ADVERTISEMENT

ಹಣ್ಣಿನ ವ್ಯಾಪಾರಿ ಮಕ್ಕಳಿಗೂ ಸೋಂಕು, ಕೊಡಗಿನಲ್ಲಿ ಹೆಚ್ಚಿದ ಆತಂಕ

ಎರಡು ಗ್ರಾಮಕ್ಕೆ ದಿಗ್ಬಂಧನ, ಸಕ್ರಿಯ ಪ್ರಕರಣ 5

​ಪ್ರಜಾವಾಣಿ ವಾರ್ತೆ
Published 23 ಜೂನ್ 2020, 13:05 IST
Last Updated 23 ಜೂನ್ 2020, 13:05 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಯನ್ನು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ವೀಕ್ಷಿಸಿದರು
ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಯನ್ನು ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ವೀಕ್ಷಿಸಿದರು   

ಮಡಿಕೇರಿ: ಶನಿವಾರಸಂತೆ ಸಮೀಪದ ಶಿರಂಗಾಲದ (45 ವರ್ಷ) ಹಣ್ಣಿನ ವ್ಯಾಪಾರಿಯ ಇಬ್ಬರು ಮಕ್ಕಳಿಗೂ ಕೋವಿಡ್‌– 19 ಸೋಂಕು ತಗುಲಿರುವುದು ವೈದ್ಯಕೀಯ ವರದಿಯಿಂದ ದೃಢಪಟ್ಟಿದ್ದು, ಉತ್ತರ ಕೊಡಗು ಭಾಗದಲ್ಲಿ ಆತಂಕ ಹೆಚ್ಚಳವಾಗಿದೆ.

ಹಣ್ಣಿನ ವ್ಯಾಪಾರಿಯ ಟ್ರ್ಯಾವೆಲ್‌ ಹಿಸ್ಟರಿಯಿಂದ ಆತಂಕ ಹೆಚ್ಚಾಗಿದೆ. 17 ಹಾಗೂ 14 ವರ್ಷದ ಇಬ್ಬರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಈ ಮಕ್ಕಳು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಪ್ರಸ್ತುತ ಒಟ್ಟು ಕೋವಿಡ್ ಸೋಂಕಿತ ಪ್ರಕರಣಗಳು 8ಕ್ಕೆ ಏರಿಕೆಯಾಗಿದ್ದು ಅದರಲ್ಲಿ ಮೂವರು ಗುಣಮುಖರಾಗಿದ್ದಾರೆ. ಐದು ಸಕ್ರಿಯ ಪ್ರಕರಣಗಳು ಜಿಲ್ಲೆಯಲ್ಲಿವೆ.

ಟ್ರಾವೆಲ್ ಹಿಸ್ಟರಿಯದ್ದೆ ಆತಂಕ

ADVERTISEMENT

ಕಳೆದ ಒಂದು ತಿಂಗಳಿನಿಂದ ಯಾವುದೇ ಸೋಂಕು ಪ್ರಕರಣ ವರದಿಯಾಗದ ಕೊಡಗು ಜಿಲ್ಲೆಯಲ್ಲಿಯೂ ಸೋಮವಾರ ಬರಸಿಡಿಲಿನಂತೆ ಮೂರು ಪ್ರಕರಣಗಳು ಕಂಡುಬಂದವು. ಮಂಗಳವಾರ ಮತ್ತೆ ಎರಡು ಪ್ರಕರಣಗಳು ಪತ್ತೆಯಾಗಿವೆ.

ಹಂಡ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಂಗಾಲ ಗ್ರಾಮದ 36 ವರ್ಷದ ವ್ಯಕ್ತಿಗೆ ಸೋಂಕು ತಗುಲಿದ್ದು ಈ ವ್ಯಕ್ತಿ ಗದಗದಿಂದ ಕೊಡಗಿಗೆ ಆಗಮಿಸಿದ್ದು ಗೊತ್ತಾಗಿದೆ.ಇವರು ಕುಟುಂಬ ಸದಸ್ಯರೊಂದಿಗೆ ನಿಕಟ ನಂಟು ಹೊಂದಿದ್ದರು. ಈ ವ್ಯಕ್ತಿ ಹಣ್ಣಿನ ವ್ಯಾಪಾರಿಯಾಗಿದ್ದು ಶನಿವಾರಸಂತೆ, ಸೋಮವಾರಪೇಟೆಯಲ್ಲಿ ವ್ಯಾಪಾರ ಮಾಡಿದ್ದು ಕಂಡುಬಂದಿದೆ. ಹಲವರೊಂದಿಗೆ ಸಂಪರ್ಕ ಸಾಧಿಸಿರುವುದು ಗೊತ್ತಾಗಿದೆ.

ಈ ಸೋಂಕಿತ ವ್ಯಕ್ತಿಗೆ ಅಂತರ ರಾಜ್ಯ ಪ್ರಯಾಣದ ಇತಿಹಾಸ ಇಲ್ಲದಿದ್ದರೂ ಅಂತರ ಜಿಲ್ಲಾ ಪ್ರಯಾಣದ ಇತಿಹಾಸವಿದೆ. ಶಿರಂಗಾಲ ಗ್ರಾಮವನ್ನು ಕಂಟೈನ್ಮೆಂಟ್ ಜೋನ್ ಆಗಿ ಪರಿವರ್ತಿಸಲಾಗಿದ್ದು ಮೂರು ತಿಂಗಳ ಬಳಿಕ ಕೊಡಗಿನಲ್ಲಿ ಮತ್ತೊಂದು ಕಂಟೈನ್ಮೆಂಟ್‌ ವಲಯ ಘೋಷಣೆ ಮಾಡಲಾಗಿದೆ.

ಸೋಮವಾರಪೇಟೆ ತಾಲ್ಲೂಕು ಆಲೂರು ಸಿದ್ದಾಪುರ ಬಳಿಯ ದೊಡ್ಡಳ್ಳಿ ಗ್ರಾಮದ ಮಹಿಳೆಗೂ ಸೋಂಕು ತಗುಲಿದೆ. ಮುಂಬೈನಿಂದ ಕರ್ನಾಟಕ ಮಂಡ್ಯ ಜಿಲ್ಲೆಯ ನಾಗಮಂಗಲಕ್ಕೆ ಕಳೆದ ತಿಂಗಳು ಬಂದಿದ್ದ ಮಹಿಳೆಯು 14 ದಿನಗಳ ಗೖಹ ಸಂಪರ್ಕ ತಡೆಯಲ್ಲಿದ್ದು ಅನಂತರ ಇತ್ತೀಚೆಗಷ್ಟೇ ದೊಡ್ಡಳ್ಳಿ ಗ್ರಾಮದ ಗಂಡನ ಮನೆಗೆ ಬಂದಿದ್ದರು. ಆಶಾ ಕಾಯ೯ಕತೆ೯ರು ಇವರ ಮನೆಗೆ ತೆರಳಿ ಗಂಟಲ ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ ಸಂದರ್ಭ ಸೋಂಕು ಇರುವುದು ಪತ್ತೆಯಾಗಿದೆ.

ಇನ್ನು ಮಡಿಕೇರಿ ತಾಲ್ಲೂಕಿನ ಅಯ್ಯಂಗೇರಿ ಗ್ರಾಮ ಮೂಲದ 65 ವಷ೯ದ ವ್ಯಕ್ತಿಗೆ ಸೋಂಕು ತಗುಲಿದ್ದು, ಹೊಟೇಲ್ ಉದ್ಯಮಿಯಾಗಿರುವ ಇವರು ಮುಂಬೈನಿಂದ ಮಂಗಳೂರಿಗಾಗಿ ಕೊಡಗು ಜಿಲ್ಲೆಗೆ ಬಂದಿದ್ದರು.

ಸೀಲ್‌ಡೌನ್‌ ವ್ಯಾಪ್ತಿಯಲ್ಲಿ 157 ಮಂದಿ:ಶಿರಂಗಾಲ ಗ್ರಾಮದ 30 ಮನೆಗಳಲ್ಲಿ 122 ಮಂದಿ ವಾಸವಿರುವ ಪ್ರದೇಶವನ್ನು ಮತ್ತು ಶನಿವಾರಸಂತೆ ಹೋಬಳಿ ಆಲೂರು ವೃತ್ತದ ದೊಡ್ಡಳ್ಳಿ ಗ್ರಾಮದಲ್ಲಿರುವ 37 ಮನೆಗಳಲ್ಲಿ 137 ಮಂದಿ ವಾಸವಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ನಿಯಂತ್ರಿತ ಪ್ರದೇಶವೆಂದು (Containment Zone) ಘೋಷಿಸಲಾಗಿದೆ. ನಿಯಂತ್ರಿತ ಪ್ರದೇಶದ ಜನರಿಗೆ ದಿನ ಬಳಕೆಯ ವಸ್ತುಗಳನ್ನು ಜಿಲ್ಲಾಡಳಿತದಿಂದ ಪೂರೈಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.