ADVERTISEMENT

ಕೊಡಗು: ಜಿಲ್ಲೆಯಲ್ಲಿ ಹೆಚ್ಚುತ್ತಿದೆ ಮಾನಸಿಕ ರೋಗಿಗಳ ಸಂಖ್ಯೆ

ಕೆ.ಎಸ್.ಗಿರೀಶ್
Published 10 ಅಕ್ಟೋಬರ್ 2023, 6:19 IST
Last Updated 10 ಅಕ್ಟೋಬರ್ 2023, 6:19 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಮಡಿಕೇರಿ: ಮಾನಸಿಕ ರೋಗಿಗಳ ಸಂಖ್ಯೆ ಕೊಡಗು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೇವಲ ಹೊರರೋಗಿಗಳು ಮಾತ್ರವಲ್ಲ ಆಸ್ಪತ್ರೆಯಲ್ಲಿ ದಾಖಲಾಗುತ್ತಿರುವ ಒಳ ರೋಗಿಗಳ ಸಂಖ್ಯೆಯೂ ಹೆಚ್ಚುತ್ತಿದೆ.

ಕಳೆದ ವರ್ಷಕ್ಕೂ ಹಿಂದೆ ವರ್ಷಕ್ಕೆ ಸುಮಾರು 500 ಮಂದಿ ಮಾನಸಿಕ ರೋಗಿಗಳು ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಗೆ ಚಿಕಿತ್ಸೆಗೆಂದು ಬರುತ್ತಿದ್ದರು. ಯಾರೊಬ್ಬರೂ ಒಳ ರೋಗಿಗಳಾಗಿ ದಾಖಲಾಗುತ್ತಿರಲೇ ಇಲ್ಲ. ಆದರೆ, ಈ ವರ್ಷ ಹೊರರೋಗಿಗಳ ಸಂಖ್ಯೆ 3,500ರಿಂದ 4 ಸಾವಿರಕ್ಕೆ ಹೆಚ್ಚಾಗಿದ್ದರೆ, ನಿತ್ಯ ಸುಮಾರು ಕನಿಷ್ಠ ಎಂದರೂ 6ರಿಂದ 7 ಮಂದಿ ಒಳ ರೋಗಿಗಳಾಗಿ ದಾಖಲಾಗುತ್ತಿದ್ದಾರೆ.

ADVERTISEMENT

ಇಲ್ಲಿ ಈಗ ತೀವ್ರತರವಾದ ಮಾನಸಿಕ ರೋಗ ಇರುವವರಿಗೆ ಹಾಗೂ ಬುದ್ದಿಮಾಂದ್ಯರಿಗೆ ಅಂಗವಿಕಲರ ವಿಶಿಷ್ಟ ಗುರುತಿನ ಚೀಟಿ (ಯುಡಿಐಡಿ)ಯನ್ನೂ ಅರ್ಹರಿಗೆ ಮಾಡಿಕೊಡಲಾಗುತ್ತಿದೆ. ಈ ಗುರುತಿನ ಚೀಟಿ ಪಡೆದವರಿಗೆ ಮಾಸಿಕ ₹ 400ರಿಂದ ₹ 1,400ರವರೆಗೆ ಪಿಂಚಣಿಯೂ ಸಿಗಲಿದೆ.

ಸದ್ಯ, ಇಲ್ಲಿ ದಿನದ 24 ಗಂಟೆಯೂ ಮಾನಸಿಕ ರೋಗಿಗಳಿಗೆ ಉಚಿತ ಚಿಕಿತ್ಸೆ ಲಭ್ಯವಿದೆ. ಆಪ್ತಸಮಾಲೋಚನೆ, ಮಾತ್ರೆ, ಚುಚ್ಚುಮದ್ದುಗಳ ಜತೆಗೆ ಅತ್ಯಾಧುನಿಕ ಚಿಕಿತ್ಸೆಗಳೂ ಇದೆ. ರೋಗದ ತೀವ್ರತೆ, ರೋಗದ ವಿಧಗಳಿಗೆ ಸಂಬಂಧಿಸಿದಂತೆ ಇಲ್ಲಿರುವ 3 ಮಂದಿ ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.

ಈ ಕುರಿತು ‘ಪ‍್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಆಸ್ಪತ್ರೆಯ ಮಾನಸಿಕ ಆರೋಗ್ಯ ವಿಭಾಗದ ತಜ್ಞವೈದ್ಯ ನಿವೃತ್ತ ಮೇಜರ್ ಡಾ.ಎನ್. ವಿ.ರೂಪೇಶ್ ಗೋಪಾಲ್, ‘ಕೇವಲ ಕೊಡಗು ಜಿಲ್ಲೆ ಮಾತ್ರವಲ್ಲ, ಪಕ್ಕದ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು, ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ದಕ್ಷಿಣಕನ್ನಡದ ಸುಳ್ಯದಿಂದಲೂ ರೋಗಿಗಳು ಆಸ್ಪತ್ರೆಗೆ ಚಿಕಿತ್ಸೆಗಾಗಿ ಬರುತ್ತಿದ್ದಾರೆ. ಎಲ್ಲ ಬಗೆಯ ಚಿಕಿತ್ಸೆಗಳೂ ಇಲ್ಲಿ ಲಭ್ಯವಿದ್ದು, ನಾವು ಯಾವುದೇ ರೋಗಿಗಳನ್ನು ಬೇರೆ ಆಸ್ಪತ್ರೆಗೆ ಕಳುಹಿಸದೇ ಇಲ್ಲಿಯೇ ಚಿಕಿತ್ಸೆ ನೀಡುತ್ತಿದ್ದೇವೆ. ಉಚಿತವಾಗಿ ಔಷಧಗಳನ್ನೂ ವಿತರಿಸುತ್ತಿದ್ದೇವೆ’ ಎಂದು ಹೇಳಿದರು.

ಕೇವಲ ಮಾನಸಿಕ ಸಮಸ್ಯೆಗಳು ಮಾತ್ರವಲ್ಲ, ಮಕ್ಕಳಲ್ಲಿ ಕಂಡು ಬರುವ ಕಲಿಕಾ ನ್ಯೂನತೆಗಳು, ಆಟಿಸಂ ಮೊದಲಾದ ಸಮಸ್ಯೆಗಳಿಗೂ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಯಾವುದೇ ಹಿಂಜರಿಕೆ ಇಲ್ಲದೇ ಉಚಿತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡುತ್ತಾರೆ.

ಇದರೊಂದಿಗೆ ಶಾಲಾ, ಕಾಲೇಜುಗಳಲ್ಲಿ ಮಾದಕ ವಸ್ತುಗಳ ವ್ಯಸನದ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ದುಶ್ಚಟಗಳಿಂದ ದೂರುವಾಗುವಿಕೆ ಕುರಿತು ವಿದ್ಯಾರ್ಥಿಗಳಿಗೆ ತಿಳಿವಳಿಕೆ ನೀಡಲಾಗುತ್ತಿದೆ.

ಮಾನಸಿಕ ಆರೋಗ್ಯದ ಸಲಹೆ ಸಹಾಯವಾಣಿಯಲ್ಲೂ ಲಭ್ಯ

ಕೇಂದ್ರ ಸರ್ಕಾರವು 2022ರ ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿ ‘ಟೆಲಿ ಮನಸ್’ಅನ್ನು ಪ್ರಾರಂಭಿಸಿತು.

14416 ಮತ್ತು 1800-891-4416 ಸಂಖ್ಯೆಗಳಿಗೆ ಕರೆ ಮಾಡಿದರೆ ಹಲವು ಭಾಷೆಗಳಲ್ಲಿ ತರಬೇತಿ ಪಡೆದ ಮತ್ತು ಮಾನ್ಯತೆ ಪಡೆದ ಸಲಹೆಗಾರರ ಸೇವೆಯು ದಿನದ 24 ಗಂಟೆಯೂ ಲಭ್ಯವಿದೆ. ಸದ್ಯ, ಕರ್ನಾಟಕದಲ್ಲಿ ಇಂತಹ 2 ಕೇಂದ್ರಗಳಿದ್ದು, ಮಾನಸಿಕ ಸಮಸ್ಯೆಗಳಿಂದ, ರೋಗಗಳಿಂದ ಬಳಲುತ್ತಿರುವವರಿಗೆ ತಕ್ಷಣದ ಸಾಂತ್ವನದ ನುಡಿಗಳನ್ನು ಹೇಳುವುದು ಮಾತ್ರವಲ್ಲ, ಚಿಕಿತ್ಸೆ ದೊರೆಯುವಂತೆ ಮಾಡುತ್ತಿದೆ.

ಮಾನಸಿಕ ವೈದ್ಯರು ಎಲ್ಲೆಲ್ಲಿ ಲಭ್ಯ?

* ವಿರಾಜಪೇಟೆ ತಾಲ್ಲೂಕು ಆಸ್ಪತ್ರೆಗೆ ತಿಂಗಳ ಮೊದಲ ಮತ್ತು 3ನೇ ಬುಧವಾರ

* ಸೋಮವಾರಪೇಟೆ ತಾಲ್ಲೂಕು ಆಸ್ಪತ್ರೆಗೆ ತಿಂಗಳ ಮೊದಲ ಮತ್ತು 3ನೇ ಮಂಗಳವಾರ

* ಸಿದ್ದಾಪುರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ ಮೊದಲ ಶನಿವಾರ

* ಶನಿವಾರಸಂತೆಯ ಸಮುದಾಯದ ಆರೋಗ್ಯ ಕೇಂದ್ರದಲ್ಲಿ ತಿಂಗಳ 3ನೇ ಶನಿವಾರ

* ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ 2ನೇ ಶುಕ್ರವಾರ

* ಗೋಣಿಕೊಪ್ಪಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ 4ನೇ ಶುಕ್ರವಾರ

* ನಾಪೋಕ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ 2ನೇ ಬುಧವಾರ

* ಕುಟ್ಟ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಿಂಗಳ 4ನೇ ಮಂಗಳವಾರ

* ತಿತಿಮತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಿಂಗಳ 3ನೇ ಸೋಮವಾರ

(ಮಾಹಿತಿ: ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಘಟಕದ ಮನೋವೈದ್ಯ ಡಾ.ಡೇವಿನ್)

ಮಾನಸಿಕ ಸಮಸ್ಯೆ ಹೊಂದಿರುವವರನ್ನು ಕಪ್ಪುಚುಕ್ಕೆಯಂತೆ ನೋಡಬಾರದು. ಹುಚ್ಚರಂತೆ ಭಾವಿಸಬಾರದು. ಎಲ್ಲ ಮಾನಸಿಕ ಸಮಸ್ಯೆಗಳಿಗೂ ಚಿಕಿತ್ಸೆ ಲಭ್ಯವಿದೆ. ಉದಾಸೀನ, ಹೆದರಿಕೆ ಬೇಡ
– ನಿವೃತ್ತ ಮೇಜರ್ ಡಾ.ಎನ್.ವಿ.ರೂಪೇಶ್ ಗೋಪಾಲ್, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆ (ಜಿಲ್ಲಾಸ್ಪತ್ರೆ)
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದಡಿ ಮನೋವೈದ್ಯರು, ಮನಶಾಸ್ತ್ರತಜ್ಞರು, ಮಾನಸಿಕ ಸಮಾಜ ಕಾರ್ಯಕರ್ತರು ಜಿಲ್ಲೆಯ ಎಲ್ಲ ತಾಲ್ಲೂಕು ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿಗದಿತ ದಿನಗಳಂದು ಭೇಟಿ ನೀಡುತ್ತಿದ್ದಾರೆ.
-ಡಾ.ಕೆ.ಎಂ.ಸತೀಶ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.