
ಕುಶಾಲನಗರ: ಹೆಬ್ಬಾಲೆ ಗ್ರಾಮದಲ್ಲಿ ಗ್ರಾಮ ದೇವತೆ ಬನಶಂಕರಿ ದೇವಿಯ ವಾರ್ಷಿಕ ಜಾತ್ರೋತ್ಸವ ಅಂಗವಾಗಿ ಶನಿವಾರ ಏರ್ಪಡಿಸಿದ್ದ ಗ್ರಾಮೀಣ ಜಾನಪದ ಕ್ರೀಡೆಯಾದ ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆ ಪ್ರೇಕ್ಷಕರ ಮೈನವಿರೇಳಿಸಿತು.
ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಮಾದರಿ ಯುವಕ ಸಂಘ ಬನಶಂಕರಿ ಜಾತ್ರೆ ಅಂಗವಾಗಿ 26ನೇ ವರ್ಷದ ಗಾಡಿ ಓಟದ ಸ್ಪರ್ಧೆಯನ್ನು ಆಯೋಜಿಸಿತ್ತು. ಹೆಬ್ಬಾಲೆಯ ಜನರು ಸೇರಿದಂತೆ ಹಾಸನ, ಮೈಸೂರು, ಚಿಕ್ಕಮಗಳೂರು ಹಾಗೂ ಮಂಡ್ಯ ಜಿಲ್ಲೆಗಳ ಗಡಿ ಭಾಗದ ಜನರೂ ಭಾಗವಹಿಸಿದ್ದು ವಿಶೇಷವೆನಿಸಿತ್ತು. ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 100 ಮೀಟರ್ ದೂರ ನಿಗದಿಪಡಿಸಲಾಗಿತ್ತು.
ಭತ್ತದ ಕೊಯ್ಲು ಆರಂಭಗೊಳ್ಳುತ್ತಿದ್ದಂತೆ ಸುಗ್ಗಿಗೆ ಮುನ್ನ ವರ್ಷಕ್ಕೆ ಒಮ್ಮೆ ಬನಶಂಕರಿ ಹಬ್ಬದ ಅಂಗವಾಗಿ ನಡೆಯುವ ಈ ಸ್ಪರ್ಧೆಯಲ್ಲಿ ಭಾಗವಹಿಸುವ ರೈತರು ಗಾಡಿ ಓಟಕ್ಕೆ ಎತ್ತುಗಳನ್ನು ತಯಾರು ಮಾಡಿ ಗಾಡಿಗಳನ್ನು ಅಣಿಗೊಳಿಸುವುದು ಜಾತ್ರೆಯ ವೈಶಿಷ್ಟ್ಯವಾಗಿದೆ.
ರೋಮಾಂಚನಕಾರಿ ಎತ್ತಿನ ಗಾಡಿ ಸ್ಪರ್ಧೆವೀಕ್ಷಿಸಿಸಲು ಸಾವಿರಾರು ಜನರು ಜಮಾಯಿಸಿದ್ದರು. ಜನಪದ ಕ್ರೀಡೆಗಳಲ್ಲಿ ಒಂದಾದ ಎತ್ತಿನ ಗಾಡಿ ಓಟ ಸ್ಪರ್ಧೆ ಮಧ್ಯಾಹ್ನ 2 ಗಂಟೆಗೆ ಆರಂಭಗೊಂಡಾಗ ಮೈದಾನದ ಇಕ್ಕೆಲಗಳಲ್ಲಿ ನಿಂತಿದ್ದ ಜನರು ಶಿಳ್ಳೆ ಹೊಡೆದು ಹುರಿದುಂಬಿಸುತ್ತಿದ್ದ ದೃಶ್ಯ ಕಂಡು ಬಂತು. ಕ್ರೀಡಾಕೂಟದಲ್ಲಿ ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಸಾಮೂಹಿಕವಾಗಿ ಪಾಲ್ಗೊಂಡಿದ್ದುದು ಕಂಡುಬಂದಿತು.
ಉದ್ಘಾಟನೆ: ಬಹುಮಾನ ವಿತರಣೆ ಜಾತ್ರೆಯ ಅಂಗವಾಗಿ ಏರ್ಪಡಿಸಿದ್ದ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಉದ್ಯಮಿ ಮೋಹನ್ ಲಾಲ್ ಚೌದರಿ ಉದ್ಘಾಟಿಸಿದರು. ಮಾದರಿ ಯುವಕ ಸಂಘದ ಗೌರವಾಧ್ಯಕ್ಷ ಎಚ್.ಎನ್.ರಾಜಶೇಖರ್ ಅಧ್ಯಕ್ಷ ಎಚ್.ಎಚ್.ಧನಂಜಯ ಉಪಾಧ್ಯಕ್ಷ ಎಚ್.ಡಿ.ಪುಟ್ಟರಾಜ ಕಾರ್ಯದರ್ಶಿ ತನುಕುಮಾರ್ ಖಜಾಂಚಿ ಎಚ್.ಸಿ.ಸಂತೋಷ್ (ಪುಟ್ಟ) ಪದಾಧಿಕಾರಿಗಳಾದ ಎಚ್.ಎಸ್.ರಘು ಎಚ್.ಜೆ.ರವಿ ರವೀಂದ್ರ ಬಾಲಾಜಿ ಸುದರ್ಶನ್ ಅಭಿಲಾಷ್ ರಘುಜವರೇಗೌಡ ಬಿ.ಡಿ.ಗಣೇಶ್ ಸಂಜಯ್ ಗುರುಪ್ರಸಾದ್ ಕಿರಣ್ ಚಂದನ್ ಎಚ್.ಆರ್.ಸಂತೋಷ್ ಸತೀಶ್ ಚರಣ್ ದಿನೇಶ್ ಅಕ್ಷಯಕುಮಾರ್ ಪ್ರವೀಣ್ ಎಚ್.ಆರ್.ರಾಜು ಕಿರಣ್ ಲೋಕೇಶ್ ಎಸ್.ಬಸವರಾಜು ಸಲಹೆಗಾರರಾದ ಶಿಕ್ಷಕರಾದ ಎಚ್.ಕೆ.ರಾಜಕುಮಾರ್ ಎಚ್.ಜೆ.ಕುಮಾರ್ ಎಚ್.ಎನ್.ಮಂಜುನಾಥ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಘು ಇದ್ದರು. ಚಕ್ರಕಟ್ಟಿ ಗಾಡಿ ಓಡಿಸುವ ಸ್ಪರ್ಧೆಗೆ 15ಕ್ಕೂ ಹೆಚ್ಚಿನ ಎತ್ತಿನ ಗಾಡಿ ಮಾಲೀಕರು ಪಾಲ್ಗೊಂಡಿದ್ದರು. ಮೊದಲ ಮೂರು ಸ್ಥಾನ ಗಳಿಸಿದ ಎತ್ತಿನ ಗಾಡಿ ಮಾಲೀಕರಿಗೆ ಕ್ರಮವಾಗಿ 5 ಗ್ರಾಂ ಚಿನ್ನ ಹಾಗೂ 3 ಗ್ರಾಂ ಚಿನ್ನ ತೃತೀಯ ಬಹುಮಾನ ₹10 ಸಾವಿರ ನಗದು ಬಹುಮಾನವನ್ನು ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ವಿತರಿಸಲಾಯಿತು. ತೀರ್ಪುಗಾರರಾಗಿ ದೈಹಿಕ ಶಿಕ್ಷಣ ಶಿಕ್ಷಕ ಕರುಂಬಯ್ಯ ಬೋಜೇಗೌಡ ಪ್ರವೀಣ್ ಕಾರ್ಯನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.