ADVERTISEMENT

ಸುಂಟಿಕೊಪ್ಪ: ಭೀಕರ ನೀರಿನ ಸಮಸ್ಯೆಯ ಕರೆ ಗಂಟೆ...?

ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಬತ್ತುತ್ತಿರುವ ಹೊಳೆ, ಜಲಮೂಲಗಳು, ಕೊಳವೆಬಾವಿಗಳಲ್ಲೂ ನೀರು ಕಡಿಮೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2024, 6:47 IST
Last Updated 5 ಮಾರ್ಚ್ 2024, 6:47 IST
<div class="paragraphs"><p>ಸುಂಟಿಕೊಪ್ಪದ ಹರದೂರು ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು.</p></div>

ಸುಂಟಿಕೊಪ್ಪದ ಹರದೂರು ಹೊಳೆಯಲ್ಲಿ ನೀರಿನ ಹರಿವು ಕಡಿಮೆಯಾಗಿರುವುದು.

   

ಸುಂಟಿಕೊಪ್ಪ: ಪ್ರಕೃತಿಯ ಮಡಿಲು ಕೊಡಗು ಜಿಲ್ಲೆಯ ಸುಂಟಿಕೊಪ್ಪ ಹೋಬಳಿ ವ್ಯಾಪ್ತಿಯಲ್ಲಿ ಬರದ ಕರಾಳ ಛಾಯೆ ಆವರಿಸಿದೆ. ಇದರ ಜೊತೆಯಲ್ಲಿ ನೀರಿನ ಸಮಸ್ಯೆಯೂ ದಿನದಿಂದ ದಿನಕ್ಕೆ ಉಲ್ಭಣವಾಗುತ್ತಿದೆ.

ಕೆರೆ ಕಟ್ಟೆಗಳು ಬತ್ತತೊಡಗಿವೆ. ಕಾಫಿ ತೋಟದ ನಡುವೆ ಹರಿಯುತ್ತಿದ್ದ ಸಣ್ಣ ಪುಟ್ಟ ತೊರೆಗಳು ಒಣಗಿ ಹೋಗಿವೆ. ಜನ, ಜಾನುವಾರುಗಳಿಗೆ ನೀರಿನ ಹಾಹಾಕಾರ ಹೆಚ್ಚುತ್ತಿದೆ.

ADVERTISEMENT

ಸುಂಟಿಕೊಪ್ಪ ಪಟ್ಟಣ ಮಾತ್ರವಲ್ಲ ಬಹುತೇಕ ಎಲ್ಲ ಭಾಗದ ಕೊಳವೆಬಾವಿಗಳಲ್ಲಿನ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಪಟ್ಟಣದಲ್ಲಿ 13 ಕೊಳವೆಬಾವಿಗಳಿದ್ದು, ಅವುಗಳಲ್ಲಿ 3 ಈಗಾಗಲೆ ಬರಿದಾಗಿವೆ. ಇನ್ನುಳಿದ 10 ಕೊಳವೆಬಾವಿಗಳಿಗೂ ಈಗ ಮಳೆಯ ಅಗತ್ಯ ಇದೆ.

ಒಂದು ವೇಳೆ ಇನ್ನು 15 ದಿನಗಳಲ್ಲಿ ಮಳೆ ಬಾರದಿದ್ದರೆ ಕೊಳವೆಬಾವಿಗಳು ಬತ್ತುವ ಸಾಧ್ಯತೆ ಹೆಚ್ಚಿದೆ. ಕಳೆದ ಒಂದು ತಿಂಗಳಿನಿಂದ ಉರಿ ಬಿಸಿಲಿಗೆ ಸಿಲುಕಿರುವ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿಧಾನವಾಗಿ ಆರಂಭಗೊಳ್ಳುತ್ತಿರುವುದು ಮುಂಬರುವ ದೊಡ್ಡ ಸಮಸ್ಯೆ ಕರೆಗಂಟೆಯಂತಿದೆ. 

ಹಾರಂಗಿ ಜಲಾಶಯದಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿರುವುದರಿಂದ ಹಿನ್ನೀರು ಪ್ರದೇಶದ ನೀರೂ ಹಿಂಗಿ ಹೋಗುತ್ತಿದೆ. ಸುಂಟಿಕೊಪ್ಪ ಸಮೀಪದ ಹರದೂರು ಹೊಳೆಯಲ್ಲಿಯೂ ನೀರಿನ ಪ್ರಮಾಣ ತೀವ್ರಗತಿಯಲ್ಲಿ ಇಳಿಕೆಯಾಗುತ್ತಿದೆ. ಹರದೂರು ಹೊಳೆಯ ನೀರು ದಿನದಿಂದ ದಿನಕ್ಕೆ ಬಿರು ಬಿಸಿಲಿನ ತಾಪಕ್ಕೆ ಆವಿಯಾಗುತ್ತಿದ್ದು, ಅಂತರ್ಜಲವೇ ಮಾಯಾವಾಗುವ ಆತಂಕ ಸೃಷ್ಟಿಯಾಗಿದೆ.

ಸುಂಟಿಕೊಪ್ಪ ಸಮೀಪದ ಮಾದಾಪುರ ಹೊಳೆಯಲ್ಲಿಯೂ ನೀರು ಬತ್ತುತ್ತಿರುವುದು.

ಹರದೂರು ಹೊಳೆಗೆ ಸೇರುವ ಹಟ್ಟಿಹೊಳೆ ಮತ್ತು ಮಾದಾಪುರದಲ್ಲಿನ ಹೊಳೆಗಳಲ್ಲೂ ಈಗ ನೀರು ತೀರಾ ಕುಸಿದಿದೆ. ಇದೂ ಸಹ ಸುತ್ತಮುತ್ತಲ ಪ್ರದೇಶಗಳ ಜನರ ಚಿಂತೆಗೆ ಕಾರಣವಾಗಿದೆ.

ಮಳೆಗಾಲದಲ್ಲಿ ಹಸಿರು ಹೊದ್ದು ಮಲಗಿದ್ದ ಹರದೂರು ಹೊಳೆ ಇದೀಗ ಬಿಸಿಲಿನ ತಾಪಕ್ಕೆ ಹುಲ್ಲು, ಗಿಡಗಳು ಒಣಗಿ ಹೋಗಿವೆ. ದನ ಕರುಗಳಿಗೆ ಮೇವಿನ ಕೊರತೆಯ ಜೊತೆಗೆ ಕುಡಿಯಲು ನೀರಿಲ್ಲದೇ ಪರದಾಡುವಂತಾಗಿದೆ.

ಮತ್ತೊಂದೆಡೆ ಕಳೆದೆರಡು ವರ್ಷಗಳ ಹಿಂದೆ ಸಂಭವಿಸಿದ ಭೀಕರ ಭೂಕುಸಿತದ ಸಂದರ್ಭದಲ್ಲಿ ಹೊಳೆಯ ತುಂಬಾ ಮಣ್ಣು ತುಂಬಿ ಹೊಳೆಯೇ ಮಾಯವಾಗುವ ಸ್ಥಿತಿ ಎದುರಾಗಿದೆ.

ಅಲ್ಲದೇ, ಹೊಳೆಯನ್ನು ಅವಲಂಬಿಸಿರುವ ರೈತರಲ್ಲಿ ತಮ್ಮ ತೋಟಗಳಿಗೆ ನೀರು ಹರಿಸಲು ಸಾಧ್ಯವಾಗದೇ ಪರಿತಪಿಸುತ್ತಿದ್ದಾರೆ. ಗರಗಂದೂರು, ಮಲ್ಲಿಕಾರ್ಜುನ ಕಾಲೊನಿಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಜನ ತತ್ತರಿಸಿ ಹೋಗಿದ್ದಾರೆ.
ಈ ವರ್ಷ ಮುಂಗಾರು ಮಳೆ ಹಿನ್ನಡೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ.

ಬಿತ್ತನೆ ಮಾಡಿದ ಬೆಳೆಗಳು ಕೂಡ ನೀರಿನ ಕೊರತೆಯಿಂದ ಒಣಗಿವೆ. ಈ ಭಾಗದ ಬಹತೇಕ ಕೆರೆಗಳು ಕೂಡ ಬತ್ತಿರುವುದರಿಂದ ಪಕ್ಷಿಗಳಿಗೂ ನೀರು ಸಿಗದೆ ಬಸವಳಿದಿವೆ.

ಸುಂಟಿಕೊಪ್ಪದ ಹರದೂರು ಹೊಳೆ ಬತ್ತಿ ಹೋಗುತ್ತಿದ್ದು ಆತಂಕ ಮೂಡಿಸಿದೆ.

ಒಂದೆಡೆ ಉರಿ ಬಿಸಿಲು ಮತ್ತೊಂದೆಡೆ ಹೂಳಿನ ಸಮಸ್ಯೆಯಿಂದಾಗಿ ಹರದೂರು ಹೊಳೆಯೆ ಮಾಯವಾಗುವ ಭೀತಿ ಉಂಟಾಗಿದೆ. ಬಹಳಷ್ಣು ಜನ ಜಾನುವಾರುಗಳು ಈ ಹೊಳೆಯನ್ನು ನಂಬಿದ್ದಾರೆ. ಆದರೆ ನೀರು ಇಳಿಮುಖಗೊಂಡು ಆತಂಕವಾಗಿದೆ.
ಬಿ.ಟಿ.ರಮೇಶ್ ಹರದೂರು ಗ್ರಾಮ.
‘ಹೊಸದಾಗಿ ಕೊಳವೆಬಾವಿ ಕೊರೆಸಲಾಗಿದೆ’
ಕುಡಿಯುವ ನೀರಿನ ಸಮಸ್ಯೆ ಕುರಿತು ‘ಪ್ರಜಾವಾಣಿ’ಗೆ ಸುಂಟಿಕೊಪ್ಪ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ವಿ.ಜಿ.ಲೋಕೇಶ್ ಅವರನ್ನು ಸಂಪರ್ಕಿಸಿದಾಗ ಅವರು ಕೊಳವೆಬಾವಿಗಳು ಬತ್ತುತ್ತಿರುವ ಕುರಿತು ಆತಂಕ ವ್ಯಕ್ತಪಡಿಸಿದರು. ‘ಪಂಪ್‌ಹೌಸ್‌ ಬಡಾವಣೆಯ ಕೊಳವೆಬಾವಿ ಈಗಾಗಲೇ ಬತ್ತಿ ಹೋಗಿ ನೀರಿಗೆ ಸಮಸ್ಯೆ ಉಂಟಾಗಿತ್ತು. ಅಲ್ಲಿ ಹೊಸದೊಂದು ಕೊಳವೆಬಾವಿ ಕೊರೆಸಿ ಅಲ್ಲಿ ನೀರಿನ ಸಮಸ್ಯೆ ಸದ್ಯ ಪರಿಹಾರ ಕಂಡಿದೆ. ಇನ್ನುಳಿದ ಕೊಳವೆಬಾವಿಗಳಲ್ಲಿಯೂ ನೀರು ಕಡಿಮೆಯಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.