ADVERTISEMENT

ಕಾಡಾನೆ ದಾಳಿ: ಕಾವಲುಗಾರ ಸಾವು

ಸ್ಥಳೀಯರಲ್ಲಿ ಆತಂಕ, ಎಚ್ಚರವಾಗಿರಲು ಅರಣ್ಯ ಇಲಾಖೆ ಸೂಚನೆ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 7:28 IST
Last Updated 30 ಜನವರಿ 2026, 7:28 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಸಿದ್ದಾಪುರ (ಕೊಡಗು ಜಿಲ್ಲೆ): ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ವಿರಾಜಪೇಟೆ ತಾಲ್ಲೂಕಿನ ಸಿದ್ಧಾಪುರದ ಕಾಫಿ ತೋಟದ ಕಾವಲುಗಾರ ಅಬ್ದುಲ್ ಲತೀಫ್‌(72) ಎಂಬುವವರು ಗುರುವಾರ ಮೃತಪಟ್ಟರು.

ADVERTISEMENT

ಬಾಡಗ ಬಾಣಂಗಾಲ ಗ್ರಾಮದ ಕಾಫಿ ತೋಟವೊಂದರಲ್ಲಿ ಅದೇ ಗ್ರಾಮದ ಹುಂಡಿಯ ನಿವಾಸಿ ಅಬ್ದುಲ್ ಲತೀಫ್ (72) ಎಂಬವರು ಕೆಲಸ ಮಾಡುತ್ತಿದ್ದರು. ಗುರುವಾರ ಮದ್ಯಾಹ್ನ ಕೆಲಸ ಮುಗಿಸಿ ಊಟಕ್ಕೆ ತೆರಳುತ್ತಿದ್ದ ವೇಳೆ ತೋಟದ ಒಳಗಿನಿಂದ ಏಕಾಏಕಿ ಸಲಗವೊಂದು ದಾಳಿ ನಡೆಸಿದ್ದು, ಲತೀಫ್ ಗಂಭೀರವಾಗಿ ಗಾಯಗೊಂಡರು. ಕಾಡಾನೆ ದಾಳಿಯಿಂದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇತರೆ ಕೆಲಸದವರು ದಿಕ್ಕುಪಾಲಾಗಿ ಓಡಿದ್ದಾರೆ. ಲತೀಫ್ ಮೇಲೆ ದಾಳಿ ನಡೆಸಿದ ಬಳಿಕ ಸಲಗವು ತೋಟಕ್ಕೆ ಮರಳಿತ್ತು. ಕಾರ್ಮಿಕ ದೀಪಕ್ ಎಂಬುವವರು ಲತೀಫ್ ಅವರನ್ನು ರಕ್ಷಿಸಲು ಮುಂದಾಗಿದ್ದರು. ಈ ವೇಳೆ ಕಾಡಾನೆ ಮರಳಿ ಬಂದು ದಾಳಿ ನಡೆಸಲು ಯತ್ನಿಸಿದ್ದು, ದೀಪಕ್ ತೋಟಕ್ಕೆ ಓಡಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾದರು. ಕಾಡಾನೆ ದಾಳಿಯಿಂದ ತಪ್ಪಿಸಿಕೊಳ್ಳಲು ಓಡಿದ ವೇಳೆ ದೀಪಕ್ ಕಾಲಿಗೆ ಗಾಯವಾಗಿದೆ. ಬಳಿಕ ಕಾರ್ಮಿಕರು ಲತೀಫ್ ಅವರನ್ನು ಆಸ್ಪತ್ರೆಗೆ ಸಾಗಿಸಿದರಾದರೂ ಅವರು ಮೃತಪಟ್ಟರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಸ್ಥಳಕ್ಕೆ ಎ.ಸಿ.ಎಫ್ ತಹಸಿನ್ ಭಾನು ಹಾಗೂ ಗೋಪಾಲ್, ವಿರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಂ ಹಾಗೂ ಸಿಬ್ಬಂದ ಭೇಟಿ ನೀಡಿ ಪರಿಶೀಲನೆ ನಡೆಸಿದರು.

‘ಸರ್ಕಾರದಿಂದ ತುರ್ತು ಪರಿಹಾರವಾಗಿ ₹ 5 ಲಕ್ಷ ಚೆಕ್ ಅನ್ನು ಕುಟುಂಬಸ್ಥರಿಗೆ ನೀಡಲಾಯಿತು. ಇನ್ನುಳಿದ ಪರಿಹಾರದ ಹಣವನ್ನು ಶೀಘ್ರದಲ್ಲೆ ಕೊಡಲಾಗುವುದು. ಬೆಳಿಗ್ಗೆ ಕಾಡಾನೆಗಳಿರುವ ಕುರಿತ ಮಾಹಿತಿಯನ್ನು ಸ್ಥಳೀಯರು ಮೊಬೈಲ್‌ಗಳಿಗೆ ಕಳುಹಿಸಲಾಗಿತ್ತು’ ಎಂದು ಡಿಸಿಎಫ್ ಜಗನ್ನಾಥ್ ‘‍‍ಪ್ರಜಾವಾಣಿ’ಗೆ ತಿಳಿಸಿದರು.

ಸಿದ್ದಾಪುರ ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಾಸಕ ಎ.ಎಸ್ ಪೊನ್ನಣ್ಣ ದೂರವಾಣಿ ಕರೆ ಮೂಲಕ ಕುಟುಂಬಕ್ಕೆ ಸಾಂತ್ವನ ಹೇಳಿದರು.

ಮಾಲ್ದಾರೆ ಗ್ರಾಮ ಪಂಚಾಯಿತಿ ಸದಸ್ಯ ಎಂ.ಬಿ ಹನೀಫ್ ಮಾತನಾಡಿ, ‘ಕಾಡಾನೆಗಳು ಹಾಡ ಹಗಲಲ್ಲೇ ರಾಜಾರೋಷವಾಗಿ ಜನವಸತಿ ಪ್ರದೇಶದಲ್ಲಿ ಓಡಾಡುತ್ತಿದೆ. ಕಾಫಿ ತೋಟದ ಕಾರ್ಮಿಕರು, ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕರು ಜೀವಭಯದಲ್ಲೇ ಓಡಾಡುವಂತಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.