ಸೋಮವಾರಪೇಟೆ: ‘ಪ್ರಾಚೀನ ಕಾಲದಿಂದಲೂ ಕೊಡವರು ಮತ್ತು ಮೈಸೂರು ರಾಜ ವಂಶಸ್ಥರಿಗೂ ಐತಿಹಾಸಿಕ ಸಂಬಂಧವಿದ್ದು, ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ಆಡಳಿತದ ಅವಧಿಯಲ್ಲಿ ಕತ್ತಲೆಯಲ್ಲಿದ್ದರೂ, ಈಗ ಸಂಬಂಧ ಗಟ್ಟಿಗೊಂಡಿದೆ’ ಎಂದು ಕೊಡಗು-ಮೈಸೂರು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಭಿಪ್ರಾಯಪಟ್ಟರು.
ಕೊಡವ ಸಮಾಜದಲ್ಲಿ ಬುಧವಾರ ನಡೆದ ಸೋಮವಾರಪೇಟೆ ಕೊಡವ ಸಮಾಜದ ಸುವರ್ಣ ಮಹೋತ್ಸವ ಸಮರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಹೈದರಾಲಿ ಮತ್ತು ಟಿಪ್ಪು ಮೈಸೂರು ಸಂಸ್ಥಾನವನ್ನು ಹಿಡಿತಕ್ಕೆ ತೆಗೆದುಕೊಂಡ ಸಂದರ್ಭ, ಕೊಡಗಿನಲ್ಲಿ ಕೊಡವರ ಶೌರ್ಯದಿಂದ ಹೈದರಾಲಿ ಮತ್ತು ಟಿಪ್ಪುವಿನ ಪ್ರಾಬಲ್ಯವನ್ನು ಕುಂಠಿತಗೊಳಿಸಿದ ನಂತರ ಕೊಡಗು ಮೈಸೂರು ಸಂಸ್ಥಾನದ ಸಂಬಂಧ ಹೆಚ್ಚಾಯಿತು’ ಎಂದು ಗತಕಾಲದ ಸಂದರ್ಭವನ್ನು ನೆನಪಿಸಿದರು.
ಕೊಡವರು ಶೌರ್ಯಕ್ಕೆ ಹೆಸರಾಗಿದ್ದು, ರಾಷ್ಟ್ರಕ್ಕಾಗಿ ತಮ್ಮದೇ ಕೊಡುಗೆ ನೀಡಿರುವ ಕೊಡವರ ಸೇವೆ ಮತ್ತು ತ್ಯಾಗ ಸ್ಮರಣೀಯವಾಗಿದೆ. ಅಂತಹ ಸಮಾಜವಿರುವ ನಾಡಿನಲ್ಲಿ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಕ್ಷೇತ್ರ ಹಾಗೂ ಕೊಡವರ ಅಭಿವೃದ್ಧಿ ಕಾಮಗಾರಿಗಳಿಗೆ ಸೂಕ್ತ ಅನುದಾನ ಕಲ್ಪಿಸಲಾಗುವುದು’ ಎಂದು ಭರವಸೆ ನೀಡಿದರು.
ಹೈಕೋರ್ಟ್ ನ್ಯಾಯಮೂರ್ತಿ ಜಸ್ಟಿಸ್ ಚೆಪ್ಪುಡಿರ ಪೂಣಚ್ಚ ಮಾತನಾಡಿ, ‘ಕೊಡವರು ಅತೀ ಕಡಿಮೆ ಸಂಖ್ಯೆಯಲ್ಲಿದ್ದರೂ ಅವರ ಶೌರ್ಯ, ದೇಶಪ್ರೇಮ ಮತ್ತು ಶಿಸ್ತಿನಿಂದ ಹೆಸರು ಇದೆ. ಇತ್ತೀಚಿನ ವರ್ಷಗಳಲ್ಲಿ ವಿವಿಧ ಕ್ಷೇತ್ರಗಳಲ್ಲೂ ಸಾಧನೆ ಮಾಡಿದ್ದಾರೆ. ಚಿಕ್ಕ ಸಮುದಾಯವಾಗಿರುವುದರಿಂದ ತುಂಬ ಎಚ್ಚರಿಕೆಯಿಂದ ಇರಬೇಕು. ತಪ್ಪುಗಳಾಗದಂತೆ ಎಚ್ಚರ ವಹಿಸಬೇಕು. ಹಿರಿಯರ ಮಾರ್ಗದರ್ಶನದಲ್ಲಿ ಯುವ ಸಮುದಾಯ ಸಮಾಜವನ್ನು ಕಟ್ಟುವಲ್ಲಿ ಪ್ರಯತ್ನ ಮುಂದುವರಿಸಬೇಕು’ ಎಂದು ಹೇಳಿದರು.
ವಿರಾಜಪೇಟೆ ಶಾಸಕ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಮಾತನಾಡಿ, ‘ಕೊಡವ ಜನಾಂಗ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿದೆ. ಪೂರ್ವಜರು ಕೊಡವ ಸಂಸ್ಕೃತಿ, ನಾಡನ್ನು ಕಟ್ಟಿ ಬೆಳಸುವುದಕ್ಕೆ ತ್ಯಾಗ ಮಾಡಿದ್ದಾರೆ. ಕೊಡವರ ಜನಸಂಖ್ಯೆ ಕಡಿಮೆಯಾಗುತ್ತಿದೆ. ಸಂಸ್ಕೃತಿ, ಭಾಷೆ ಕಳೆದುಹೋಗಲು ಅವಕಾಶ ಮಾಡಿಕೊಡಬಾರದು. ಕೊಡವರು ರಾಜಕೀಯ ಮರೆತು ಒಗ್ಗಟ್ಟಾಗುವ ಮೂಲಕ, ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕೆಲಸ ಮಾಡಬೇಕು’ ಎಂದರು.
ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಬಿ.ಅಭಿಮನ್ಯು ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ರಾಜ್ಯ ಮುಖ್ಯ ಎಲೆಕ್ಟ್ರಿಕಲ್ ಇನ್ಸ್ ಪೆಕ್ಟರ್ ತೀತಿರ ರೋಷನ್ ಅಪ್ಪಚ್ಚು, ಪದ್ಮಶ್ರೀ ಐಮುಡಿಯಂಡ ರಾಣಿ ಮಾಚಯ್ಯ, ಕೊಡವ ಸಮಾಜದ ಅಧ್ಯಕ್ಷ ಅಭಿಮನ್ಯು ಕುಮಾರ್ ಹಾಗೂ ಆಡಳಿತ ಮಂಡಳಿಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಮಾಜಿ ಸಚಿವ ಮಂಡೇಪಂಡ ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ, ಕರ್ನಲ್ ಮರುವಂಡ ತಿಮ್ಮಯ್ಯ, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ.ಮಹೇಶ್ ನಾಚಯ್ಯ, ಫೆಡರೇಷನ್ ಆಫ್ ಕೊಡವ ಸಮಾಜ ಅಧ್ಯಕ್ಷ ಕಳ್ಳಿಚಂಡ ವಿಷ್ಣುಕಾರ್ಯಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕಲಾವಿದ ಅಧ್ಯಾ ಪೂವಣ್ಣ ಇದ್ದರು.
ಕ್ರೀಡಾ, ಸಾಂಸ್ಕೃತಿಕ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ಸಮಾಜದ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.