
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ 4ನೇ ವರ್ಷದ ವಿಪ್ರ ಕ್ರೀಡೋತ್ಸವಕ್ಕೆ ಭಾನುವಾರ ಚಾಲನೆ ದೊರೆಯಿತು.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ತಾಲ್ಲೂಕು ಸಂಘಗಳ ಸಹಯೋಗದೊಂದಿಗೆ ಇಲ್ಲಿನ ಜಿಲ್ಲಾ ಒಳಾಂಗಣ ಕ್ರೀಡಾಂಗಣದಲ್ಲಿ ‘ವಿಪ್ರ ಕ್ರೀಡೋತ್ಸವ’ವಕ್ಕೆ ಜಾನಪದ ಪರಿಷತ್ತಿನ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜಿ.ಅನಂತಶಯನ ಅವರು, ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಅವರೊಂದಿಗೆ ಶಟಲ್ ಬ್ಯಾಡ್ಮಿಂಟನ್ ಆಡುವ ಮೂಲಕ ಸ್ಪರ್ಧಾ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ ನೀಡಿದರು.
ಕ್ರೀಡಾಚಟುವಟಿಕೆಗಳಲ್ಲಿ ಸಂಭ್ರ‍್ರಮಿಸಿದ ಹಲವು ಮಂದಿ ಒಳಾಂಗಣ ಕ್ರೀಡಾಕೂಟದಲ್ಲಿ ಶಟಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಡಬಲ್ಸ್, ಟೇಬಲ್ ಟೆನ್ನಿಸ್ ಸಿಂಗಲ್ಸ್, ಡಬಲ್ಸ್ ಪಂದ್ಯಾವಳಿ ಪುರುಷರು ಮತ್ತು ಮಹಿಳೆಯರ ವಿಭಾಗ ಹಾಗೂ 50 ವರ್ಷ ತುಂಬಿದ ಹಿರಿಯರ ವಿಭಾಗಗಳಲ್ಲಿ ನಡೆಯಿತು. ಈ ಎಲ್ಲಾ ಸ್ಪರ್ಧೆಗಳಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಸಮುದಾಯದವರು ಪಾಲ್ಗೊಂಡು ಸಂಭ್ರಮಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಬಿ.ಜಿ.ಅನಂಶಯನ, ‘ಸರ್ವರಿಗೂ ಹಿತವನ್ನು ಬಯಸುವ ಬ್ರಾಹ್ಮಣ ಸಮುದಾಯದ ಎಲ್ಲರೂ ಒಂದಾಗಿ ಸಂಘಟಿತರಾಗಬೇಕು’ ಎಂದು ಹೇಳಿದರು.
ಈ ಸಮುದಾಯವು ಕೇವಲ ಪಾರಂಪರಿಕವಾದ ಪೂಜಾ ಕಾರ್ಯಗಳಿಗಷ್ಟೇ ಸೀಮಿತವಾಗದೇ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಕೊಡಗು ಜಿಲ್ಲಾ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ರಾಮಚಂದ್ರ ಮೂಗೂರು ಮಾತನಾಡಿ, ‘ಜಿಲ್ಲಾ ವ್ಯಾಪ್ತಿಯಲ್ಲಿರುವ ಬ್ರಾಹ್ಮಣ ಸಮಾಜ ಬಾಂಧವರನ್ನು ಒಂದಾಗಿ ಬೆಸೆಯುವ ಮತ್ತು ಯುವ ಸಮೂಹದಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಉತ್ತೇಜಿಸುವ ನಿಟ್ಟಿನಲ್ಲಿ ನಿಧಿಯ ವತಿಯಿಂದ 4ನೇ ವರ್ಷದ ವಿಪ್ರ ಕ್ರೀಡೋತ್ಸವವನ್ನು ಆಯೋಜಿಸಲಾಗುತ್ತಿದೆ’ ಎಂದು ಹೇಳಿದರು.
ಡಿ. 14ರಂದು ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ವಿರಾಜಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಬೆಳಿಗ್ಗೆ 9 ಗಂಟೆಗೆ ಆರಂಭಗೊಳ್ಳಲಿದೆ. ಅದೇ ದಿನ ಸಂಜೆ ಸಂಜೆ 4 ಗಂಟೆಗೆ ಮೈದಾನದ ಮತ್ತೊಂದು ಭಾಗದಲ್ಲಿ ಜಿಲ್ಲಾ ಮಟ್ಟದ ಹಗ್ಗ-ಜಗ್ಗಾಟ ಸ್ಪರ್ಧೆಯು ಸಹ ನಡೆಯಲಿದೆ. ಇದರಲ್ಲಿ ಜಿಲ್ಲೆಯ ಬ್ರಾಹ್ಮಣ ಸಮುದಾಯದವರು ಪಾಲ್ಗೊಳ್ಳುವಂತೆ ರಾಮಚಂದ್ರ ಮೂಗೂರು ಮನವಿ ಮಾಡಿದರು.
ನಿಧಿಯ ಪ್ರಧಾನ ಕಾರ್ಯದರ್ಶಿ ಬಿ.ಕೆ.ಜಗದೀಶ್ ಮಾತನಾಡ, ‘ಡಿ.21 ರಂದು ಮಡಿಕೇರಿ ತಾಲ್ಲೂಕು ಮಟ್ಟದ ಚೆಸ್ ಮತ್ತು ಕೇರಂ ಸ್ಪರ್ಧೆ ನಗರದ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪದಲ್ಲಿ ತಾಲ್ಲೂಕಿನ ಬ್ರಾಹ್ಮಣ ಸಮುದಾಯವರಿಗಾಗಿ ನಡೆಯಲಿದೆ. ಜಿಲ್ಲೆಯ ಇತರೆ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಸ್ಪರ್ಧೆಗಳು ನಡೆದು, ಜನವರಿಯಲ್ಲಿ ಜಿಲ್ಲಾ ಮಟ್ಟದ ಸ್ಪರ್ಧೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಉಪಾಧ್ಯಕ್ಷ ಭರತೇಶ್ ಕಂಡಿಗೆ, ಸಹ ಕಾರ್ಯದರ್ಶಿ ಎ.ವಿ.ಮಂಜುನಾಥ್, ನಿರ್ದೇಶಕರಾದ ಬಿ.ಕೆ.ಅರುಣ್ ಕುಮಾರ್, ರಾಜಶೇಖರ್, ಜಿ.ಡಿ.ಶಿವಶಂಕರ್, ಪಿ.ವಿ.ಅಶೋಕ್, ಎಂ.ಎನ್.ಶ್ಯಾಮಲಾ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.