ವಿರಾಜಪೇಟೆ: ‘ರಾಜ್ಯಸರ್ಕಾರ ಜನಪರ ಕೆಲಸ ಮಾಡುತ್ತಿದ್ದರೂ, ವಿರೋಧ ಪಕ್ಷಗಳು ಜನರ ಹಾದಿ ತಪ್ಪಿಸುವ ಕೆಲಸ ಮಾಡುತ್ತಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರ ನಿಗದಿತ ಅನುದಾನ ನೀಡದೇ ರಾಜಕೀಯ ಮಾಡುತ್ತಿದೆ’ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು ಆರೋಪಿಸಿದರು.
ಸಮೀಪದ ಬಿಟ್ಟಂಗಾಲದಲ್ಲಿ ಶನಿವಾರ ಸೆಸ್ಕ್ ವತಿಯಿಂದ ನಡೆದ ಕಾರ್ಯಕ್ರಮದಲ್ಲಿ ₹ 120 ಕೋಟಿ ಮೊತ್ತದ ವಿದ್ಯುತ್ ಉನ್ನತೀಕರಣ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಕೊಡಗಿನ ವಿದ್ಯುತ್ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಜಿಲ್ಲೆಗೆ ₹ 208 ಕೋಟಿ ಮಂಜೂರಾಗಿದ್ದು, ಇದರಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ₹ 120 ಕೋಟಿ ಒದಗಿಸಲಾಗಿದೆ. ಅನುದಾನದಲ್ಲಿ ವಿದ್ಯುತ್ ಪರಿವರ್ತಕ, ಹಳೆ ಕಬ್ಬಿಣದ ಕಂಬ ಹಾಗೂ ಹಳೆಯ ತಂತಿಗಳ ಬದಲಾವಣೆ ಇತ್ಯಾದಿ ಕಾಮಗಾರಿ ನಡೆಯಲಿದೆ. ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ 9 ತಿಂಗಳ ಗಡುವನ್ನು ನೀಡಲಾಗಿದೆ. ವೋಲ್ಟೆಜ್ ಸಮಸ್ಯೆ ಸರಿದೂಗಿಸಲು 6 ಕಡೆಗಳಲ್ಲಿ 66/11 ಕೆವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಲಿದೆ. ಜಿಲ್ಲೆಯ ರಸ್ತೆಗಳ ಅಭಿವೃದ್ಧಿಗೆ ₹ 60 ಕೋಟಿ ನೀಡಲಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ಶಾಸಕ ಎ.ಎಸ್.ಪೊನ್ನಣ್ಣ ಅವರು ಮಾತನಾಡಿ, ‘₹ 120 ಕೋಟಿ ಅನುದಾನವನ್ನು ಬಳಸಿಕೊಂಡು ಕ್ಷೇತ್ರದಲ್ಲಿ ವಿದ್ಯುತ್ ಆಡಚಣೆ ತಪ್ಪಿಸಲು ಹೆದ್ದಾರಿ ಹಾಗೂ ಮುಖ್ಯ ರಸ್ತೆ ಬದಿಯಲ್ಲಿರುವ ಅಂದಾಜು 185 ಕಿ.ಮೀ ಉದ್ದದ ಮಾರ್ಗದ ತಂತಿ ಬದಲಾವಣೆ ನಡೆಯಲಿದೆ. ವಿದ್ಯುತ್ ಪೂರೈಕೆಗೆ ಅಂದಾಜು 271 ಪರಿವರ್ತಕಗಳನ್ನು ಅಳವಡಿಸಲಾಗುವುದು. 3,136 ಕಬ್ಬಿಣದ ಹಳೆ ಕಂಬ ಬದಲಾವಣೆ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಈ ಕಾಮಗಾರಿಗಳ ಸಮಯದಲ್ಲಿ ವಿದ್ಯುತ್ ಕಡಿತವಾದರೆ ಜನತೆ ಸಹಕರಿಸಬೇಕು’ ಎಂದು ಹೇಳಿದರು.
‘ಮಾರ್ಚ್‌ನಲ್ಲಿ ಕಾಮಗಾರಿಯ ಶ್ವೇತಪತ್ರ ಜನರ ಮುಂದಿಡುತ್ತೇನೆ. ಕಾಮಗಾರಿಯಲ್ಲಿ ಗುಣಮಟ್ಟ ಕಾಯದಿದ್ದರೇ ಗುತ್ತಿಗೆದಾರರ ಹಣ ಪಾವತಿಯಾಗುವುದಿಲ್ಲ’ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ವೆಂಕಟರಾಜ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್, ಐಪಿಎಸ್ ಅಧಿಕಾರಿ ಬೆನಕ ಪ್ರಸಾದ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಆನಂದ ಪ್ರಕಾಶ್ ಮೀನಾ, ಸೆಸ್ಕ್ ಮುಖ್ಯ ಎಂಜಿನಿಯರ್ ದಿವಾಕರ್, ಕೊಡಗು- ಚಾಮರಾಜನಗರ ಜಿಲ್ಲೆಯ ಅಧೀಕ್ಷಕ ಎಂಜಿನಿಯರ್ ಸೋಮಶೇಖರ್, ಸೆಸ್ಕ್ ಜಿಲ್ಲಾ ಎಂಜಿನಿಯರ್ ರಾಮಚಂದ್ರ, ಬಿಟ್ಟಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಸುಬ್ಬಯ್ಯ, ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಧರ್ಮಜ ಉತ್ತಪ್ಪ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.