ADVERTISEMENT

ನಾಪೋಕ್ಲು: ಪುತ್ತರಿ ಹಬ್ಬದಲ್ಲಿ ತಿನಿಸು ವೈವಿಧ್ಯ

ಸಿ.ಎಸ್.ಸುರೇಶ್
Published 14 ಡಿಸೆಂಬರ್ 2024, 6:47 IST
Last Updated 14 ಡಿಸೆಂಬರ್ 2024, 6:47 IST
ಪುತ್ತರಿ ಗೆಣಸಿನ ಖಾದ್ಯ ವೈವಿಧ್ಯ
ಪುತ್ತರಿ ಗೆಣಸಿನ ಖಾದ್ಯ ವೈವಿಧ್ಯ   

ನಾಪೋಕ್ಲು: ‘ಪೊಲಿ ಪೊಲಿಯೇ ದೇವಾ’ ಎಂದು ಶಾಸ್ತ್ರೋಕ್ತವಾಗಿ ಭತ್ತದ ತೆನೆಗಳನ್ನು ಕತ್ತರಿಸಿ ತಂದು ಮನೆಯನ್ನು ತುಂಬಿಕೊಳ್ಳುವ ವಿಧಿವತ್ತಾದ ಆಚರಣೆ ಪುತ್ತರಿ ಹಬ್ಬದಲ್ಲಿನ ಅಡುಗೆಯೂ ವೈವಿಧ್ಯಮಯವಾಗಿದೆ.

ಬಾಳೇಹಣ್ಣಿನಿಂದ ತಯಾರಿಸಿದ ‘ತಂಬಿಟ್ಟು’, ಘಮಘಮಿಸುವ ಏಲಕ್ಕಿ ಪುಟ್, ಆಗತಾನೇ ಗದ್ದೆಯಿಂದ ಕುಯ್ದು ಭತ್ತದ ಅಕ್ಕಿಯನ್ನು ಸೇರಿಸಿ ಮಾಡಿದ ಹೊಸ ಅಕ್ಕಿ ಪಾಯಸ, ಪುತ್ತರಿ ಗೆಣಸಿನ ಸಾಂಬಾರು... ಹೀಗೆ ಹತ್ತಾರು ವೈವಿಧ್ಯಗಳು ಬಾಯಲ್ಲಿ ನೀರೂರಿಸುತ್ತವೆ.

ಹೊಸ ಅಕ್ಕಿ ಪಾಯಸ ತಯಾರಿಸುವಾಗ ಐದಾರು ಪುಟ್ಟ ಕಲ್ಲು ಚೂರುಗಳನ್ನು ಸೇರಿಸಿ ಮಾಡುತ್ತಾರೆ. ಊಟ ಮಾಡುವಾಗ ಕಲ್ಲು ಸಿಕ್ಕಿದವರಿಗೆ ಕಲ್ಲಾಯುಷ್ಯ(ಅಂದರೆ ಧೀರ್ಘಾಯುಷ್ಯ) ಎಂಬುದಾಗಿ ಹಿರಿಯರ ಆಶೀರ್ವಾದ ಲಭಿಸುತ್ತದೆ. ಪುತ್ತರಿಯಲ್ಲಷ್ಟೇ ಈ ವಿಶೇಷ ಕಾರ್ಯಕ್ರಮ ಕಾಣಬಹುದು.

ADVERTISEMENT
ಪುತ್ತರಿ ಹಬ್ಬದ ಸಂದರ್ಭದಲ್ಲಿ ಅಂಗಡಿಗಳಲ್ಲಿ ಮಾರಾಟವಾಗುವ ಪುತ್ತರಿ ಗೆಣಸು

ಕೊಡವ ನುಡಿಯ ಪುತ್ತರಿ (ಪುದಿಯ ಅರಿ) ಅಂದರೆ ಹೊಸ ಅಕ್ಕಿ. ವ್ಯವಸಾಯವನ್ನೇ ನೆಚ್ಚಿ ಬದುಕುವ ಬಹುತೇಕ ರೈತಾಪಿ ವರ್ಗ ಪೈರುಗಳು ಬೆಳೆದಾಗ ನಿರ್ದಿಷ್ಟ ಕಾಲದಲ್ಲಿ ಶಾಸ್ತ್ರೋಕ್ತವಾಗಿ ಕುಯ್ದು ತಂದು ಮನೆಯನ್ನು ತುಂಬಿಸಿಕೊಳ್ಳುವುದೇ ಈ ಪುತ್ತರಿ ಹಬ್ಬದ ವೈಶಿಷ್ಟ್ಯ.

ಪುತ್ತರಿ ಆಚರಣೆಯ ಬಳಿಕ ಕುಟುಂಬಸ್ಥರೆಲ್ಲ ಜೊತೆಗೂಡಿ ಊಟೋಪಚಾರದಲ್ಲಿ ಪಾಲ್ಗೊಳ್ಳುತ್ತಾರೆ. ಪುತ್ತರಿಯಂದು ಅಕ್ಕಿಯ ತಿನಿಸುಗಳೇ ಪಾಧಾನ್ಯ. ಅಕ್ಕಿಯನ್ನು ಹುರಿದು ಪುಡಿಮಾಡಿ ಬೆಲ್ಲ, ಕಾಯಿತುರಿ, ಕಡಲೆ ಸೇರಿಸಿ ಮಾಡುವ ತಂಬಿಟ್ಟು ವಿಶೇಷ ಖಾದ್ಯ. ಸಿದ್ದ ಮಾಡಿಟ್ಟ ತಂಬಿಟ್ಟು ಪುಡಿ ಅಂಗಡಿಗಳಲ್ಲಿ ಲಭ್ಯ. ಇದರೊಂದಿಗೆ ಒಂದು ಬಗೆಯ ಗೆಣಸು ಸಹ ಮಾರುಕಟ್ಟೆಯಲ್ಲಿ ಲಭ್ಯ. ಇದು ಪುತ್ತರಿ ಗೆಣಸು ಎಂದೇ ಪ್ರಸಿಧ್ದಿ ಪಡೆದಿದೆ. ಧಾರ್ಮಿಕ ಆಚರಣೆಗಳೊಂದಿಗೆ ವೈವಿಧ್ಯಮಯ ತಿನಿಸುಗಳ ಸೇವನೆಯೂ ಪುತ್ತರಿಗೆ ವಿಶೇಷತೆಯನ್ನು ನೀಡಿದೆ.

ಪುತ್ತರಿ ಹಬ್ಬದಂದು ತಯಾರಿಸುವ ತಂಬಿಟ್ಟು.

ಇಂದು ಪುತ್ತರಿ ಹಬ್ಬ

ನಾಪೋಕ್ಲು ಸಮೀಪದ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ಪುತ್ತರಿ ಹಬ್ಬದ ದಿನವನ್ನು ಈಚೆಗೆ ನಿಶ್ಚಯಿಸಲಾಗಿದೆ.

* ರಾತ್ರಿ ಕರ್ಕಾಟಕ ಲಗ್ನದ ರೋಹಿಣಿ ನಕ್ಷತ್ರದಲ್ಲಿ 7.30 ಗಂಟೆಗೆ ಪುತ್ತರಿ ಹಬ್ಬದ ನೆರೆ ಕಟ್ಟುವುದು. ರಾತ್ರಿ 8.30 ಗಂಟೆಗೆ ಕದಿರು ಕುಯ್ಯುವುದು.

* ರಾತ್ರಿ 9.30 ಊಟೋಪಚಾರ.

* ಶನಿವಾರ ರಾತ್ರಿ 7.50ಕ್ಕೆ ನೆರೆ ಕಟ್ಟುವುದು.

* ರಾತ್ರಿ 8.50ಕ್ಕೆ ಕದಿರು ತೆಗೆಯುವುದು.

* ರಾತ್ರಿ 9.50ಕ್ಕೆ ಊಟೋಪಚಾರ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.