಲಿ 117 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಆದರೆ, ಕಳೆದ ಸಾಲಿನಲ್ಲಿ ಅಂದರೆ 2023–24ನೇ ಸಾಲಿನಲ್ಲಿ 94 ಮಂದಿಯಲ್ಲಿ ಸೋಂಕು ಪತ್ತೆಯಾಗಿತ್ತು. ಸೋಂಕಿತರ ಸಂಖ್ಯೆಯಲ್ಲಿ ಒಂದಿಷ್ಟು ಪ್ರಮಾಣದಲ್ಲಿ ಕಡಿಮೆ ಎನಿಸಿದರೂ, ಜನಸಂಖ್ಯೆಯಲ್ಲಿ ಎಚ್ಐವಿ, ಏಡ್ಸ್ ಸೋಂಕಿತ ಸಾಂದ್ರತೆ ಮಾತ್ರ ಕಳೆದ ವರ್ಷದಂತೆಯೇ ಶೇ 0.2ರಷ್ಟಿದೆ.
ಕಳೆದ ಸಾಲಿನಲ್ಲಿ 107 ಮಂದಿ ಮೃತಪಟ್ಟಿದ್ದರೆ, ಈ ವರ್ಷ ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ 33 ಮಂದಿ ಮೃತಪಟ್ಟಿದ್ದಾರೆ. ಆದರೆ, ಇನ್ನೂ 91 ಮಂದಿಯು ವೈದ್ಯರು ಹೇಳುವ ಸೂಚನೆಗಳನ್ನು ತಿರಸ್ಕರಿಸಿದ್ದಾರೆ.
ಮಡಿಕೇರಿಯ ಜಿಲ್ಲಾಸ್ಪತ್ರೆಯಲ್ಲಿ 1 ಎಆರ್‌ಟಿ ಕೇಂದ್ರ ಹಾಗೂ ಗೋಣಿಕೊಪ್ಪಲು, ವಿರಾಜಪೇಟೆ, ಸೋಮವಾರಪೇಟೆ, ಕುಶಾಲನಗರದಲ್ಲಿ ಲಿಂಕ್ ಎಆರ್‌ಟಿ ಕೇಂದ್ರಗಳಿವೆ. ಇಲ್ಲೆಲ್ಲ ಸೋಂಕಿತರಿಗೆ ಉಚಿತ ಸಲಹೆ, ಮಾರ್ಗದರ್ಶನಗಳನ್ನು ನೀಡಲಾಗುತ್ತಿರುವುದು ಮಾತ್ರವಲ್ಲ ಔಷಧಗಳನ್ನೂ ವಿತರಿಸಲಾಗುತ್ತಿದೆ.
‘ಇಲ್ಲಿನ ಎಆರ್‌ಟಿ ಕೇಂದ್ರದಲ್ಲಿ ಒಟ್ಟು 2,670 ಸೋಂಕಿತರು ನೋಂದಾಯಿಸಿಕೊಂಡಿದ್ದರು. ಇವರ ಪೈಕಿ 2,280 ಚಿಕಿತ್ಸೆ ಪಡೆದಿದ್ದಾರೆ. ಸದ್ಯ, 1,048 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 91 ಮಂದಿ ಚಿಕಿತ್ಸೆಯನ್ನು ಅನುಸರಿಸುತ್ತಿಲ್ಲ. 83 ಮಂದಿ ಚಿಕಿತ್ಸೆಯನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳುತ್ತಿಲ್ಲ’ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಆನಂದ್ ತಿಳಿಸಿದರು.
ಜಿಲ್ಲಾಸ್ಪತ್ರೆಯಲ್ಲಿ ಏಡ್ಸ್, ಎಚ್‌ಐವಿ ಪರೀಕ್ಷೆಯನ್ನು ಉಚಿತವಾಗಿ ನಡೆಸಲಾಗುತ್ತಿದೆ. ಎಲ್ಲ ಗರ್ಭಿಣಿಯರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಕಳೆದ ವರ್ಷ ಇಬ್ಬರು ಗರ್ಭಿಣಿಯರಲ್ಲಿ ಸೋಂಕು ಪತ್ತೆಯಾಗಿದ್ದರೆ, ಈ ವರ್ಷ ಒಬ್ಬರಲ್ಲಿ ಪತ್ತೆಯಾಗಿದೆ.
ಜಿಲ್ಲೆಯಲ್ಲಿ ಈವರೆಗೆ ಒಟ್ಟು 55 ಮಕ್ಕಳಲ್ಲಿ ಎಚ್‌ಐವಿ ಸೋಂಕು ಪತ್ತೆಯಾಗಿದ್ದು, ಸದ್ಯ 37 ಮಕ್ಕಳು ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.