ADVERTISEMENT

ಕಾಡಂಚಿನ ಜನರನ್ನು ಮಾನವೀಯತೆಯಿಂದ ನೋಡಿ: ಶಾಸಕ ಪೊನ್ನಣ್ಣ

ತೆರಾಲು ಬಳಿ ಹುಲಿ ಸೆರೆ ಕಾರ್ಯಾಚರಣೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 8:09 IST
Last Updated 23 ಏಪ್ರಿಲ್ 2025, 8:09 IST
ಪೊನ್ನಂಪೇಟೆ ತಾಲ್ಲೂಕಿನ ತೆರಾಳು ಸಮೀಪ ನಡೆಯುತ್ತಿರುವ ಹುಲಿ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಸಲಹೆ, ಸೂಚನೆಗಳನ್ನು ನೀಡಿದರು
ಪೊನ್ನಂಪೇಟೆ ತಾಲ್ಲೂಕಿನ ತೆರಾಳು ಸಮೀಪ ನಡೆಯುತ್ತಿರುವ ಹುಲಿ ಸೆರೆ ಕಾರ್ಯಾಚರಣೆ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ಎ.ಎಸ್.ಪೊನ್ನಣ್ಣ ಸಲಹೆ, ಸೂಚನೆಗಳನ್ನು ನೀಡಿದರು   

ಮಡಿಕೇರಿ: ಕಾಡಂಚಿನಲ್ಲಿ ವಾಸಿಸುವ ಜನರಿಗೆ ಸುರಕ್ಷತೆ ಒದಗಿಸುವುದು ಅಗತ್ಯವಾಗಿದೆ. ಆ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಪೊನ್ನಂಪೇಟೆ ತಾಲ್ಲೂಕಿನ ಬಿರುನಾಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಾಲು ಗ್ರಾಮ ವ್ಯಾಪ್ತಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೈಗೊಳ್ಳಲಾಗಿರುವ ‘ಹುಲಿ ಹಿಡಿಯುವ ಕಾರ್ಯಾಚರಣೆ’ ಸ್ಥಳಕ್ಕೆ ಅವರು ಮಂಗಳವಾರ ಭೇಟಿ ನೀಡಿ ವೀಕ್ಷಿಸಿ ಈ ಸೂಚನೆ ನೀಡಿದರು.

‘ಬಡವರು, ಆದಿವಾಸಿಗಳು ಸಹ ವಾಸಿಸಬೇಕು. ಆ ನಿಟ್ಟಿನಲ್ಲಿ ಅವರಿಗೆ ಭೂಮಿ ಒದಗಿಸಬೇಕು. ಆದಿವಾಸಿಗಳಿಗೆ ವಸತಿ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ಭರವಸೆ ನೀಡಲಾಗಿದೆ. ಅದರಂತೆ ನಡೆದುಕೊಳ್ಳಬೇಕು. ಮಾನವೀಯತೆಯಿಂದ ನೋಡಬೇಕು’ ಎಂದು ಎ.ಎಸ್.ಪೊನ್ನಣ್ಣ ತಿಳಿಸಿದರು.

ADVERTISEMENT

‘ಅರಣ್ಯ ಅಂಚಿನಲ್ಲಿಯೂ ಸಾಕಷ್ಟು ಭೂಮಿ ಒತ್ತುವರಿಯಾಗಿದೆ. ಆದಿವಾಸಿಗಳು, ಬಡವರಿಗೆ ಸಹ ವಾಸಕ್ಕೆ ಜಾಗ ಒದಗಿಸಬೇಕಿದೆ’ ಎಂದು ಹೇಳಿದರು.

‘ಹುಲಿ ಸೆರೆ ಕಾರ್ಯಾಚರಣೆಗೆ ದುಬಾರೆ ಸಾಕಾನೆ ಶಿಬಿರದಿಂದ ಗೋಪಿ ಮತ್ತು ಶ್ರೀರಾಮ ಎರಡು ಸಾಕಾನೆಗಳನ್ನು ಬಳಸಿಕೊಳ್ಳಲಾಗಿದೆ. ಈ ಸಂಬಂಧ 5 ದಿನಗಳಿಂದ ಹುಲಿ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಲಾಗಿದೆ’ ಎಂದರು.

‘ಈ ಸಂಬಂಧ ಅರಣ್ಯ ಸಚಿವರ ಜೊತೆ ಚರ್ಚಿಸಲಾಗಿದ್ದು, ಎರಡು ಹುಲಿಯನ್ನು ಸೆರೆ ಹಿಡಿಯಲು ಅನುಮತಿ ದೊರೆತಿದ್ದು, ಕಾರ್ಯಾಚರಣೆ ಆರಂಭವಾಗಿದೆ’ ಎಂದು ತಿಳಿಸಿದರು.

ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪೊಲೀಸರು ಸೈನಿಕರಂತೆ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂದು ಅವರು ಶ್ಲಾಘಿಸಿದರು.

ಈ ವೇಳೆ ಜನರು ‘ತಕ್ಷಣ ಹುಲಿ ಸೆರೆ ಹಿಡಿಯಿರಿ, ನಮ್ಮನ್ನು ಕಾಪಾಡಿ’ ಎಂದು ಮೊರೆ ಇಟ್ಟರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ನೆಹರು ಮಾತನಾಡಿ, ಅರಣ್ಯ ಅಧಿಕಾರಿಗಳು, ಪಿಡಿಒ ಹಾಗೂ ಸ್ಥಳೀಯರು ಒಳಗೊಂಡ ವಾಟ್ಸ್‌ಆ್ಯಪ್‌ ಗ್ರೂಪ್‌ ಮಾಡಿ, ತಕ್ಷಣವೇ ಮಾಹಿತಿ ನೀಡಿದ್ದಲ್ಲಿ ಹುಲಿ ಸೆರೆ ಹಿಡಿಯಲು ಸಹಕಾರಿಯಾಗುತ್ತದೆ. ಸ್ಥಳೀಯರು ಸಹಕಾರ ನೀಡಬೇಕು’ ಎಂದು ಕೋರಿದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಮಾತನಾಡಿ, ‘ಇರ್ಪುವಿನಿಂದ ಕೂಟಿಯಾಲವರೆಗೂ ಹುಲಿಯ ಚಲನವಲನದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಈ ಸಂಬಂಧ ಕ್ಯಾಂಪ್‍ಗಳನ್ನು ಮಾಡಿ ಹುಲಿ ಸೆರೆ ಹಿಡಿಯಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಮಾಕುಟ್ಟ-ಶ್ರೀಮಂಗಲ ವನ್ಯಜೀವಿ ವಿಭಾಗ, ತಿತಿಮತಿ ಆರ್‌ಆರ್‌ಟಿ ವಿಭಾಗ ಹಾಗೂ ಇಟಿಎಫ್‌ ವಿಭಾಗ ಸೇರಿದಂತೆ ಒಟ್ಟು 60 ಸಿಬ್ಬಂದಿ ಹುಲಿ ಸೆರೆ ಕಾರ್ಯಾಚರಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ’ ಎಂದು ವಿವರಿಸಿದರು.

ವಲಯ ಅರಣ್ಯಾಧಿಕಾರಿ ಸಂತೋಷ್ ಹೂಗಾರ್, ಶಂಕರ್, ಪೊನ್ನಂಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಪ್ರಶಾಂತ್, ನವೀನ್, ಪ್ರೀತಮ್, ಅರಣ್ಯ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಬಿರುನಾಣಿ ಪಂಚಾಯಿತಿ ವ್ಯಾಪ್ತಿಯಲ್ಲಿ ಭಯದ ವಾತಾವರಣದಲ್ಲಿ ವಾಸಿಸುವಂತಾಗಿದೆ. ಹುಲಿ ಹಾಗೂ ಕಾಡಾನೆಗಳ ಉಪಟಳ ಹೆಚ್ಚಾಗಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ.
–ರಾಜೇಶ್ ಬಿರುನಾಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷ
ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ವನ್ಯಜೀವಿ ಹಾಗೂ ಮಾನವ ಸಂಘರ್ಷ ಇದ್ದು ಇದನ್ನು ತಡೆಯುವ ನಿಟ್ಟಿನಲ್ಲಿ ಶಾಸಕರು ಪ್ರಯತ್ನಿಸಿದ್ದಾರೆ.
–ಸಂಕೇತ್ ಪೂವಯ್ಯ, ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.