ADVERTISEMENT

ಮಡಿಕೇರಿ | ವೇಮನ ಸಂದೇಶಗಳನ್ನು ಅಧ್ಯಯನ ಮಾಡಿ: ಎಂ.ಪಿ.ರಶ್ಮಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 3:07 IST
Last Updated 20 ಜನವರಿ 2026, 3:07 IST
   

ಮಡಿಕೇರಿ: ‘ಧ್ವಜವೆತ್ತಿ ಸಾರು ದೇವನೊಬ್ಬನೆಂದು’ ಎಂದು ಪ್ರತಿಪಾದಿಸಿದವರು ಮಹಾಯೋಗಿ ವೇಮನ. ಅವರ ಸಂದೇಶಗಳನ್ನು ಪ್ರತಿಯೊಬ್ಬರೂ ಅಧ್ಯಯನ ಮಾಡಬೇಕು ಎಂದು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂದಿ ಭಾಷಾ ಶಿಕ್ಷಕಿ ಎಂ.ಪಿ.ರಶ್ಮಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಇಲ್ಲಿನ ಗಾಂಧಿ ಭವನದಲ್ಲಿ ಸೋಮವಾರ ನಡೆದ ಮಹಾಯೋಗಿ ವೇಮನ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಆಂಧ್ರದ ತೆಲುಗು ಸಾಹಿತ್ಯ ಲೋಕದಲ್ಲಿ ಧ್ರುವತಾರೆಯಂತೆ ಮೆರೆದವರು ಮಹಾಯೋಗಿ ವೇಮನ. ಆತ್ಮ ಶುದ್ದಿ ಇರದ ಆಚಾರವೇತಕೆ, ಮಡಕೆ ಶುದ್ದಿ ಇರದ ಅಡುಗೆ ಯಾತಕೆ, ಚಿತ್ತ ಶುದ್ದಿ ಇರದ ಪೂಜೆ ಯಾತಕೆ ಎಂದು ಅವರು ಹೇಳಿದ್ದಾರೆ’ ಎಂದು ತಿಳಿಸಿದರು.

ADVERTISEMENT

ದೇವರು ಒಬ್ಬನೇ, ನಿನ್ನೊಳಗೆ ದೇವನಿದ್ದಾನೆ. ಆತ್ಮಶುದ್ದಿ ಮಾಡಿಕೊಂಡು ನೋಡಿದಾಗ ನಿನ್ನೊಳಗಿರುವ ದೇವ ಕಾಣಿಸುತ್ತಾನೆ ಎಂದು ವಿವರಿಸಿದರು.

‘ಮನುಜ ಕುಲದ ಉದ್ಧಾರ, ಜಾತಿ, ಮತ, ಪಂಥ, ಜನಾಂಗ ಪ್ರದೇಶ, ವ್ಯಕ್ತಿ ಪ್ರಚಾರದ ಹಂಗನ್ನು ತೊರೆದು ಮನುಜ ಕುಲದ ಉದ್ದಾರಕ್ಕಾಗಿ ವೇಮನ ಅವರು ಜೀವನ ಸವೆಸಿದ್ದಾರೆ’ ಎಂದು ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೋಹನ್ ಕುಮಾರ್, ಬ್ಲಾಸಂ ಶಾಲೆಯ ಶಿಕ್ಷಕಿ ಪ್ರಿಯಾಂಕ, ಮಣಜೂರು ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.