ADVERTISEMENT

ಕಳಪೆ ಕಾಮಗಾರಿಯೆಂದು ಆರೋಪಿಸಿದ್ದ ವ್ಯಕ್ತಿಗೆ ಸಚಿವ ವಿ.ಸೋಮಣ್ಣ ತರಾಟೆ

ಕಾನೂನು ಕ್ರಮದ ಎಚ್ಚರಿಕೆ ನೀಡಿದ ಜಿಲ್ಲಾ ಉಸ್ತುವಾರಿ

​ಪ್ರಜಾವಾಣಿ ವಾರ್ತೆ
Published 22 ಮೇ 2020, 14:06 IST
Last Updated 22 ಮೇ 2020, 14:06 IST
‘ನಮ್ಮ ಕೊಡಗು’ ಸಂಘಟನೆಯ ನೌಶಾದ್‌ಗೆ ಎಚ್ಚರಿಕೆ ನೀಡಿದ ಸಚಿವರು ಹಾಗೂ ಸಂಸದರು
‘ನಮ್ಮ ಕೊಡಗು’ ಸಂಘಟನೆಯ ನೌಶಾದ್‌ಗೆ ಎಚ್ಚರಿಕೆ ನೀಡಿದ ಸಚಿವರು ಹಾಗೂ ಸಂಸದರು   

ಮಡಿಕೇರಿ: ಕೊಡಗಿನ ನೆರೆ ಸಂತ್ರಸ್ತರಿಗೆ ಜಂಬೂರಿನಲ್ಲಿ ನಿರ್ಮಿಸಿರುವ ಮನೆಗಳ ಕಾಮಗಾರಿ ಕಳಪೆಯಾಗಿವೆ ಆರೋಪಿಸಿ, ಫೇಸ್‌ಬುಕ್‌ನಲ್ಲಿ ಕಾಮಗಾರಿಯ ಫೋಟೊ ಹಾಕಿದ್ದ ‘ನಮ್ಮ ಕೊಡಗು’ ತಂಡದ ನೌಶಾದ್‌ ಎಂಬಾತನಿಗೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಸಂಸದ ಪ್ರತಾಪ ಸಿಂಹ ಅವರು ಶುಕ್ರವಾರ ತರಾಟೆಗೆ ತೆಗೆದುಕೊಂಡರು.

ನೌಶಾದ್‌ ಅವರು ಸಾಮಾಜಿಕ ಜಾಲತಾಣದಲ್ಲಿ ಕಾಮಗಾರಿಯ ಕೆಲವು ಫೋಟೊ ಹಾಕಿ ‘ನಿರಾಶ್ರಿತರಿಗೆ ತಲೆಗೆ ಚಪ್ಪಡಿ ಎಳೆಯುವ ಹುನ್ನಾರ’, ‘ಸಂತ್ರಸ್ತರ ಸಮಸ್ಯೆಗೆ, ನೋವಿಗೆ, ಕಣ್ಣೀರಿಗೆ ಮುಂದಾಗುವ ಅನಾಹುತಕ್ಕೆ ಯಾರು ಹೊಣೆ?’ ಎಂದು ಪ್ರಶ್ನಿಸಿದ್ದರು.

ಶುಕ್ರವಾರ ಜಂಬೂರಿಗೆ ಭೇಟಿ ನೀಡಿದಾಗ ನೌಶಾದ್‌ ಅವರೂ ಸ್ಥಳದಲ್ಲಿದ್ದರು. ಕಾಮಗಾರಿಯ ವಿವರಣೆ ನೀಡಲು ಮುಂದಾದ ವೇಳೆ ಸಚಿವರು, ಸಂಸದರು ತರಾಟೆಗೆ ತೆಗೆದುಕೊಂಡರು.

ADVERTISEMENT

‘ಒಳ್ಳೆಯ ಕೆಲಸ ನಡೆದಿದೆ ಸುಮ್ಮನೇ ಪ್ರಚೋದನೆ ನೀಡಿದರೆ ಹುಷಾರ್‌. ಏನಿದ್ದರೂ ಬರವಣಿಗೆಯಲ್ಲಿ ದೂರು ನೀಡಬಹುದು. ಶಾಸಕರು ಪರಿಶೀಲನೆ ನಡೆಸಲಿದ್ದಾರೆ. ನೀನು ಫಲಾನುಭವಿ ಅಲ್ಲದಿದ್ದರೆ ಅನಾವಶ್ಯಕ ಈ ವಿಚಾರದಲ್ಲಿ ತಲೆಹಾಕಬೇಡ. ದೇವರಾಗಿ ಇರಬೇಕು. ಮುಂದುವರಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಸಚಿವರು ಗದರಿದರು.

‘ಕಳಪೆಯಾಗಿದ್ದರೆ ತೋರಿಸು. ಸುಮ್ಮನೇ ವಿಡಿಯೊ ಮಾಡುವುದಲ್ಲ’ ಎಂದು ಸಿಟ್ಟಿನಿಂದ ನುಡಿದರು.

ಸಂಸದ ಪ್ರತಾಪ ಸಿಂಹ, ‘ಸಂತ್ರಸ್ತರ ಅಧಿಕೃತ ಸಂಘವಿದೆ. ಫಲಾನುಭವಿಗಳು ಕೇಳುತ್ತಾರೆ. ಸಂತ್ರಸ್ತರು ಇನ್ನೂ ಹತ್ತು ಸಮಸ್ಯೆ ಹೇಳಿದರೆ ಪರಿಹರಿಸೋಣ’ ಎಂದರು.

ಬಳಿಕ ಸೋಮಣ್ಣ ಅವರು, ‘ವಿಡಿಯೊ ಮತ್ತೊಂದು ನೋಡಲ್ಲ. ನಾನು ಪ್ರಾಕ್ಟಿಲ್‌ ಮ್ಯಾನ್‌. ಬಡವರಿಗೆ ಸಣ್ಣ ಮೋಸವಾದರೂ ನಾನು ಸಹಿಸಿಕೊಳ್ಳಲ್ಲ’ ಎಂದರು. ನೌಶಾದ್‌ ಅವರು, ‘ನಿಮ್ಮ ಗಮನಕ್ಕೆ ಸಮಸ್ಯೆ ತರುವ ಪ್ರಯತ್ನ ಮಾಡಿದ್ದೇನೆ. ಇಲ್ಲಿಯವರೆಗೂ ಬೇರುಗಳಿದ್ದವು’ ಎಂದು ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ ಸ್ಥಳದಲ್ಲಿದ್ದರು.

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆಗೆ ಮಾತನಾಡಿದ ಸೋಮಣ್ಣ, ‘ಕಾಮಗಾರಿ ಗುಣಮಟ್ಟ ಚೆನ್ನಾಗಿದೆ. ಜೂನ್‌ 5ರ ಒಳಗೆ ಮನೆ ಹಸ್ತಾಂತರ ಮಾಡುತ್ತೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.