ADVERTISEMENT

ಗಡಿಭಾಗದ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡೆವು

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 6:46 IST
Last Updated 24 ಜನವರಿ 2026, 6:46 IST

ಮಡಿಕೇರಿ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕವು ಪ್ರಸ್ತುತ ಸಾಲಿನಲ್ಲಿ 37 ದತ್ತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಮುಂದಿನ ಮಾರ್ಚ್ ತಿಂಗಳ ಅಂತ್ಯದೊಳಗೆ ಈ ದತ್ತಿ ಕಾರ್ಯಕ್ರಮಗಳನ್ನು ಜಿಲ್ಲಾ, ತಾಲ್ಲೂಕು ಮತ್ತು ಹೋಬಳಿ ಸಮಿತಿಗಳು ಸಂಪನ್ನಗೊಳಿಸಲಿವೆ’ ಎಂದು ಪರಿಷತ್ತು ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ತಿಳಿಸಿದರು.

ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಕುರಿತು ಆಸಕ್ತಿ ಬೆಳೆಸಲು ಕೊಡಗು ಜಿಲ್ಲೆಯ ಗ್ರಾಮ, ಪಟ್ಟಣಗಳಲ್ಲಿರುವ ಪದವಿ, ಪದವಿಪೂರ್ವ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲೆಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪರಿಷತ್ತು ದತ್ತಿ ದಾನಿಗಳ ಆಶಯದಂತೆ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಆಯೋಜಿಸುತ್ತಿದೆ’ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಸಕ್ತ ಸಾಲಿನಲ್ಲಿ ಜಿಲ್ಲಾ ಸಮಿತಿಗೆ 10 ದತ್ತಿ, ಪೊನ್ನಂಪೇಟೆ ತಾಲ್ಲೂಕು ಸಮಿತಿಗೆ 5, ಕುಶಾಲನಗರ ಸಮಿತಿಗೆ 6, ವಿರಾಜಪೇಟೆ ಸಮಿತಿಗೆ 5, ಸೋಮವಾರಪೇಟೆ ಸಮಿತಿಗೆ 6 ಮತ್ತು ಮಡಿಕೇರಿ ತಾಲ್ಲೂಕು ಸಮಿತಿಗೆ 5 ದತ್ತಿಗಳನ್ನು ನೀಡಲಾಗಿದೆ’ ಎಂದರು.

ADVERTISEMENT

‘ದತ್ತಿ ದಾನಿಗಳ ಆಶಯದಂತೆ ಪದವಿ, ಪದವಿ‌ಪೂರ್ವ, ಪ್ರೌಢಶಾಲೆ ಮತ್ತು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ದೇಶಭಕ್ತಿ ಗೀತೆ, ಕಥೆ, ಪ್ರಬಂಧ, ಕವನ ಬರೆಯುವ ಸ್ಫರ್ಧೆ ಮತ್ತು ನಾಟಕ, ರಸಪ್ರಶ್ನೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮ ಪರೀಕ್ಷೇಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಹಾಗೂ ಪಿ.ಯು.ಸಿ, ವಿದ್ಯಾರ್ಥಿಗಳಿಗೆ ಸನ್ಮಾನ, ಶರಣ ಸಾಹಿತ್ಯ, ವಚನ ಸಾಹಿತ್ಯ, ಕನ್ನಡ ಸಾಹಿತ್ಯ, ಮತ್ತು ದಾಸ ಸಾಹಿತ್ಯದ ಕುರಿತಾದ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕನ್ನಡ ಭಾಷೆ, ಸಾಹಿತ್ಯ, ಕನ್ನಡ ಇತಿಹಾಸ ಶಾಸನ, ಹಸ್ತಪ್ರತಿ, ವಿವಿಧ ಜನಾಂಗಳ ಸಂಶೊಧನೆ, ಮಹಿಳಾ ಸಾಹಿತ್ಯ, ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದ ಉದ್ಯಮಿಗಳ ಕುರಿತು ಉಪನ್ಯಾಸ ಕೊಡಗಿನ ಆರ್ಥಿಕ, ಸಾಮಾಜಿಕ, ವಿಚಾರ ದಾರೆಗಳು, ಸ್ವಾತಂತ್ರ್ಯ ಹೋರಾಟಗಾರ ಮತ್ತು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ಕೆ.ಎಸ್. ತಿಮ್ಮಯ್ಯ ಅವರ ವಿಚಾರಧಾರೆಗಳ ಕುರಿತು ಜಿಲ್ಲೆಯಾದ್ಯಂತ ಉಪನ್ಯಾಸ ಕಾರ್ಯಕ್ರಮಗಳು ನಡೆಯುತ್ತಿವೆ’ ಎಂದು ಹೇಳಿದರು.

‘ಗೌರಮ್ಮ ದತ್ತಿ’ ಪ್ರಶಸ್ತಿ ರಾಜ್ಯವ್ಯಾಪ್ತಿ ಹೆಸರು ಮಾಡಿದ್ದು, ಈಗಾಗಲೇ ಜಿಲ್ಲೆಯ 23 ಮಹಿಳಾ ಕೃತಿಕಾರರು ಈ ಪ್ರಶಸ್ತಿ ಸ್ವೀಕರಿಸಿದ್ದಾರೆ ಎಂದರು.

ಇತ್ತಿಚಿಗಿನ ವರ್ಷಗಳಿಂದ ಶ್ರೀಮತಿ ವಿಜಯ ವಿಷ್ಣುಭಟ್ ಅವರ ದತ್ತಿಯ ಆಶಯದಂತೆ ಮಹಿಳಾ ಬರಹಗಾರರು ಬರೆದ ಕೃತಿಗಳನ್ನು ಆಹ್ವಾನಿಸಿ ಆಯ್ಕೆಗೊಳಿಸಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಬಿ.ಎಸ್. ಗೋಪಾಲಕೃಷ್ಣ ಅವರ ದತ್ತಿಯ ಆಶಯದಂತೆ ಜಿಲ್ಲೆಯ ಪುರುಷ ಸಾಹಿತಿಗಳ ಕನ್ನಡದ ಕೃತಿಗಳನ್ನು ಆಯ್ಕೆಗೊಳಿಸಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳು ನಡೆಯಲಾರಂಭಿಸಿದೆ’ ಎಂದು ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ತಿಳಿಸಿದರು.

ಕೇರಳ ಗಡಿನಾಡಿನಲ್ಲಿ ಯಾವುದೇ ಕನ್ನಡ ಶಾಲೆಗಳನ್ನು ಮುಚ್ಚಲು ಬಿಡುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಪರಿಷತ್ತಿನ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮ್ಮದ್, ಪುದಿಯನೆರವನ ರೇವತಿ ರಮೇಶ್, ಕೋಶಾಧಿಕಾರಿ ಸಂಪತ್ ಕುಮಾರ್, ಸಂಘಟನಾ ಕಾರ್ಯದರ್ಶಿ ವಾಸು ರೈ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.