ಸುಂಟಿಕೊಪ್ಪ ಸಮೀಪದ ಗದ್ದೆಹಳ್ಳದ ವೈ.ಯಂ.ಕರುಂಬಯ್ಯ ಅವರ ಗದ್ದೆಯಲ್ಲಿ ನಡೆದ ಪುರುಷರ ಹಗ್ಗಜಗ್ಗಾಟ ಸ್ಪರ್ಧೆ
ಸುಂಟಿಕೊಪ್ಪ: ಸಮೀಪದ ಗದ್ದೆಹಳ್ಳದಲ್ಲಿ ಭಾನುವಾರ ನಡೆದ ಕೆಸರುಗದ್ದೆ ಆಟೋಟ ಸ್ಪರ್ಧೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ರಂಜಿಸಿದರು.
ಗದ್ದೆಹಳ್ಳದ ವೈ.ಎಂ.ಕರುಂಬಯ್ಯ ಅವರ ಕೆಸರು ಗದ್ದೆಯಲ್ಲಿ ಇದೇ ಮೊದಲ ಬಾರಿಗೆ ಸುಂಟಿಕೊಪ್ಪ ಹಾಗೂ ಗದ್ದೆಹಳ್ಳ ವ್ಯಾಪ್ತಿಯ ಗ್ರಾಮದ ಸಾರ್ವಜನಿಕರಿಗಾಗಿ ‘ಗದ್ದೆಹಳ್ಳದಲ್ಲಿ ಗದ್ದೆ ಆಟ’ ಎಂಬ ಶೀರ್ಷಿಕೆಯಡಿಯಲ್ಲಿ ನಡೆದ ಸಾಂಪ್ರದಾಯಿಕ ಕ್ರೀಡೆ- ಆಟಿ 18ರ ಆಚರಣೆಯಲ್ಲಿ ಭಾಗವಹಿಸಿ ಹರ್ಷಿತರಾದರು.
ಪುರುಷರು ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ, ಎಲ್ಲ ವಯೋಮಾನದವರಿಗೆ ಓಟ, ಪುರುಷರು ಮತ್ತು ಮಕ್ಕಳಿಗೆ ಟೀಮ್ ರಿಲೇ ಮತ್ತು ಫ್ಯಾಮಿಲಿ ಗೇಮ್ಸ್ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಮಂಡಿವರೆಗೂ ಕೆಸರಿನಿಂದ ಕೂಡಿದ್ದ ಗದ್ದೆ ನೀರಿನಲ್ಲಿ ಮಹಿಳೆಯರು ಮತ್ತು ಪುರುಷರ ಹಗ್ಗಜಗ್ಗಾಟ ಸ್ಪರ್ಧೆ ಮನಮೋಹಕವಾಗಿತ್ತು. ಕ್ರೀಡಾಭಿಮಾನಿಗಳ ಚಪ್ಪಾಳೆ, ಹರ್ಷೋದ್ಘಾರದ ನಡುವೆ ಗೆಲುವಿಗಾಗಿ ಜಟಾಪಟಿಯೇ ನಡೆಯಿತು. ಹಗ್ಗ ಎಳೆಯುವಾಗ ಕೆಸರಿನಲ್ಲಿ ಬಿದ್ದು ಎದ್ದು ಹೊರಳಾಡಿದ ದೃಶ್ಯ ಎಲ್ಲರನ್ನು ರಂಜಿಸಿತು. ಪುರುಷರ ಹಗ್ಗಜಗ್ಗಾಟವಂತೂ ರೋಮಾಂಚನಕಾರಿಯಾಗಿತ್ತು. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸಿದ ಉಭಯ ತಂಡಗಳು ಗೆಲುವಿಗಾಗಿ ಹೋರಾಟ ನಡೆಸಿ ರಂಜಿಸಿದವು.
ಓಟದ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಕೆಸರಿನಲ್ಲಿ ಎದ್ದು ಬಿದ್ದು ಓಡುತ್ತಿದ್ದ ದೃಶ್ಯ ಗಮನಸೆಳೆಯಿತು. ಕೊನೆಯಲ್ಲಿ ‘ಆಟಿ 18’ರ ಸಂಭ್ರಮದಲ್ಲಿ ಮಕ್ಕಳು, ಯುವಕರು ಕೆಸರಿನಲ್ಲಿ ಕುಣಿಯುತ್ತಾ ಸಂಭ್ರಮಿಸಿದರು.
‘ಯುವ ಜನತೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಮೊದಲ ಬಾರಿಗೆ ಈ ಕ್ರೀಡಾಕೂಟ ಆಯೋಜಿಸಲಾಗಿದೆ. ಕುಟುಂಬಸ್ಥರನ್ನು ಒಟ್ಟುಗೂಡಿಸಿ ‘ಆಟಿ 18’ ಅನ್ನು ಆಚರಿಸುವ ನಿಟ್ಟಿನಲ್ಲಿ ಈ ಕೆಸರು ಗದ್ದೆ ಕ್ರೀಡಾಕೂಟ ನಡೆಸಲಾಯಿತು’ ಎಂದು ಗದ್ದೆ ಮಾಲೀಕ ವೈ.ಯಂ.ಕರುಂಬಯ್ಯ ತಿಳಿಸಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್ ಹಾಗೂ ಮುಖಂಡರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.