ADVERTISEMENT

ಸಾಲು ಸಾಲು ರಜೆ; ಕೊಡಗಿನತ್ತ ಪ್ರವಾಸಿಗರು

ಕೋವಿಡ್‌ ಲೆಕ್ಕಿಸದೇ ಬಂದ ಪ್ರವಾಸಿಗರು, ಪ್ರವಾಸಿ ತಾಣಗಳಲ್ಲಿ ದಟ್ಟಣೆ

ಅದಿತ್ಯ ಕೆ.ಎ.
Published 30 ಅಕ್ಟೋಬರ್ 2020, 19:30 IST
Last Updated 30 ಅಕ್ಟೋಬರ್ 2020, 19:30 IST
ರಾಜಾಸೀಟ್‌ನಲ್ಲಿ ಶುಕ್ರವಾರ ಕಂಡುಬಂದ ಪ್ರವಾಸಿಗರು
ರಾಜಾಸೀಟ್‌ನಲ್ಲಿ ಶುಕ್ರವಾರ ಕಂಡುಬಂದ ಪ್ರವಾಸಿಗರು   

ಮಡಿಕೇರಿ: ಶುಕ್ರವಾರ ಈದ್‌ ಮಿಲಾದ್‌, ಶನಿವಾರ ವಾಲ್ಮೀಕಿ ಜಯಂತಿ, ಭಾನುವಾರ ಕನ್ನಡ ರಾಜ್ಯೋತ್ಸವ... ಹೀಗೆ ಉದ್ಯೋಗಸ್ಥರಿಗೆ ಸಾಲು ಸಾಲು ರಜೆಯ ಸಮಯ. ಲಾಕ್‌ಡೌನ್‌, ಕೊರೊನಾ ಆತಂಕದ ನಡುವೆ ಮನೆಯಲ್ಲಿಯೇ ಉಳಿದಿದ್ದ ಜನರು ಹೊರ ಬರುವ ಮನಸ್ಸು ಮಾಡುತ್ತಿದ್ದಾರೆ. ಈ ವಾರದ ರಜೆ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದಾರೆ.

ಶುಕ್ರವಾರ ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳಲ್ಲಿ ಹೆಚ್ಚಿನ ಪ್ರವಾಸಿಗರು ಕಂಡುಬಂದರು. ಅದರಲ್ಲೂ ರಾಜಾಸೀಟ್‌ ಬಳಿ ಉದ್ದನೆಯ ಸಾಲಿತ್ತು. ರಾಜಾಸೀಟ್‌ ನೋಡಿ ಪ್ರವಾಸಿಗರು ಆನಂದಿಸಿದರು. ಜೊತೆಗೆ, ದುಬಾರೆಗೂ ತೆರಳಿ ದಸರಾದಿಂದ ವಾಪಸ್‌ ಆಗಿರುವ ಆನೆಗಳನ್ನು ವೀಕ್ಷಿಸಿದರು. ಕುಶಾಲನಗರದ ನಿಸರ್ಗಧಾಮಕ್ಕೂ ತೆರಳಿ ಪ್ರವಾಸಿಗರು ಸಂಭ್ರಮಿಸಿದರು.

ದಸರಾಕ್ಕೆ ನಿರ್ಬಂಧ:
ಪ್ರತಿವರ್ಷ ಮಡಿಕೇರಿ ದಸರಾಕ್ಕೆ ಸಾವಿರಾರು ಪ್ರವಾಸಿಗರು ಆಗಮಿಸಿ, ಶೋಭಾಯಾತ್ರೆ ಕಣ್ತುಂಬಿಕೊಳ್ಳುತ್ತಿದ್ದರು. ಆದರೆ, ಕೋವಿಡ್–19 ಕಾರಣಕ್ಕೆ ಈ ವರ್ಷ ಸರಳವಾಗಿ ದಸರಾ ಆಚರಿಸಲಾಗಿತ್ತು. ಪ್ರವಾಸಿಗರಿಗೂ ನಿರ್ಬಂಧವಿತ್ತು. ಹೀಗಾಗಿ, ಪ್ರವಾಸಿಗರೂ ಜಿಲ್ಲೆಯತ್ತ ಬರುವ ಮನಸ್ಸು ಮಾಡಿರಲಿಲ್ಲ. ಜೊತೆಗೆ, ಮಡಿಕೇರಿ ಸುತ್ತಮುತ್ತಲ ಪ್ರವಾಸಿ ತಾಣವನ್ನೂ ವಿಜಯದಶಮಿಯಂದು ಬಂದ್‌ ಮಾಡಲಾಗಿತ್ತು. ಇದರಿಂದ ಬಂದವರೂ ನಿರಾಸೆಗೆ ಒಳಗಾಗಿದ್ದರು. ಜಿಲ್ಲೆಗೆ ಪ್ರವಾಸಿಗರು ಬರಲು ಆರಂಭಿಸಿದ್ದಾರೆ.

ADVERTISEMENT

ವಾರಾಂತ್ಯದಲ್ಲಿ ಹೆಚ್ಚಳ:
ಒಂದು ತಿಂಗಳಿಂದ ಈಚೆಗೆ ವಾರಾಂತ್ಯದಲ್ಲಿ ಬರುವ ಪ್ರವಾಸಿಗರ ಸಂಖ್ಯೆಯಲ್ಲೂ ಏರಿಕೆ ಕಂಡುಬಂದಿದೆ. ಕೊರೊನಾ ಭಯದಿಂದ ಮನೆಯಲ್ಲಿ ಜನರಿದ್ದು ಬೇಸತ್ತಿದ್ದರು. ಎಲ್ಲಿಯೂ ಓಡಾಟ ನಡೆಸಲು ಸಾಧ್ಯವಾಗಿರಲಿಲ್ಲ. ಜೊತೆಗೆ, ಲಾಕ್‌ಡೌನ್‌ನಿಂದ ಹಣಕಾಸಿನ ತೊಂದರೆಯಿತ್ತು. ಇದೀಗ ಪರಿಸ್ಥಿತಿ ಸುಧಾರಣೆಯ ಹಾದಿಯಲ್ಲಿದ್ದು ಜಿಲ್ಲೆಯತ್ತ ಜನರು ಬರಲು ಆರಂಭಿಸಿದ್ದಾರೆ.

ಕೊಠಡಿ ಬುಕ್ಕಿಂಗ್‌:
ಆರಂಭಿಕ ದಿನಗಳಲ್ಲಿ ಪ್ರವಾಸಿಗರು ಬಂದರೂ ಹೋಂಸ್ಟೇ, ರೆಸಾರ್ಟ್‌, ಲಾಡ್ಜ್‌ಗಳಲ್ಲಿ ವಾಸ್ತವ್ಯ ಮಾಡುತ್ತಿರಲಿಲ್ಲ. ಇದೀಗ ಧೈರ್ಯದಿಂದ ಅಲ್ಲಿ ಉಳಿದುಕೊಳ್ಳುತ್ತಿದ್ದಾರೆ. ಮುಂಗಡವಾಗಿ ಕೊಠಡಿಗಳನ್ನೂ ಕಾಯ್ದಿರಿಸುತ್ತಿದ್ದಾರೆ ಎಂದು ಪ್ರವಾಸಿ ಏಜೆಂಟ್‌ ನಾಗೇಂದ್ರ ಹೇಳುತ್ತಾರೆ.

ಪ್ರವಾಸಿಗರಿಂದ ದೂರವೇ ಉಳಿದ ‘ಮಾಂದಲ್‌ಪಟ್ಟಿ’
ಜಿಲ್ಲೆಯ ಬಹುತೇಕ ಪ್ರವಾಸಿ ತಾಣಗಳು ಪ್ರವೇಶಕ್ಕೆ ಮುಕ್ತವಾಗಿವೆ. ಆದರೆ, ಯುವಕರ ನೆಚ್ಚಿನ ತಾಣ ಮಾಂದಲ್‌ಪಟ್ಟಿ ಇನ್ನೂ ಪ್ರವೇಶಕ್ಕೆ ಮುಕ್ತವಾಗಿಲ್ಲ. ಮಾಂದಲ್‌ಪಟ್ಟಿಗೆ ಮುಂದಿನ ಶನಿವಾರದಿಂದ ಪ್ರವೇಶಕ್ಕೆ ಅವಕಾಶವಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ರಾಘವೇಂದ್ರ ತಿಳಿಸಿದ್ದಾರೆ.
ಯುವ ಜೋಡಿಗಳು, ಪ್ರೇಮಿಗಳ ನೆಚ್ಚಿನ ತಾಣ ಮಾಂದಲ್‌ಪಟ್ಟಿ. ಜೊತೆಗೆ, ಜೀಪು ಚಾಲಕರಿಗೂ ಇದು ಆದಾಯ ಮೂಲವಾಗಿತ್ತು. ಅಲ್ಲಿಗೆ ತೆರಳುವವರು ಜೀಪು ಮೂಲಕವೇ ತೆರಳುವುದು ಅನಿವಾರ್ಯವಾಗಿತ್ತು. ಅದೇ ಕಾರಣಕ್ಕೆ ಸದ್ಯಕ್ಕೆ ನಿರ್ಬಂಧ ವಿಧಿಸಲಾಗಿದೆ. ಕೊರೊನಾ ಪ್ರಕರಣಗಳು ಸದ್ಯಕ್ಕೆ ಕಡಿಮೆಯಾಗುತ್ತಿದ್ದು, ಮಾಂದಲ್‌ಪಟ್ಟಿ ತೆರೆಯಲು ನಿರ್ಧಾರ ಕೈಗೊಳ್ಳಲಾಗಿದೆ.

ಮಂಜಿನ ಲೀಲೆ
ಮಡಿಕೇರಿಗೆ ಚಳಿ ಲಗ್ಗೆಯಿಟ್ಟಿದ್ದು, ಮಂಜಿನ ಹನಿಯ ಲೀಲೆ ಪ್ರವಾಸಿಗರನ್ನು ಸೆಳೆಯುತ್ತಿದೆ. ತೋಟಗಳ ನಡುವೆ ಹಲವು ಹೋಂ ಸ್ಟೇಗಳಿದ್ದು, ಅಲ್ಲಿಯೂ ಮಂಜಿನಾಟದ ಮೋಡಿಗೆ ಪ್ರವಾಸಿಗರು ಮನಸೋಲುತ್ತಿದ್ದಾರೆ. ನವೆಂಬರ್‌, ಡಿಸೆಂಬರ್‌ನಲ್ಲಿ ರಾಜಾಸೀಟ್‌ನಲ್ಲಿ ಕುಳಿತು ಸೂರ್ಯಾಸ್ತ ಸೊಬಗು ಕಣ್ತುಂಬಿಕೊಳ್ಳುವವರ ಸಂಖ್ಯೆ ಹೆಚ್ಚು. ಶುಕ್ರವಾರವೂ ರಾಜಾಸೀಟ್‌ನ ವೀಕ್ಷಣಾ ಸ್ಥಳದಲ್ಲಿ ನೂರಾರು ಪ್ರವಾಸಿಗರು ಕುಳಿತು ಪ್ರಕೃತಿಯ ಸಿರಿ ಸವಿದರು.

ಪ್ರವಾಸಿಗರು ಜಿಲ್ಲೆಯತ್ತ ಬರಲು ಆರಂಭಿಸಿದ್ದಾರೆ. ಪ್ರವಾಸಿ ತಾಣಗಳಲ್ಲಿ ಸಾಕಷ್ಟು ಸುರಕ್ಷತಾ ಕ್ರಮ ಸಹ ಕೈಗೊಳ್ಳಲಾಗಿದೆ
ರಾಘವೇಂದ್ರ, ಸಹಾಯಕ ನಿರ್ದೇಶಕ, ಪ್ರವಾಸೋದ್ಯಮ ಇಲಾಖೆ

ಕೊಡಗು ಹಸಿರಿನಿಂದ ಕೂಡಿದೆ. ಮಡಿಕೇರಿಯಲ್ಲಿರುವ ಗಿರಿಶ್ರೇಣಿ ನೋಡಿದರೆ ಏನೋ ಆನಂದ, ಮನಸ್ಸಿಗೆ ಉಲ್ಲಾಸ. ನೋವು ಮರೆಯಾಗಲಿದೆ
ನೀಲೇಶ್‌, ಪ್ರವಾಸಿಗ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.