ಗೋಣಿಕೊಪ್ಪಲು: ಪೊನ್ನಂಪೇಟೆ ತಾಲ್ಲೂಕಿನ ಹುದಿಕೇರಿ, ಬೆಳ್ಳೂರು, ಟಿ.ಶೆಟ್ಟಿಗೇರಿ, ಹೈಸೊಡ್ಲೂರು, ತಾವಳಗೇರಿ ಮೊದಲಾದ ಭಾಗಗಳಲ್ಲಿ 10 ದಿನಗಳಿಂದ ನಡೆಯುತ್ತಿದ್ದ ಹುಲಿ ಸರೆ ಕಾರ್ಯಾಚರಣೆ ಸ್ಥಗಿತಗೊಂಡಿದೆ.
ಈ ಸಂಬಂಧ ಹುಲಿ ಸೆರೆ ಕಾರ್ಯಾಚರಣೆಗೆ ಬಳಸಿಕೊಂಡಿದ್ದ ಬಳ್ಳೆ ಸಾಕಾನೆ ಶಿಬಿರದ ಮಹೇಂದ್ರ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದ ಭೀಮ ಆನೆಗಳನ್ನು ಹಿಂದಕ್ಕೆ ಕಳಿಸಲಾಗಿದೆ. ಜಾನುವಾರುಗಳನ್ನು ಬಲಿ ತೆಗೆದುಕೊಳ್ಳುತ್ತಿದ್ದ ಹುಲಿ ಸೆರೆ ಕಾರ್ಯಾಚರಣೆಗೆ ಅರಣ್ಯಾಧಿಕಾರಿಗಳು ಎರಡು ಆನೆಗಳನ್ನು ಬಳಸಿಕೊಂಡು ಕೂಂಬಿಂಗ್ ನಡೆಸುತ್ತಿದ್ದರು. ಜಾನುವಾರು ಭಕ್ಷಕ ಹುಲಿ ಹೆಚ್ಚಾಗಿ ಕಾಫಿ ತೋಟದ ಒಳಗೆ ಸುಳಿದಾಡುತ್ತಿದೆ. ಆನೆಗಳನ್ನು ಕಾಫಿ ತೋಟದ ಒಳಗೆ ಬಳಸಿಕೊಂಡರೆ ಕಾಫಿಗೆ ಅಪಾರ ಪ್ರಮಾಣದ ನಷ್ಟವಾಗಲಿದೆ ಎಂದು ಅರಿತು ಆನೆಗಳನ್ನು ಬಳಸಿಕೊಳ್ಳದಿರಲು ನಿರ್ಧರಿಸಲಾಗಿದೆ ಎಂದು ಕಾರ್ಯಾಚರಣೆ ತಂಡದ ಅಧಿಕಾರಿಗಳು ತಿಳಿಸಿದರು.
ಚಾಣಾಕ್ಷ ಹುಲಿ ಕಾಫಿ ತೋಟದ ಒಳಗೆ ನುಸುಳಿ ಬಂದು ಮನೆ ಬಳಿಯ ಕೊಟ್ಟಿಗೆ ಹಾಗೂ ಮೇಯಲು ಬಿಟ್ಟಿದ್ದ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು. ಇದನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆ ಸಿಬ್ಬಂದಿ ಮರದ ಮೇಲೆ ಅಟ್ಟಣಿಗೆ ನಿರ್ಮಿಸಿಕೊಂಡು ಕುಳಿತು ಹುಲಿಯ ಚಲನವಲನ ಗಮನಿಸುತ್ತಿದ್ದರು. ಆದರೂ ಕೂಡ ಹುಲಿಯ ಸುಳಿವು ಸಿಕ್ಕಿಲ್ಲ. ಇದರಿಂದ ಹತ್ತು ದಿನಗಳಿಂದ ನಡೆಸುತ್ತಿದ್ದ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಸುಳಿವು ಕಂಡು ಬಂದರೆ ಸಿಬ್ಬಂದಿ ಸಹಾಯದಿಂದ ಮತ್ತೆ ಕಾರ್ಯಾಚರಣೆ ನಡೆಸಲಾಗುವುದು ಎಂದು ತಿತಿಮತಿ ಎಸಿಎಫ್ ಗೋಪಾಲ್ ಹೇಳಿದರು.
ಪೊನ್ನಂಪೇಟೆ ವಲಯ ಅರಣ್ಯಾಧಿಕಾರಿ ಬಿ.ಎಂ.ಶಂಕರ್, ಉಪವಲಯ ಅರಣ್ಯಾಧಿಕಾರಿ ನಾಗೇಶ್, ಸಂದೇಶ್, ದಿವಾಕರ್, ರಕ್ಷಿತ್, ಭರತ್ ಹಾಗೂ ಆರ್‌ಆರ್‌ಟಿ ತಂಡದ ಸಿಬ್ಬಂದಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.