ADVERTISEMENT

ಹುಲಿ ಪ್ರತ್ಯಕ್ಷ: ಸೆರೆ ಹಿಡಿಯಲು ಒತ್ತಾಯ, ಭೀತಿಯಲ್ಲಿ ಸ್ಥಳೀಯರು

ಕಾರ್ಮಿಕರಲ್ಲಿ ಹೆಚ್ಚಿದ ಆತಂಕ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 15:29 IST
Last Updated 27 ಜನವರಿ 2022, 15:29 IST
ಮಾರ್ಗೋಲ್ಲಿಯ ಕಾಫಿತೋಟದಲ್ಲಿ ಕಾಣಿಸಿಕೊಂಡ ಹುಲಿ
ಮಾರ್ಗೋಲ್ಲಿಯ ಕಾಫಿತೋಟದಲ್ಲಿ ಕಾಣಿಸಿಕೊಂಡ ಹುಲಿ   

ಸಿದ್ದಾಪುರ: ಹಾಡಹಗಲೇ ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿರುವ ಘಟನೆ ಸಮೀಪದ ಮಾರ್ಗೋಲ್ಲಿಯ ಕಾಫಿತೋಟದಲ್ಲಿ ನಡೆದಿದೆ.
ಮಾರ್ಗೋಲ್ಲಿ ಕಾಫಿ ತೋಟದಲ್ಲಿ ಕಾಫಿ ಕೊಯ್ಲು ನಡೆಯುತ್ತಿದ್ದು, ಕಾಫಿ ಸಾಗಿಸುವ ಜೀಪ್‌ನಲ್ಲಿ ಕಾರ್ಮಿಕರು ತೆರಳುತ್ತಿರುವ ಸಂದರ್ಭ ತೋಟದ ರಸ್ತೆಯ ಬದಿಯಲ್ಲಿ ಹುಲಿ ಕಾಣಿಸಿಕೊಂಡಿದೆ.

ಜೀಪ್‌ನಲ್ಲಿ ಇದ್ದ ಕಾರ್ಮಿಕರೊಬ್ಬರು ಹುಲಿಯ ಚಿತ್ರವನ್ನು ಸೆರೆಹಿಡಿದಿದ್ದಾರೆ. ದೊಡ್ಡ ಹುಲಿಯಾಗಿದ್ದು, ಹುಲಿಯು ದಷ್ಟಪುಷ್ಟವಾಗಿದೆ. ಜೀಪ್ ಅನ್ನು ಕಂಡರೂ ಕೂಡ ಹುಲಿಯು ರಸ್ತೆಯಲ್ಲಿ ರಾಜಾರೋಷದಿಂದ ನಡೆದಿದೆ. ಹುಲಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತೋಟದ ಕಾರ್ಮಿಕರು ಕೆಲಸ ನಿಲ್ಲಿಸಿದ್ದು, ಮನೆಗಳಿಗೆ ಹಿಂತಿರುಗಿದ್ದಾರೆ. ಹುಲಿಯನ್ನು ಸೆರೆಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಾಲ್ದಾರೆ ವ್ಯಾಪ್ತಿಯಲ್ಲಿ ಹುಲಿ ಆಗಿಂದಾಗೆ ಪ್ರತ್ಯಕ್ಷಗೊಳ್ಳುತ್ತಿದ್ದು, ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ. ಇದೀಗ ಹಾಡ ಹಗಲೇ ಕಾಫಿ ತೋಟದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಸ್ಥಳೀಯರು ಭಯಭೀತರಾಗಿದ್ದಾರೆ. ಇತ್ತೀಚೆಗೆ ಮಾಲ್ದಾರೆಯ ಮುಖ್ಯ ರಸ್ತೆಯ ಆನೆ ಕಂದಕದ ಬಳಿಯಲ್ಲಿ ಹುಲಿ ಕಾಣಿಸಿಕೊಂಡಿತ್ತು.

ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ: ಮಾರ್ಗೋಲ್ಲಿ ಕಾಫಿ ತೋಟದಲ್ಲಿ ಹುಲಿ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಹುಲಿಯು ಬಿ.ಬಿ.ಟಿ.ಸಿ ಸಂಸ್ಥೆಯ ಕಡೆ ತೆರಳಿರುವ ಸಾಧ್ಯತೆ ಇದ್ದು, ಹುಲಿಯನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ. ಗಂಡು ಹುಲಿಯಾಗಿದ್ದು, ಹುಲಿ ಸುಮಾರು 5-6 ವರ್ಷ ಪ್ರಾಯ ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಕಾರ್ಯಾಚರಣೆಯಲ್ಲಿ ಆರ್.ಎಫ್.ಓ ಅಶೋಕ್ ಪಿ ಹನಗುಂದ್, ಡಿ.ಆರ್.ಎಫ್.ಓ ಶ್ರೀನಿವಾಸ್, ಆರ್.ಆರ್.ಟಿ ತಂಡದ ಗುರು, ಭರತ್, ಶಂಕರ್, ರೋಹಿತ್ ಕುಮಾರ್, ರೋಶನ್, ಸುಂದರ್, ತೀರ್ಥಕುಮಾರ್, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT