ADVERTISEMENT

ವಿಡಿಯೊ | ಕೊಡಗಿನಲ್ಲಿ ಆತಂಕ ಸೃಷ್ಟಿಸಿದ್ದ ಹುಲಿಯ ಸೆರೆ 

ಅರಣ್ಯದಂಚಿನ ಗ್ರಾಮದಲ್ಲಿ ಜಾನುವಾರುಗಳ ಮೇಲೆ ನಿರಂತರ ದಾಳಿ ಮಾಡುತ್ತಿದ್ದ ಹುಲಿ

​ಪ್ರಜಾವಾಣಿ ವಾರ್ತೆ
Published 20 ಮೇ 2020, 3:46 IST
Last Updated 20 ಮೇ 2020, 3:46 IST
ಸೆರೆ ಹಿಡಿದ ಹುಲಿ
ಸೆರೆ ಹಿಡಿದ ಹುಲಿ   
""

ಮಡಿಕೇರಿ: ಕೊಡಗು ಜಿಲ್ಲೆಯ ದಕ್ಷಿಣ ಭಾಗದಲ್ಲಿ (ಪೊನ್ನಂಪೇಟೆ – ಗೋಣಿಕೊಪ್ಪಲು) ಆತಂಕ ಸೃಷ್ಟಿಸುತ್ತಿದ್ದ ಹುಲಿಯನ್ನು ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳ್ಳೂರಿನ ಕಾಫಿ ತೋಟದಲ್ಲಿ ಸೆರೆ ಹಿಡಿಯುವಲ್ಲಿಮಂಗಳವಾರ ತಡರಾತ್ರಿ ಅರಣ್ಯ ಇಲಾಖೆ ಸಿಬ್ಬಂದಿಯಶಸ್ವಿ ಆಗಿದ್ದಾರೆ. ಸ್ಥಳೀಯರು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದಾರೆ.

ಅರಣ್ಯದಂಚಿನ ಗ್ರಾಮಗಳ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುಗಳ ಮೇಲೆ ಈ ಹುಲಿ ನಿರಂತರವಾಗಿ ದಾಳಿ ನಡೆಸಿ ಆತಂಕ ಸೃಷ್ಟಿಸಿತ್ತು. ಉಪಟಳ ನೀಡುತ್ತಿದ್ದ ಹುಲಿ ಸೆರೆಗೆ ಗ್ರಾಮಸ್ಥರು ಆಗ್ರಹಿಸಿದ್ದರು.

ವಿರಾಜಪೇಟೆ ತಾಲ್ಲೂಕಿನ ಕುಮಟೂರು, ನಡಿಕೇರಿ, ತೂಚಮಕೇರಿ, ಟಿ.ಶೆಟ್ಟಿಗೇರಿ ಭಾಗಗಳಲ್ಲಿ ಏಪ್ರಿಲ್‌ ಕೊನೆಯಲ್ಲಿ ಹುಲಿ ಸೆರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಬೋನು ಇಟ್ಟಿದ್ದರು. ಆದರೆ, ಹುಲಿ ಸೆರೆ ಸಾಧ್ಯವಾಗಿರಲಿಲ್ಲ. ಕಳೆದ ಇಪ್ಪತ್ತು ದಿನಗಳಿಂದ ಅರಣ್ಯ ಇಲಾಖೆ ಸಿಬ್ಬಂದಿ ಸಾಕಾನೆ ಬಳಸಿಕೊಂಡು ಕಾರ್ಯಾಚರಣೆಗೆ ಮುಂದಾಗಿತ್ತು. ಅದೂ ಫಲಪ್ರದವಾಗಿರಲಿಲ್ಲ.

ADVERTISEMENT

ಮಂಗಳವಾರ ರಾತ್ರಿ ವೇಳೆ ಸ್ಥಳೀಯರು ನೀಡಿದ ಮಾಹಿತಿ ಹಾಗೂ ಅವರ ಸಹಕಾರದಿಂದ ಕಾರ್ಯಾಚರಣೆ ಯಶಸ್ವಿಯಾಗಿದೆ. ಸೆರೆ ಹಿಡಿದ ಹುಲಿಯನ್ನು ಚಿಕಿತ್ಸೆಗೆ ಮೈಸೂರು ಮೃಗಾಲಯಕ್ಕೆ ರವಾನೆ ಮಾಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

‘ವೈಲ್ಡ್‌ಲೈಫ್ ಇನ್‌ಸ್ಟಿಟ್ಯೂಟ್‌ ಆಫ್ ಇಂಡಿಯಾ’ದ ವ್ಯನ್ಯಜೀವಿ ತಜ್ಞ ಡಾ.ಸನತ್ ಅವರ ಮಾರ್ಗದರ್ಶನದಲ್ಲಿ ಹುಲಿ ಸೆರೆ ಕಾರ್ಯಾಚರಣೆ ನಡೆಯುತ್ತಿತ್ತು.

‘ಮತ್ತಿಗೋಡು ಸಾಕಾನೆಗಳನ್ನು ಬಳಸಿಕೊಂಡು, ಇಲಾಖೆಯ 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದೇವೆ. ಹಗಲು ವೇಳೆ ಹುಲಿಯ ಜಾಡು ಪತ್ತೆಯಾಗುತ್ತಿರಲಿಲ್ಲ. ಎರಡು ದಿನಗಳ ಹಿಂದೆ ಕಾರ್ಯಾಚರಣೆಯ ತಂತ್ರ ಬದಲಿಸಿ, ಸಂಜೆಯಾದ ಮೇಲೆ ವೈಜ್ಞಾನಿಕ ಕಾರ್ಯಾಚರಣೆಗೆ ಮುಂದಾಗಿದ್ದೆವು. ಹುಲಿಯ ಇರುವಿಕೆಯನ್ನು ಪತ್ತೆಹಚ್ಚಿ ಅರಿವಳಿಕೆ ಮದ್ದು ನೀಡಿ ಸೆರೆ ಹಿಡಿಯಲು ನಿರ್ಧರಿಸಿದ್ದು ಈ ಕಾರ್ಯಾಚರಣೆಗೆ ಯಶಸ್ಸು ಸಿಕ್ಕಿದೆ’ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ವನ್ಯಜೀವಿ ವಿಭಾಗದ ಎಸಿಎಫ್ ಶ್ರೀಪತಿ, ವಿರಾಜಪೇಟೆ ಡಿಎಫ್‍ಒ (ಪ್ರಭಾರ) ರೋಶನಿ, ಪೊನ್ನಂಪೇಟೆ ಆರ್‍ಎಫ್‍ಒ ತೀರ್ಥ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹುಲಿಯನ್ನು ಸೆರೆಹಿಡಿಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.