ADVERTISEMENT

ಕೊಡಗು: ಕೇಂದ್ರ ಬಜೆಟ್‌ನಲ್ಲಿ ಬಯಸಿದ್ದು ಬೆಟ್ಟದಷ್ಟು ಸಿಕ್ಕಿದ್ದು ಸಾಸಿವೆಯಷ್ಟು

ಕೆ.ಎಸ್.ಗಿರೀಶ್
Published 2 ಫೆಬ್ರುವರಿ 2026, 2:35 IST
Last Updated 2 ಫೆಬ್ರುವರಿ 2026, 2:35 IST
<div class="paragraphs"><p>ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಹುನಿರೀಕ್ಷಿತ 2026 ಬಜೆಟ್ ಮಂಡನೆ ಮಂಡಿಸುತ್ತಿದ್ದಾರೆ. </p><p></p></div>

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಹುನಿರೀಕ್ಷಿತ 2026 ಬಜೆಟ್ ಮಂಡನೆ ಮಂಡಿಸುತ್ತಿದ್ದಾರೆ.

   

ಮಡಿಕೇರಿ: ಕೇಂದ್ರ ಸರ್ಕಾರ ಭಾನುವಾರ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಕೊಡಗಿನ ಮೇಲೆ ನೇರ ಪರಿಣಾಮ ಬೀರುವಂತಹ ಕ್ರಮಗಳಾಗಲಿ, ವಿಶೇಷ ಯೋಜನೆಗಳಾಗಲಿ, ಪ್ಯಾಕೇಜ್‌ಗಳಾಗಲಿ ಇಲ್ಲ. ಆದರೆ, ಇಲ್ಲಿನ ಜನರ ಮೇಲೆ ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಪರಿಣಾಮ ಬೀರುವಂತಹ ಕೆಲವೊಂದು ಮಹತ್ವದ ನಿರ್ಣಯಗಳು ಬಜೆಟ್‌ನಲ್ಲಿ ಪ್ರಸ್ತಾವವಾಗಿವೆ. ಮಾತ್ರವಲ್ಲ, ಹೊಸದಾಗಿ ಪ್ರಕಟಿಸಿರುವ ಇನ್ನೂ ಅನೇಕ ಯೋಜನೆಗಳ ವ್ಯಾಪ್ತಿಗೆ ಕೊಡಗು ಜಿಲ್ಲೆಯನ್ನೂ ಸೇರಿಸುವ ಅವಕಾಶವಿರುವುದರಿಂದ ನಿರೀಕ್ಷೆಗಳನ್ನು ಗರಿಗೆದರಿಸಿದೆ.

ADVERTISEMENT

ಮುಖ್ಯವಾಗಿ, ಕಿಸಾನ್ ಕ್ರೆಡಿಟ್ ಕಾರ್ಡ್ ಮೊತ್ತವನ್ನು ₹ 3 ಲಕ್ಷದಿಂದ ₹ 5 ಲಕ್ಷಕ್ಕೆ ಏರಿಸಿರುವುದು ನೇರವಾಗಿ ಕಾಫಿ ಬೆಳೆಗಾರರಿಗೆ ಅನುಕೂಲಕರವಾಗಿದೆ ಎಂದು ಭಾರತೀಯ ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಹೇಳುತ್ತಾರೆ. ಇದಲ್ಲದೆ, ಮಹಿಳಾ ಉದ್ಯಮಿಗಳಿಗೆ ತರಬೇತಿ, ಹೊಸ ಸ್ಟಾರ್ಟ್‌ ಅಪ್‌ಗಳಿಗೆ ಉತ್ತೇಜನ, ಸೂಕ್ಷ್ಮ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಒತ್ತು ಸೇರಿದಂತೆ ಇನ್ನಿತರ ಯೋಜನೆಗಳಲ್ಲಿ ಕಾಫಿ ಮತ್ತು ಕಾಫಿಯ ಮೌಲ್ಯವರ್ಧಿತ ಉತ್ಪನ್ನಗಳೂ ಸೇರ್ಪಡೆಯಾಗಲಿವೆ. ಹೀಗಾಗಿ, ಈ ಎಲ್ಲ ಕ್ರಮಗಳೂ ಕಾಫಿ ಮತ್ತು ಅದರ ಮೌಲ್ಯವರ್ಧಿತ ಉತ್ಪನ್ನಗಳಿಗೆ ಚೇತೋಹಾರಿ ಎನಿಸಿವೆ.

ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಬಾಲಕಿಯರ ಹಾಸ್ಟೆಲ್ ತೆರೆಯುವ ನಿರ್ಧಾರದಿಂದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ಸಿಗುತ್ತದೆ. ಈ ಹಾಸ್ಟೆಲ್ ಆದಷ್ಟು ಬೇಗ ಕೊಡಗಿನಲ್ಲಿ ಕಾರ್ಯಾರಂಭ ಮಾಡಿದರೆ ಇಲ್ಲಿನ ಬಡ ಮತ್ತು ಮಧ್ಯಮವರ್ಗದ ಜನರ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗಲಿದೆ.

20 ಸಾವಿರ ಪ್ರವಾಸಿ ತಾಣಗಳಲ್ಲಿ ಮಾಹಿತಿ ನೀಡಲು 10 ಸಾವಿರ ಗೈಡ್‌ಗಳಿಗೆ ತರಬೇತಿ ನೀಡುವ ಯೋಜನೆಯನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಈ 20 ಸಾವಿರ ಪ್ರವಾಸಿ ತಾಣಗಳಲ್ಲಿ ಕೊಡಗಿನ ಎಲ್ಲ ಪ್ರವಾಸಿ ಸ್ಥಳಗಳನ್ನೂ ಸೇರಿಸಿದರೆ ನಿಜಕ್ಕೂ ಪ್ರವಾಸಿಗಳಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಸದ್ಯ, ಜಿಲ್ಲೆಯಲ್ಲಿ ಬರುವ ಪ್ರವಾಸಿಗರಿಗೆ ಸರಿಯಾದ ಮಾರ್ಗದರ್ಶನ ಇಲ್ಲ. ಕನಿಷ್ಠ ಪಕ್ಷ ಒಂದು ಸೂಚನಾ ಫಲಕಗಳೂ ಇಲ್ಲ. ಪ್ರವಾಸಿ ತಾಣದ ಮಹತ್ವ ಕುರಿತು ಬರುವ ಪ್ರವಾಸಿಗರಿಗೆ ಗೊತ್ತೇ ಆಗುತ್ತಿಲ್ಲ. ಗೈಡ್‌ಗಳ ನೇಮಕಾತಿ ಇಲ್ಲಿನ ಪ್ರವಾಸಿ ತಾಣಗಳಲ್ಲೂ ನಡೆಯಬೇಕಿದೆ.

ದೇಶದ 15 ಪುರಾತತ್ವ ಸ್ಥಳಗಳ ಅಭಿವೃದ್ಧಿ ಕುರಿತು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ. ಕೊಡಗಿನಲ್ಲಿರುವ ಕೇಂದ್ರದ ಪ್ರಾಚ್ಯ ಮತ್ತು ಪುರಾತತ್ವ ಸರ್ವೇಕ್ಷಣಾಲಯ ವ್ಯಾಪ್ತಿಗೆ ಸೇರುವ ಮಡಿಕೇರಿ ಕೋಟೆ, ದೊಡ್ಡಮಳ್ತೆಯ ಬೃಹತ್ ಶಿಲಾಸಮಾಧಿಗಳು, ಮುಳ್ಳೂರಿನ ಜೈನ ಬಸದಿಗಳಲ್ಲಿ ಯಾವುದಾದರೂ ಒಂದಾದರೂ ಸೇರ್ಪಡೆಯಾಗುವುದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.