ವಿರಾಜಪೇಟೆ: ಕಳೆದ 11 ದಿನಗಳಿಂದ ಶ್ರದ್ಧಾ–ಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಣೆಯಾಗುತ್ತಿರುವ ಪಟ್ಟಣದ ಊರ ಹಬ್ಬವೆಂದೇ ಹೆಸರಾಗಿರುವ ಗೌರಿಗಣೇಶೋತ್ಸವಕ್ಕೆ ಇಂದು ರಾತ್ರಿ ನಡೆಯಲಿರುವ ಶೋಭಾಯಾತ್ರೆಯ ಮೂಲಕ ಅದ್ಧೂರಿ ತೆರೆ ಬೀಳಲಿದೆ.
ಪಟ್ಟಣದಲ್ಲಿ ಇಂದು ರಾತ್ರಿ ಆರಂಭವಾಗಿ ಭಾನುವಾರ ಮುಂಜಾನೆಯವರೆಗೆ ನಡೆಯಲಿರುವ ಶೋಭಾಯಾತ್ರೆಯಲ್ಲಿ ಪಟ್ಟಣದ ಪ್ರಮುಖ 22 ಗಣೇಶೋತ್ಸವ ಸಮಿತಿಗಳ ಮಂಟಪಗಳು ಕಲಾ ತಂಡಗಳೊಂದಿಗೆ ಭಾಗವಹಿಸಲಿವೆ.
ಗಣೇಶೋತ್ಸವ ಸಮಿತಿಗಳು ವಿದ್ಯುತ್ ದೀಪಾಲಂಕೃತ ಮಂಟಪದಲ್ಲಿ ಉತ್ಸವಮೂರ್ತಿಗಳನ್ನಿರಿಸಿ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಹಿರಿತನದ ಆಧಾರದಲ್ಲಿ ಸಾಲಾಗಿ ಭಾಗವಹಿಸಲಿವೆ. ಪ್ರತಿ ಸಮಿತಿಗಳ ಮೂರ್ತಿಗಳ ಮುಂಭಾಗ ವಾಧ್ಯಗೋಷ್ಠಿಗಳು, ಡೊಳ್ಳು ಕುಣಿತ, ಕಲ್ಲಡ್ಕ ಗೊಂಬೆಗಳು, ನವಿಲಿನ ದೈತ್ಯಕಾರದ ಪ್ರತಿಕೃತಿ ಸೇರಿದಂತೆ ವೈವಿಧ್ಯಮಯ ಕಲಾವಿದರ ತಂಡಗಳೇ ಭಾಗವಹಿಸಲಿವೆ.
ಈ ಬಾರಿ ಹೆಚ್ಚಿನ ಸಮಿತಿಗಳು ಸಂಪ್ರದಾಯಿಕ ವಾದ್ಯ ಸೇರಿದಂತೆ ಕಲಾ ತಂಡಗಳಿಗೆ ಮನ್ನಣೆ ನೀಡುವ ಸಾಧ್ಯತೆ ಇರುವುದರಿಂದ ಉತ್ಸವಕ್ಕೆ ಹಿಂದಿನ ಕಳೆ ಮರುಕಳಿಸುವ ಸಾಧ್ಯತೆ ಇದೆ. ಕೇರಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ವೈವಿದ್ಯಮಯ ಕಲಾ ತಂಡಗಳು ಭಾಗವಹಿಸಲಿವೆ. ಪರಿಸರ ಸ್ನೇಹಿ ಸಿಡಿಮದ್ದಿನ ಪ್ರದರ್ಶನ ಹಾಗೂ ರಾತ್ರಿ ವಿವಿಧ ಸಮಿತಿಗಳ ವತಿಯಿಂದ ಅನ್ನಸಂತರ್ಪಣೆ ನಡೆಯಲಿದೆ.
ಮಂಟಪಗಳು ಸಾಗಲಿರುವ ರಸ್ತೆಗಳಲ್ಲಿನ ಗುಂಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವ ಕಾರ್ಯವನ್ನು ಪುರಸಭೆ ಕೈಗೊಂಡಿದೆ. ಮೂರ್ತಿಗಳನ್ನು ವಿಸರ್ಜಿಸುವ ಗೌರಿಕೆರೆಯನ್ನು ಈಗಾಗಲೇ ಅಭಿವೃದ್ಧಿಗೊಳಿಸಲಾಗಿದೆ. ಅಗತ್ಯ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದರೂ ಈ ವ್ಯಾಪ್ತಿಯಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿರುವುದು ಸಮಿತಿ ಹಾಗೂ ಸಾರ್ವಜನಿಕರನ್ನು ಕಾಡುತ್ತಿದೆ.
ಪಟ್ಟಣದಲ್ಲಿ ಶೋಭಾಯಾತ್ರೆ ನಡೆಯುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಶಾಂತಿ ಮತ್ತು ಕಾನೂನು ಸುವ್ಯಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಸೆ. 6ರಂದು ಬೆಳಿಗ್ಗೆ 6ರಿಂದ ಸೆ. 7ರ ಬೆಳಿಗ್ಗೆ 10ರವರೆಗೆ ವಿರಾಜಪೇಟೆ ನಗರ ಹಾಗೂ ಅದರ ಸುತ್ತಮುತ್ತಲಿನ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.
ಗೌರಿಕೆರೆಯಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿನ ಗುಂಡಿಗಳನ್ನು ಮುಚ್ಚುವ ಕಾರ್ಯ ಬಹುತೇಕ ಪೂರ್ಣಗೊಂಡಿದೆಪಿ.ಕೆ.ನಾಚಪ್ಪ ಮುಖ್ಯಾಧಿಕಾರಿ ವಿರಾಜಪೇಟೆ ಪುರಸಭೆ
ನಿಲುಗಡೆ ಸಂಚಾರ ಮಾರ್ಗದಲ್ಲಿ ಬದಲಾವಣೆ:
ಸೆ. 6ರಂದು ಮಧ್ಯಾಹ್ನ 2ರಿಂದ ಮರುದಿನ ಬೆಳಿಗ್ಗೆ 10ರವರೆಗೆ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯಲ್ಲಿ ಈ ಕೆಳಗಿನಂತೆ ತಾತ್ಕಾಲಿಕ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದಾರೆ.
* ನಗರದ ತೆಲುಗರ ಬೀದಿ ದೊಡ್ಡಟ್ಟಿ ಚೌಕಿ ಅಪ್ಪಯ್ಯ ಸ್ವಾಮಿ ರಸ್ತೆ ದಖ್ಖನಿ ಮೊಹಲ್ಲಾ ರಸ್ತೆ ಅರಸು ನಗರ ರಸ್ತೆ ಎಫ್.ಎಂ.ಸಿ ರಸ್ತೆ ಗಡಿಯಾರ ಕಂಬ ಮಲಬಾರ್ ರಸ್ತೆ ಗೌರಿಕೆರೆ ರಸ್ತೆ ಮೀನುಪೇಟೆ ರಸ್ತೆಯ ಹಾಗೂ ದೊಡ್ಡಟ್ಟಿ ಚೌಕಿಯಿಂದ ಪಂಜರುಪೇಟೆಯ ಸರ್ವೋದಯ ಕಾಲೇಜಿನವರೆಗೆ ಹಾಗೂ ಮಗ್ಗುಲ ಜಂಕ್ಷನ್‌ನಿಂದ ದಖ್ಖನಿ ಮೊಹಲ್ಲಾ ಜಂಕ್ಷನ್‌ವರೆಗೆ ಯಾವುದೇ ವಾಹನಗಳು ಸಂಚರಿಸುವುದು ಮತ್ತು ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.
* ಪೆರುಂಬಾಡಿ ಕಡೆಯಿಂದ ನಗರಕ್ಕೆ ಉತ್ಸವ ವೀಕ್ಷಣೆಗೆ ಬರುವ ವಾಹನಗಳನ್ನು ಕೀರ್ತಿ ರೆಸ್ಟೋರೆಂಟ್ ಮುಂಭಾಗದಿಂದ ಆರ್ಜಿ ಕಡೆಗೆ ಹೋಗುವ ರಸ್ತೆಯ ಎಡಭಾಗದ ಬದಿಯಲ್ಲಿ ಮಾತ್ರ ಸಿದ್ದಾಪುರ ಕಡೆಯಿಂದ ಮೆರವಣಿಗೆ ನೋಡಲು ನಗರಕ್ಕೆ ಬರುವ ವಾಹನಗಳನ್ನು ಮಗ್ಗುಲ ಜಂಕ್ಷನ್ (ಡೆಂಟಲ್ ಕಾಲೇಜ್ ಜಂಕ್ಷನ್) ಮತ್ತು ರವಿರಾಜ್ ಗ್ಯಾಸ್ ಏಜೆನ್ಸಿ ಕಚೇರಿಯಿಂದ ಐಮಂಗಲ ಕಡೆಗೆ ಹೋಗುವ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು. ಗೋಣಿಕೂಪ್ಪ ಕಡೆಯಿಂದ ಮೆರವಣಿಗೆ ನೋಡಲು ಬರುವಂತಹ ವಾಹನಗಳನ್ನು ಪಂಜರುಪೇಟೆಯ ಸರ್ವೋದಯ ಕಾಲೇಜಿನ ಬಳಿಯಿಂದ ಕಾವೇರಿ ಕಾಲೇಜು ಕಡೆಗೆ ಎಡಬದಿಯಲ್ಲಿ ಮಾತ್ರ ನಿಲುಗಡೆ ಮಾಡಬೇಕು. ಬೇಟೋಳಿ ಗುಂಡಿಗೆರೆ ಚಿಟ್ಟಡೆ ಕಡೆಯಿಂದ ಮಹಿಳಾ ಸಮಾಜ ಮಾರ್ಗವಾಗಿ ಮೆರವಣಿಗೆ ನೋಡಲು ಬರುವಂತಹ ವಾಹನಗಳು ಮಹಿಳಾ ಸಮಾಜ ರಸ್ತೆಯ ಎಡಬದಿಯಲ್ಲಿ ನಿಲ್ಲಿಸಬೇಕು.
*ಕೇರಳದಿಂದ ಮಾಕುಟ್ಟ ಮಾರ್ಗವಾಗಿ ಗೋಣಿಕೂಪ್ಪ ಅಥವಾ ಸಿದ್ದಾಪುರದ ಕಡೆಗಳಿಗೆ ಹೋಗುವ ವಾಹನಗಳು ಪೆರುಂಬಾಡಿ ಚೆಕ್‌ಪೋಸ್ಟ್ ಬಾಳುಗೋಡು ಬಿಟ್ಟಂಗಾಲ ಜಂಕ್ಷನ್ ಕೈಕೇರಿ ಜಂಕ್ಷನ್ ಗದ್ದೆ ಮನೆಯ ರಸ್ತೆ ಜಂಕ್ಷನ್ ಮಾರ್ಗವಾಗಿ ಪಾಲಿಬೆಟ್ಟ ಸಿದ್ದಾಪುರಕ್ಕೆ ಹೋಗಬೇಕು. ಅದೇ ರೀತಿ ಸಿದ್ದಾಪುರ ಕಡೆಯಿಂದ ಕೇರಳದ ಕಡೆ ಹೋಗುವ ವಾಹನಗಳು ಕೈಕೇರಿ ಬಿಟ್ಟಂಗಾಲ ಬಾಳುಗೋಡ ಪೆರುಂಬಾಡಿ ಮಾರ್ಗವಾಗಿ ಕೇರಳದ ಕಡೆ ಹೋಗುವುದು.
* ಮಡಿಕೇರಿಯಿಂದ ಕೇರಳದ ಕಡೆ ಹೋಗುವ ವಾಹನಗಳು ಸಿದ್ದಾಪುರ ಪಾಲಿಬೆಟ್ಟ ಕೈಕೇರಿ ಬಿಟ್ಟಂಗಾಲ ಬಾಳುಗೋಡು ಪೆರುಂಬಾಡಿ ಮಾಕುಟ್ಟ ಮಾರ್ಗವಾಗಿ ಹೋಗುವುದು. ಮಡಿಕೇರಿ ಕಡೆಯಿಂದ ಮೈಸೂರು ಬೆಂಗಳೂರಿಗೆ ಹೋಗುವ ವಾಹನಗಳು ಸಿದ್ದಾಪುರ ಮಾರ್ಗವಾಗಿ ಗೋಣಿಕೊಪ್ಪ ಮೈಸೂರು ಬೆಂಗಳೂರಿಗೆ ಹೋಗುವುದು. ಮೈಸೂರು ಬೆಂಗಳೂರು ಕಡೆಯಿಂದ ಮಡಿಕೇರಿಗೆ ಹೋಗುವ ವಾಹನಗಳು ಗೋಣಿಕೊಪ್ಪ ಸಿದ್ದಾಪುರ ಮಾರ್ಗವಾಗಿ ಮಡಿಕೇರಿ ಹೋಗಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.