ADVERTISEMENT

ಪಹಲ್ಗಾಮ್‌ ದಾಳಿ | ಮೃತರಿಗೆ ಶ್ರದ್ಧಾಂಜಲಿ, ನ್ಯಾಯಕ್ಕಾಗಿ ಆಗ್ರಹ

ಕುಶಾಲನಗರದಲ್ಲಿ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್‌ನಿಂದ ಪ್ರತಿಭಟನಾ ಮೆರವಣಿಗೆ

​ಪ್ರಜಾವಾಣಿ ವಾರ್ತೆ
Published 6 ಮೇ 2025, 5:19 IST
Last Updated 6 ಮೇ 2025, 5:19 IST
ಕುಶಾಲನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಕೆ.ಜಿ.ಬೋಪಯ್ಯ ಮಾತನಾಡಿದರು. ಎಂ.ಪಿ.ಅಪ್ಪಚ್ಚುರಂಜನ್, ರವಿಕಾಳಪ್ಪ, ವಿಷ್ಣು‌ನಾಚಪ್ಪ, ಮೈನಾ ಲೋಕೇಶ್, ಮೈಸೂರು ಗಿರೀಶ್ ಪಾಲ್ಗೊಂಡಿದ್ದರು
ಕುಶಾಲನಗರದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಕೆ.ಜಿ.ಬೋಪಯ್ಯ ಮಾತನಾಡಿದರು. ಎಂ.ಪಿ.ಅಪ್ಪಚ್ಚುರಂಜನ್, ರವಿಕಾಳಪ್ಪ, ವಿಷ್ಣು‌ನಾಚಪ್ಪ, ಮೈನಾ ಲೋಕೇಶ್, ಮೈಸೂರು ಗಿರೀಶ್ ಪಾಲ್ಗೊಂಡಿದ್ದರು   

ಕುಶಾಲನಗರ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂ ಪ್ರವಾಸಿಗರ ನರಮೇಧ ಹಾಗೂ ಕೊಡಗಿನ ಹಿಂದೂ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ, ಮಂಗಳೂರಿನ ಸುಹಾಸ್ ಶೆಟ್ಟಿ ಕೊಲೆಯನ್ನು ಖಂಡಿಸಿ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್‌ನಿಂದ ‘ನ್ಯಾಯಕ್ಕಾಗಿ ಆಗ್ರಹಿಸಿ’ ಪಟ್ಟಣದಲ್ಲಿ ಸೋಮವಾರ ಮೌನ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.

ಟ್ರಸ್ಟ್‌ನ ಪದಾಧಿಕಾರಿಗಳು, ಬಿಜೆಪಿ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು ಕಾರು ನಿಲ್ದಾಣದಲ್ಲಿ ಜಮಾವಣೆಗೊಂಡು ಮೃತರ ಭಾವಚಿತ್ರಗಳನ್ನು ಹಿಡಿದು ಸಾಮೂಹಿಕ ಶ್ರದ್ಧಾಂಜಲಿ ಸಲ್ಲಿಸಿದರು. ನಂತರ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಿಸಿದರು.

ಮಾಜಿ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ‘ಅಮಾಯಕ ಹಿಂದೂ ಪ್ರವಾಸಿಗರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಉಗ್ರರ ಹೇಯಕೃತ್ಯ ಖಂಡನೀಯ. ಈ ಕೃತ್ಯಕ್ಕೆ ಪ್ರತೀಕಾರವನ್ನು ಪ್ರಧಾನಿ ಮೋದಿ‌ ನೇತೃತ್ವದಲ್ಲಿ ತೆಗೆದುಕೊಳ್ಳಲಾಗುತ್ತದೆ. ಇದರ ಬಗ್ಗೆ ಚಿಂತೆ ಬೇಡ’ ಎಂದರು.

ADVERTISEMENT

‘ಸಮಸ್ಯೆ ಬಗ್ಗೆ ಹೇಳುವ ಹಕ್ಕು ಎಲ್ಲರಿಗಿದೆ. ವಿನಯ್ ಮಾಡಿದ್ದೂ ಇದೆ. ಭಯೋತ್ಪಾದನೆ ಕೃತ್ಯದಂತೆ ಪರಿಗಣಿಸಿ ಪ್ರಕರಣ ದಾಖಲಾಗಿರುವವರ ಮೇಲೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಪೊಲೀಸ್ ಠಾಣೆ ಎಂದರೆ ಕಾಂಗ್ರೆಸ್ ಕಚೇರಿಯಂತಾಗಿದೆ. ಅಪರಾಧಿಕ ಹಿನ್ನೆಲೆ ಇಲ್ಲದ ವ್ಯಕ್ತಿಯ ಆತ್ಮಹತ್ಯೆಗೆ ಕಾರಣರಾದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಹಿರಂಗ ಆಗಬೇಕು’ ಎಂದರು.

‘ಡೆತ್ ನೋಟ್‌ನಲ್ಲಿ‌ ನೇರ ಆರೋಪ ಇದೆ. ಈ ಹಿನ್ನೆಲೆಯಲ್ಲಿ ಕ್ರಮ ಆಗಲೇಬೇಕು. ಇದು ಸಣ್ಣ ವಿಚಾರ ಎಂದು ನಿರ್ಲಕ್ಷಿಸಿದರೆ ಕಾಶ್ಮೀರದಲ್ಲಿ ಆಗಿದ್ದು ಕೊಡಗಿನಲ್ಲೂ ಆಗುತ್ತದೆ’ ಎಂದು ಎಚ್ಚರಿಕೆ ನೀಡಿದರು. ‘ಕೊಲೆ ಮಾಡಿದವರ ಮನೆಯಲ್ಲಿ ಕಾಂಗ್ರೆಸ್ ಸಭೆ ಸರಿನಾ’ ಎಂದೂ ಪ್ರಶ್ನಿಸಿದರು.

‘ಹಿಂದೂಗಳನ್ನು ಮುಟ್ಟಿದರೆ ಅದಕ್ಕೆ ಪ್ರತಿಕ್ರಿಯಿಸುವುದೂ ನಮಗೆ ಗೊತ್ತಿದೆ ಎಂದು ಹೇಳುವ ಕಾಲ ಬಂದಿದೆ. ಈ ಸಂದೇಶ ಕೊಡಬೇಕಾಗಿದೆ. ಮಂಗಳೂರು ಘಟನೆ ಎನ್ಐಎಗೆ ಕೊಡಬೇಕು’ ಎಂದು ಒತ್ತಾಯಿಸಿದರು.

ಮಾಜಿ ಸೇನಾನಿ ಮೇಜರ್ ನಂದ ಮಾತನಾಡಿ, ‘ನಮ್ಮಲ್ಲಿ ಶಿಸ್ತು ಮತ್ತು ಒಗ್ಗಟ್ಟು ಬೇಕು. ದೇಶದಾದ್ಯಂತ ಜಾತಿ ಜಾತಿ ಮಧ್ಯೆ ಕಂದಕ ಸೃಷ್ಟಿಸಲಾಗುತ್ತಿದೆ. ಕೊಡವ, ಗೌಡರ ಮಧ್ಯೆ ಸಂಘರ್ಷ ಒಂದು ಸಂಚು.‌ ಇದಕ್ಕೆ ಕೊಡಗಿನವರು ಬಲಿಯಾಗಿದ್ದಾರೆ. ನಾವೆಲ್ಲಾ ಒಂದು, ನಾವು ಭಾರತೀಯರು ಎನ್ನುವ ಭಾವ ನಮ್ಮದಾಗಬೇಕು’ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ‘ಜಾತಿ ವ್ಯವಸ್ಥೆ ಬಿಟ್ಟು ಹಿಂದೂ ಸಮಾಜ ಒಂದಾಗಬೇಕು. ಹಿಂದೂ ಸಮಾಜಕ್ಕಾಗಿ ಪ್ರಾಣ ತ್ಯಾಗ ಮಾಡಿದವರಿಗೆ ನಾವು ಕೊಡುವ ಗೌರವ ಹೆಚ್ಚಾಗಬೇಕು’ ಎಂದು ಹೇಳಿದರು.

ನಂತರ ಮೆರವಣಿಗೆಯಲ್ಲಿ ತೆರಳಿ ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್ ಜಿಲ್ಲಾ ಸಂಚಾಲಕ ವಿಷ್ಣು‌ನಾಚಪ್ಪ, ಮೈಸೂರು ಜಿಲ್ಲಾಧ್ಯಕ್ಷ ಮೈನಾ ಲೋಕೇಶ್, ಉಪಾಧ್ಯಕ್ಷ ಮೈಸೂರು ಗಿರೀಶ್, ಸಂಘಟನಾ ಕಾರ್ಯದರ್ಶಿ ರವಿಶಂಕರ್, ಮುಖಂಡರಾದ ರವಿ ಕುಶಾಲಪ್ಪ, ಬಿ.ಬಿ. ಭಾರತೀಶ್, ವಿಷ್ಣು ನಾಚಪ್ಪ, ಗೌತಮ್, ಲೋಕೇಶ್, ನಾಗೇಶ್ ಕುಂದಲಪಾಡಿ, ಅಶ್ವಿ, ಜಿ.ಎಲ್. ನಾಗರಾಜ್, ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸೌಮ್ಯ, ಉಪಾಧ್ಯಕ್ಷ ಪ್ರವೀಣ್, ಕಾಂತಿ ಬೆಳೆಯಪ್ಪ, ಎಚ್.ಎಸ್. ಅಶೋಕ್, ಎಂ.ಎಂ.ಚರಣ್, ಎಚ್.ಎಂ.ಮಧುಸೂದನ್, ಆರ್.ಕೆ.ಚಂದ್ರು, ಗೌತಮ್, ಬಿ.ಜೈವರ್ಧನ್, ಡಿ.ಕೆ.ತಿಮ್ಮಪ್ಪ, ಅಮೃತ್ ರಾಜ್, ಕೆ.ಜಿ.ಮನು, ಕೃಷ್ಣಪ್ಪ, ಗಣಿಪ್ರಸಾದ್, ಕೆ.ವರದ, ಗಂಗಮ್ಮ, ಗೀತಾ ಧರ್ಮಪ್ಪ ಪಾಲ್ಗೊಂಡಿದ್ದರು.

ಕುಶಾಲನಗರದಲ್ಲಿ ಮಿಷನ್ ಮೋದಿ ಡೆಮಾಕ್ರಸಿ ಡೆವಲಪ್‌ಮೆಂಟ್ ಟ್ರಸ್ಟ್ ವತಿಯಿಂದ ಸೋಮವಾರ ಏರ್ಪಡಿಸಿದ್ದ ಮೃತಪಟ್ಟ ವ್ಯಕ್ತಿಗಳಿಗೆ ಸಾಮೂಹಿಕ ಶ್ರದ್ಧಾಂಜಲಿ ನ್ಯಾಯಕ್ಕಾಗಿ ಒತ್ತಾಯಿಸಿ ತಹಶೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

‘ಹಿಂದೂ ಸಮಾಜ ಒಂದಾಗಲಿ’ ಮಾಜಿ ಶಾಸಕ ಎಂ.ಪಿ‌.ಅಪ್ಪಚ್ಚುರಂಜನ್ ಮಾತನಾಡಿ ‘ಪಾಕಿಸ್ತಾನ ವಿಶ್ವದ ಭೂಪಟದಲ್ಲಿ ಇಲ್ಲದಂತ ಕೆಲಸವನ್ನು ಮೋದಿ ಮಾಡಬೇಕು. ಈ ನಂಬಿಕೆ‌ ನಮಗಿದೆ. ಕೊಡಗಿನಲ್ಲೂ‌ ಎಚ್ಚರಿಕೆ ವಹಿಸಬೇಕು. ಪೊಲೀಸರು ಕಾಂಗ್ರೆಸ್ ಪೊಲೀಸರಾಗಿದ್ದಾರೆ. ಸರ್ಕಾರದ ಪೊಲೀಸರಾಗಿ ಉಳಿದಿಲ್ಲ. ಅಭಿವೃದ್ಧಿ ಮಾಡಿ ಎಂದು ಜಾಗೃತಿ ಮೂಡಿಸುವುದು ತಪ್ಪಲ್ಲ. ದೇಶ ಉಳಿದರೆ ನಾವು ಉಳಿಯುತ್ತೇವೆ. ಹಾಗಾಗಿ ದೇಶ ಮೊದಲು. ಮಂಗಳೂರು ಸುಹಾಸ್ ಶೆಟ್ಟಿ ಕೊಲೆಗೆ ಪೊಲೀಸ್ ಕುಮ್ಮಕ್ಕು ಕಾರಣ. ಹಿಂದೂ ಸಮಾಜ ಒಂದಾಗಬೇಕು. ಯುದ್ಧ ನಡೆದರೆ ನಾವು ಕೂಡ ಹೋಗಲು ತಯಾರಾಗಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.