ADVERTISEMENT

ವಿರಾಜಪೇಟೆ: 'ಹೊಂದಾಣಿಕೆಯಿಂದ ಕೆಲಸಕಾರ್ಯಗಳು ಸುಗಮ'

​ಪ್ರಜಾವಾಣಿ ವಾರ್ತೆ
Published 4 ಜೂನ್ 2025, 7:27 IST
Last Updated 4 ಜೂನ್ 2025, 7:27 IST
ವಿರಾಜಪೇಟೆಯ ವಕೀಲರ ಸಂಘದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನೂತನ ನ್ಯಾಯಾಧೀಶ ನಟರಾಜ್ ಅವರು ಮಾತನಾಡಿದರು.
ವಿರಾಜಪೇಟೆಯ ವಕೀಲರ ಸಂಘದ ವತಿಯಿಂದ ಸೋಮವಾರ ನಡೆದ ಕಾರ್ಯಕ್ರಮದಲ್ಲಿ 2ನೇ ಅಪರ ಜಿಲ್ಲಾ ಸತ್ರ ನ್ಯಾಯಾಲಯದ ನೂತನ ನ್ಯಾಯಾಧೀಶ ನಟರಾಜ್ ಅವರು ಮಾತನಾಡಿದರು.   

ವಿರಾಜಪೇಟೆ: ‘ಹಿರಿಯ ಮತ್ತು ಕಿರಿಯ ವಕೀಲರಲ್ಲಿ ಹೊಂದಾಣಿಕೆ ಇದ್ದರೆ ಕೆಲಸಕಾರ್ಯಗಳು ಸುಗಮವಾಗಿ ನಡೆಯುತ್ತವೆ’ ಎಂದು ವಿರಾಜಪೇಟೆ 2ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ನೂತನ ನ್ಯಾಯಾಧೀಶ ನಟರಾಜ್ ಅಭಿಪ್ರಾಯಪಟ್ಟರು.

ಪಟ್ಟಣದ ವಕೀಲರ ಸಂಘದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಕಾನೂನುಬದ್ಧವಾಗಿ ಕರ್ತವ್ಯ ನಿರ್ವಹಿಸಲು ಎಲ್ಲರ ಸಹಕಾರ ಅತ್ಯಗತ್ಯ.  ನ್ಯಾಯಾಲಯ ಸಂಕೀರ್ಣ ಕಿರಿದಾಗಿದ್ದು,  5 ರಿಂದ 10 ಎಕರೆ ಸರ್ಕಾರಿ ಜಮೀನು ಲಭಿಸಿದರೆ  ನೂತನ ಕಟ್ಟಡ ನಿರ್ಮಾಣ ಕಾರ್ಯ ಸುಗಮವಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ  ವಕೀಲರ ಸಂಘದ ಅಧ್ಯಕ್ಷ ಸಿ.ಕೆ. ಪೂವಣ್ಣ  ಮಾತನಾಡಿ, ‘1960ರಲ್ಲಿ ಪ್ರಾರಂಭವಾದ ವಕೀಲರ ಸಂಘ ಇಂದು 126 ಮಂದಿ ಸದಸ್ಯ ಬಲವನ್ನು ಹೊಂದಿದೆ. ಕೊಡಗು ಜಿಲ್ಲೆ ಗುಡ್ಡಗಾಡು ಪ್ರದೇಶವಾಗಿದ್ದು, ಕಾಡಾನೆ, ವನ್ಯಮೃಗಗಳ ಹಾವಳಿ ಹೆಚ್ಚಾಗಿದೆ.  ಕಲಾಪಗಳಲ್ಲಿ ಭಾಗವಹಿಸಿ ಬೇಗನೆ ತೆರಳಲು ವಕೀಲರಿಗೆ ಅನುಮತಿ ನೀಡಬೇಕು’ ಎಂದು ಮನವಿ ಮಾಡಿದರು.

ADVERTISEMENT

ವಕೀಲರ ಸಂಘದಿಂದ ನ್ಯಾಯಾಧೀಶರಿಗೆ ಕಿರು ಹೊತ್ತಿಗೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ  ಮಂಜುನಾಥ್, ಸರ್ಕಾರಿ ಅಭಿಯೋಜಕ ಯಾಸಿನ್ ಅಹಮ್ಮದ್ ಉಪಸ್ಥಿತರಿದ್ದರು. ವಕೀಲರಾದ   ಪ್ರಶಾಂತ್, ಗೀತಾ, ಅನುಪಮ ಕಿಶೋರ್, ಬಾರ್ ಅಸೋಸಿಯೇಷನ್ ಪದಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.

ನ್ಯಾಯಾಧೀಶರಾಗಿದ್ದ ಎಸ್. ಸುಜಾತಾ ವರ್ಗಾವಣೆಗೊಂಡಿದ್ದು, ಬೆಂಗಳೂರು ಸಿಟಿ ಸಿವಿಲ್ ಸೆಷನ್ಸ್  ನ್ಯಾಯಾಧೀಶರಾಗಿದ್ದ  ನಟರಾಜ್ ಇಲ್ಲಿ ಅಧಿಕಾರ ಸ್ವೀಕರಿಸಿದ್ದರು.

ಕಾರ್ಯಕ್ರಮದಲ್ಲಿ ವಕೀಲರ ಸಂಘದ ಪದಾಧಿಕಾರಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.