ಮಡಿಕೇರಿ: ತಮ್ಮಲ್ಲಿ ವಾಸ್ತವ್ಯ ಹೂಡುವ ಪ್ರವಾಸಿಗರ ಸುರಕ್ಷತೆಯ ಹೊಣೆ ಜಿಲ್ಲೆಯಲ್ಲಿರುವ ಹೋಂಸ್ಟೇ, ರೆಸಾರ್ಟ್ ಹಾಗೂ ವಸತಿ ಸಮುಚ್ಛಯಗಳ ಮಾಲೀಕರದ್ದೇ ಆಗಿದೆ. ಒಂದು ವೇಳೆ ದುರ್ಘಟನೆಗಳು ಸಂಭವಿಸಿದರೆ ಅದಕ್ಕೆ ಅವರೇ ಹೊಣೆಗಾರರಾಗುತ್ತಾರೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದರು.
ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಭದ್ರತೆ ಮತ್ತು ಸುರಕ್ಷತೆ ನಿರ್ವಹಿಸುವ ಕುರಿತು ಜಿಲ್ಲೆಯ ಹೋಟೆಲ್, ರೆಸಾರ್ಟ್, ಹೋಂ-ಸ್ಟೇ ಹಾಗೂ ಟ್ರಾವೆಲ್ಸ್ ಏಜೆನ್ಸಿ ಸಂಸ್ಥೆಯ ಪ್ರತಿನಿಧಿಗಳ ಜತೆ ಬುಧವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸ್ ಹಾಗೂ ಅರಣ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶ, ಹೊರವಲಯ ಅಥವಾ ಅರಣ್ಯ ಪ್ರದೇಶಗಳಲ್ಲಿ ಸಂಭವಿಸುವ ದುರ್ಘಟನೆಗಳಿಗೆ ಆಯಾಯ ಹೋಂ-ಸ್ಟೇ ಮಾಲೀಕರೇ ಜವಾಬ್ದಾರರಾಗುತ್ತಾರೆ ಹಾಗೂ ಕಾನೂನಿನ್ವಯ ಶಿಕ್ಷಾರ್ಹ ಅಪರಾಧಕ್ಕೆ ಒಳಪಡುತ್ತಾರೆ ಎಂದೂ ಎಚ್ಚರಿಕೆ ನೀಡುತ್ತಾರೆ.
ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಹೆಚ್ಚಿನ ದೀಪದ ವ್ಯವಸ್ಥೆ ಮಾಡಬೇಕು. ಸುರಕ್ಷತಾ ಕ್ರಮಗಳನ್ನು ಇನ್ನಷ್ಟು ಹೆಚ್ಚಿಸಬೇಕು ಎಂದು ಸೂಚಿಸಿದರು.
‘ತುರ್ತು ಸಂದರ್ಭದಲ್ಲಿ ಜಿಲ್ಲೆಯ ಪೊಲೀಸ್ ಸಹಾಯವಾಣಿ ಸಂಖ್ಯೆ: 9480804900, ಜಿಲ್ಲೆಯ ವಿಪತ್ತು ನಿರ್ವಹಣಾ ಘಟಕ ಸಂಖ್ಯೆ; 08272-221077 ಸಂಪರ್ಕಿಸಬಹುದು. ಹಾಗೆಯೇ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಅತೀ ಹೆಚ್ಚಿನ ಆದ್ಯತೆ ನೀಡಲೇಬೇಕು ಎಂದು ಅವರು ನಿರ್ದೇಶನ ನೀಡಿದರು.
ಗಡಿ ಪ್ರದೇಶಗಳಾದ ಚೇಲಾವರ, ಇರ್ಪು, ದುಬಾರೆ ಮತ್ತಿತರ ಗಡಿ ಪ್ರದೇಶದಲ್ಲಿ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಹೋಂ-ಸ್ಟೇಗಳಲ್ಲಿ ನಿಯಮ ಬಾಹಿರ ಚಟುವಟಿಕೆಗಳು ಅಥವಾ ಯಾವುದೇ ರೀತಿ ದುರ್ಘಟನೆಗಳು ಸಂಭವಿಸಿದಲ್ಲಿ ಕಾನೂನು ರೀತಿಯ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಇದುವರೆಗೆ ನೋಂದಣಿ ಆಗದಿರುವ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಆಗಬೇಕು ಎಂದು ಹೇಳಿದರು.
ಪ್ರಸ್ತುತ ಹೋಂ-ಸ್ಟೇ ನೋಂದಣಿ ಪ್ರಕ್ರಿಯೆಯು ಅತ್ಯಂತ ಸರಳೀಕರಣವಾಗಿದ್ದು, ಕಡಿಮೆ ಅವಧಿಯಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರಮಾಣ ಪತ್ರ ನೀಡಲಾಗುತ್ತದೆ. ಆ ದಿಸೆಯಲ್ಲಿ ಪ್ರವಾಸೋದ್ಯಮ ಇಲಾಖೆಯಲ್ಲಿ ಜಿಲ್ಲೆಯ ಎಲ್ಲಾ ಹೋಂ-ಸ್ಟೇಗಳು ಕಡ್ಡಾಯವಾಗಿ ಹೆಸರು ನೋಂದಾಯಿಸಬೇಕು ಎಂದರು.
ಪ್ರವಾಸಿ ಸ್ಥಳಗಳಲ್ಲಿ, ಹೋಂಸ್ಟೇ, ಹೋಟೆಲ್‍ಗಳು ಸೇರಿದಂತೆ ಎಲ್ಲೆಡೆ ಸಿಸಿಟಿವಿ ಅಳವಡಿಸುವುದು, ಹೋಂಗಾರ್ಡ್‍ಗಳ ನಿಯೋಜನೆ, ರಾತ್ರಿ ವೇಳೆಯಲ್ಲಿ ಬೆಳಕು ವ್ಯವಸ್ಥೆ ಮಾಡುವುದು ಹೀಗೆ ಹಲವು ರೀತಿಯ ಕ್ರಮಗಳನ್ನು ಕೈಗೊಳ್ಳುವಂತೆ ಅವರು ನಿರ್ದೇಶನ ನೀಡಿದರು.
‘ನೋಂದಣಿ ಆಗದಿರುವ ಹೋಂಸ್ಟೇಗಳು ಕಡ್ಡಾಯವಾಗಿ ನೋಂದಣಿ ಆಗಬೇಕು. ನೋಂದಣಿ ಮಾಡಿಕೊಂಡ ಎಲ್ಲಾ ಹೋಂಸ್ಟೇಗಳ ಮಾಹಿತಿ ಅಂತರ್ಜಾಲದಲ್ಲಿ ದೊರೆಯುವಂತಾಗಬೇಕು. ಆ ನಿಟ್ಟಿನಲ್ಲಿ ಈ ಕೆಲಸ ತುರ್ತಾಗಿ ಆಗಬೇಕಿದೆ ಎಂದರು.’
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಹಶೀಲ್ದಾರರ ನೇತೃತ್ವದಲ್ಲಿ ಸಭೆ ನಡೆಸಿ ವ್ಯಾಪಾರ-ವಹಿವಾಟು ಪರವಾನಗಿ ನೀಡುವಾಗ ಸರ್ಕಾರದ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ನಂತರ ಪರವಾನಗಿ ನೀಡಬೇಕು ಎಂದು ಸೂಚಿಸಿದರು.
ಸ್ಥಳೀಯ ಸಂಸ್ಥೆಗಳು, ಪರವಾನಗಿ ನೀಡುವ ಸಂದರ್ಭದಲ್ಲಿ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದಾರೆಯೇ ಎಂಬುದನ್ನು ಗಮನಿಸಬೇಕು. ಇದರಿಂದ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಒದಗಿಸಲು ಸಾಧ್ಯ ಎಂದು ವೆಂಕಟ್ ರಾಜಾ ಅವರು ಹೇಳಿದರು.
ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕಿ ಅನಿತಾ ಭಾಸ್ಕರ್ ಮಾತನಾಡಿ, ‘ಜಿಲ್ಲೆಯಲ್ಲಿ 3,500ಕ್ಕೂ ಹೆಚ್ಚು ಹೋಂ ಸ್ಟೇಗಳು ಇದ್ದು, ಸದ್ಯ 2,269 ಹೋಂಸ್ಟೇಗಳು ನೋಂದಣಿಯಾಗಿವೆ’ ಎಂದು ಮಾಹಿತಿ ನೀಡಿದರು.
ಹೋಂ ಸ್ಟೇ ಅಸೋಷಿಯೇಷನ್‍ನ ಮೋಂತಿ ಗಣೇಶ್ ಮಾತನಾಡಿ, ‘ಹೋಂಸ್ಟೇಗಳ ನೋಂದಣಿ ಸಂಬಂಧ ಮತ್ತಷ್ಟು ಜಾಗೃತಿ ಮೂಡಿಸಬೇಕು. ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಒತ್ತು ನೀಡುವಲ್ಲಿ ಶ್ರಮಿಸಲಾಗುವುದು’ ಎಂದರು.
ಅಂಬೆಕಲ್ಲು ನವೀನ್ ಮಾತನಾಡಿ, ‘ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಆ ನಿಟ್ಟಿನಲ್ಲಿ ಹೆಚ್ಚಿನ ಅರಿವು ಅಗತ್ಯ ಎಂದರು.
ತಹಶೀಲ್ದಾರರಾದ ಕಿರಣ್ ಗೌರಯ್ಯ, ಪ್ರವೀಣ್ ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್ ಭಾಗವಹಿಸಿದ್ದರು.
ತುರ್ತು ಸಂದರ್ಭದಲ್ಲಿ ಸಂಪರ್ಕಕ್ಕೆ 9480804900, 08272-221077 ಪೂರ್ವಾನುಮತಿ ಪಡೆಯದೇ ನಿರ್ಜನ ಪ್ರದೇಶಕ್ಕೆ ಹೋಗಬಾರದು ಹಲವು ಸೂಚನೆಗಳನ್ನು ನೀಡಿದ ಜಿಲ್ಲಾಧಿಕಾರಿ
* ಹೊರವಲಯಗಳಲ್ಲಿ ಅಥವಾ ನಿರ್ಜನ ಪ್ರದೇಶಗಳಿಗೆ ಪ್ರವಾಸಿಗರನ್ನು ಕರೆದೊಯ್ಯವ ಮುಂಚಿತವಾಗಿ ಸಂಬಂಧಿಸಿದ ಅಧಿಕಾರ ವ್ಯಾಪ್ತಿಯುಳ್ಳ ಪೊಲೀಸ್ ಠಾಣೆಯಲ್ಲಿ ಮಾಹಿತಿಯನ್ನು ನೀಡಿ ಅನುಮತಿ ಪಡೆಯುವುದು ಕಡ್ಡಾಯ
* ಪ್ರವಾಸಿ ತಾಣದ ಸಂಸ್ಕೃತಿ ಸುರಕ್ಷತೆ ಅಪಾಯಗಳು ಮತ್ತು ಕಾನೂನುಗಳನ್ನು ಪ್ರಯಾಣಕ್ಕೆ ಮುನ್ನವೇ ಪ್ರವಾಸಿಗಳಿಗೆ ತಿಳಿಸಬೇಕು
* ಪ್ರಮುಖ ದಾಖಲೆಗಳ ಪ್ರತಿಗಳನ್ನು ಇಟ್ಟುಕೊಳ್ಳಬೇಕು. ವಿಶ್ವಾಸಾರ್ಹ ಟ್ಯಾಕ್ಸಿಗಳು ಅಥವಾ ರೈಡ್ಶೇರ್ ಅಪ್ಲಿಕೇಶನ್‌ಗಳಂತಹ ನೋಂದಾಯಿತ ಸಾರಿಗೆಯನ್ನು ಪ್ರಯಾಣಕ್ಕೆ ಬಳಸಬೇಕು
* ಪ್ರಯಾಣ ಸುರಕ್ಷಿತವಾಗಿರಬೇಕು. ನಿರ್ಜನ ಪ್ರದೇಶ ಕಾಡು ನೀರಿನ ಮೂಲಗಳಲ್ಲಿ ಜಾಗರೂಕರಾಗಿರಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.