
ಮಡಿಕೇರಿ: ರಾಜ್ಯದಲ್ಲಿ ಸ್ಥಗಿತಗೊಂಡಿದ್ದ ಸಫಾರಿ ಮತ್ತೆ ಆರಂಭವಾಗಿದೆ. ಇದನ್ನು ಪ್ರವಾಸಿಗರಲ್ಲಿ ಮಾತ್ರವಲ್ಲ ಪ್ರವಾಸೋದ್ಯಮವನ್ನೇ ನೆಚ್ಚಿಕೊಂಡಿರುವ ಪ್ರವಾಸೋದ್ಯಮಿಗಳು, ಹೋಟೆಲ್ ಮಾಲೀಕರು ಸೇರಿದಂತೆ ಹಲವು ವಲಯಗಳ ಜನರು ಸ್ವಾಗತಿಸಿದ್ದಾರೆ. ಆದರೆ, ಅರಣ್ಯದಂಚಿನ ಜನರು, ರೈತರು, ಬೆಳೆಗಾರರು ವಿರೋಧಿಸಿದ್ದಾರೆ. ಜೊತೆಗೆ, ವನ್ಯಜೀವಿಗಳ ದಾಳಿಗೆ ಸಿಲುಕಿ ನೊಂದವರು ಟೀಕಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕೇವಲ ನಾಣಚ್ಚಿಯಲ್ಲಿ ಮಾತ್ರವೇ ಸಫಾರಿ ಇದೆ. ಆದರೆ, ಕೊಡಗು ಜಿಲ್ಲೆಯನ್ನೂ ಒಳಗೊಂಡಿರುವ ನಾಗರಹೊಳೆಯ ಎಚ್.ಡಿ.ಕೋಟೆ ತಾಲ್ಲೂಕು, ಹುಣಸೂರು ತಾಲ್ಲೂಕುಗಳಲ್ಲಿಯೂ ಸಫಾರಿ ಇದೆ. ಹೀಗಾಗಿ, ಸಫಾರಿ ಜಿಲ್ಲೆಯ ವ್ಯಾಪ್ತಿಯಲ್ಲಿ ಇರಲಿ, ಇಲ್ಲದಿರಲಿ ಅದರ ಪರಿಣಾಮಗಳು ಕೊಡಗಿನ ಮೇಲಾಗುತ್ತದೆ ಎಂದು ರೈತರು ವಾದಿಸುತ್ತಾರೆ.
ಸಫಾರಿಯಿಂದ ಮಾನವ ಚಟುವಟಿಕೆಗಳು ಮಾತ್ರವಲ್ಲ ಜೀಪ್ ಮತ್ತು ಬಸ್‌ಗಳಂತಹ ಮೋಟಾರು ವಾಹನಗಳ ಓಡಾಟ ಕಾಡಿನೊಳಗೆ ಹೆಚ್ಚಾಗುತ್ತದೆ. ಇದರಿಂದ ವಿಚಲಿತಗೊಳ್ಳುವ ವನ್ಯಜೀವಿಗಳು ಕಾಡಿನಂಚಿಗೆ ಹಾಗೂ ಊರಿಗೆ ಬರುತ್ತವೆ. ತೋಟ, ಗದ್ದೆಗಳನ್ನು ಸೇರುತ್ತವೆ. ಇದರಿಂದ ವನ್ಯಜೀವಿ ಮತ್ತು ಮಾನವ ಸಂಘರ್ಷ ಹೆಚ್ಚುತ್ತದೆ ಎಂಬುದು ರೈತರ ವಾದ.
ಮತ್ತೊಂದೆಡೆ, ಪ್ರವಾಸೋದ್ಯಮಿಗಳು ಇದನ್ನು ನಿರಾಕರಿಸುತ್ತಾರೆ. ಕೇವಲ ಸಫಾರಿ ಮಾತ್ರದಿಂದಲೇ ಮಾನವ– ವನ್ಯಜೀವಿಗಳ ಸಂಘರ್ಷ ಹೆಚ್ಚುತ್ತದೆ ಎಂಬುದಕ್ಕೆ ಯಾವುದೇ ನಿಖರ ಕಾರಣಗಳಿಲ್ಲ ಎಂದು ಅವರು ಹೇಳುತ್ತಾರೆ. ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಇಡೀ ಜಗತ್ತಿನಲ್ಲೇ ಸಫಾರಿ ಇದೆ. ಕೆಲವೊಂದು ದೇಶಗಳಲ್ಲಿ ಸಫಾರಿಯೇ ಆ ದೇಶಗಳ ಪ್ರಮುಖ ಆದಾಯದ ಮೂಲವೂ ಆಗಿದೆ. ಇಲ್ಲೂ ಅನೇಕ ವರ್ಷಗಳಿಂದ ಸಫಾರಿ ಇದೆ. ಸಫಾರಿ ಆರಂಭವಾಗುವುದಕ್ಕೂ ಮುನ್ನವೂ ವನ್ಯಜೀವಿ– ಮಾನವ ಸಂಘರ್ಷ ಇತ್ತು. ಆರಂಭವಾದ ನಂತರವೂ ಇದೆ. ಹಾಗಾಗಿ, ಸಫಾರಿ ನಿಲ್ಲಿಸಿದರೆ ವನ್ಯಜೀವಿ– ಮತ್ತು ಮಾನವ ಸಂಘರ್ಷ ಸಂಪೂರ್ಣ ನಿಲ್ಲುತ್ತದೆ ಎಂಬುದಕ್ಕೆ ಆಧಾರ ಇಲ್ಲ ಎಂದು ಪ್ರವಾಸೋದ್ಯಮಿಗಳು ಸಫಾರಿಯನ್ನು ಸಮರ್ಥಿಸಿಕೊಳ್ಳುತ್ತಾರೆ.
ಕರ್ನಾಟಕದಲ್ಲಿ ಸಫಾರಿಯನ್ನು ಬಂದ್ ಮಾಡಿದರೂ ಕೊಡಗಿಗೆ ಕೂಗಳತೆ ದೂರದಲ್ಲಿರುವ ಪಕ್ಕದ ರಾಜ್ಯಗಳಲ್ಲಿ ಸಫಾರಿ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ಪಕ್ಕದ ರಾಜ್ಯಗಳತ್ತ ತೆರಳುತ್ತಾರೆ. ಹಾಗಾಗಿ, ಸಫಾರಿಯನ್ನು ಆರಂಭಿಸುವುದು ಒಳ್ಳೆಯದೇ ಆಯಿತು ಎನ್ನುವುದು ಅವರ ಸ್ಪಷ್ಟೋಕ್ತಿ.
ಕೆಲವು ಪರಿಸರವಾದಿಗಳು ಹಾಗೂ ಜನರು ಸಫಾರಿ ಇರಲಿ, ಆದರೆ, ನಿಯಂತ್ರಣದಲ್ಲಿರಲಿ ಎಂದು ಹೇಳುತ್ತಾರೆ. ಸಫಾರಿಯ ಸಮಯದ ಪಾಲನೆ ಕಡ್ಡಾಯ. ಮಾತ್ರವಲ್ಲ, ಒಂದು ಬಾರಿಗೆ ಸಫಾರಿಗೆ ತೆರಳು ಜನರ ಸಂಖ್ಯೆ, ವಾಹನಗಳ ಸಂಖ್ಯೆ, ವಾಹನಗಳಲ್ಲಿ ಜನರ ಸಂಖ್ಯೆ ಇವೆಲ್ಲವೂ ವೈಜ್ಞಾನಿಕವಾಗಿಯೇ ಇರಬೇಕು. ಮತ್ತು ಈ ಎಲ್ಲ ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು. ಆಗ ಸಫಾರಿಯಿಂದ ಪ್ರಾಣಿಗಳಿಗೆ ತೊಂದರೆಯಾಗುವುದಿಲ್ಲ ಎಂದು ಪ್ರತಿಪಾದಿಸುತ್ತಾರೆ.
ಇನ್ನು ಅರಣ್ಯಾಧಿಕಾರಿಗಳು ಸರ್ಕಾರದ ಆದೇಶವನ್ನು ನಾವು ಚಾಚೂತಪ್ಪದೇ ಪಾಲಿಸುತ್ತೇವೆ. ಇದರಲ್ಲಿ ನಮ್ಮ ಸ್ವಂತ ಅಭಿಪ್ರಾಯ ಇಲ್ಲ ಎಂದು ಹೇಳುತ್ತಾರೆ.
ಪ್ರತಿಕ್ರಿಯೆಗಳು
ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ಬೇಡ ಹುಲಿ ಸಂರಕ್ಷಿತ ಅರಣ್ಯದಲ್ಲಿ ಸಫಾರಿ ಬೇಡವೇ ಬೇಡ. ಒಂದು ವೇಳೆ ಹುಲಿಯನ್ನು ಪ್ರವಾಸಿಗರಿಗೆ ತೋರಿಸಲೇ ಬೇಕು ಎಂದಿದ್ದರೆ ಮೃಗಾಲಯದಲ್ಲಿ ತೋರಿಸಿ. ಇಲ್ಲವೆ ರೈತರ ಭೂಮಿಗಿಂತ ದೂರದ ಪ್ರದೇಶದಲ್ಲಿ ಕಾಡಿನಂತಹ ಮೃಗಾಲಯ ನಿರ್ಮಿಸಿ ಅಲ್ಲಿ ಸಫಾರಿ ಮಾಡಿ. ಅದನ್ನು ಬಿಟ್ಟು ಹುಲಿಗಳು ಹೆಚ್ಚಿನ ಸಂಖ್ಯೆಯಲ್ಲಿರುವ ಅರಣ್ಯದಲ್ಲಿ ಸಫಾರಿ ಮಾಡುವುದು ಸರಿಯಲ್ಲ. ಇದರ ವಿರುದ್ಧ ಕೊಡಗಿನಲ್ಲಿ ಮಾತ್ರವಲ್ಲ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು
ಮನು ಸೋಮಯ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ
---
ಸಫಾರಿ ಬೇಕು ಆದರೆ ನಿಯಮಗಳನ್ನು ಪಾಲಿಸಿ ಕರ್ನಾಟಕದಲ್ಲಿ ಸಫಾರಿ ಬೇಕು. ಸಫಾರಿ ಎನ್ನುವುದು ಕೇವಲ ಕರ್ನಾಟಕದಲ್ಲಿ ಮಾತ್ರವೇ ಇಲ್ಲ. ಅದು ಇಡೀ ಜಗತ್ತಿನೆಲ್ಲೆಡೆ ಇದೆ. ಹಾಗಾಗಿ ಸಫಾರಿ ಬೇಡ ಎನ್ನುವುದು ಸರಿಯಲ್ಲ. ಆದರೆ ಸಫಾರಿ ಬೇಕು ಎಂದಾಕ್ಷಣ ಬೇಕಾಬಿಟ್ಟಿ ಸಫಾರಿ ತರವಲ್ಲ. ನಿಯಮಗಳನ್ನು ಕಾನೂನುಗಳನ್ನು ಪಾಲಿಸಬೇಕು. ಸಮಯ ಪರಿಪಾಲನೆ ಮತ್ತು ಒಂದು ಬಾರಿ ಎಷ್ಟು ಜನರ ಹೋಗಬೇಕು ಎಂಬ ನಿಯಮ ಮತ್ತು ಒಂದು ವಾಹನದಲ್ಲಿ ಜನರ ಮಿತಿ ಇವೆಲ್ಲವನ್ನೂ ಚಾಚೂತಪ‍್ಪದೇ ಪಾಲಿಸಬೇಕು
-ದಿನೇಶ್ ಕಾರ್ಯಪ್ಪ ಕೂರ್ಗ್ ಹೋಟೆಲ್ ರೆಸಾರ್ಟ್ ಅಸೋಸಿಯೇಷನ್‌ನ ಅಧ್ಯಕ್ಷ.
----
ಸಫಾರಿ ಬೇಕು. ಆದರೆ ಪ‍್ರಾಣಿಗಳಿಗೆ ತೊಂದರೆಯಾಗಬಾರದು ಸಫಾರಿ ಆರಂಭವಾಗಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು. ಸಂಪೂರ್ಣ ಬಂದ್ ಮಾಡುವುದು ಉತ್ತಮ ನಿರ್ಧಾರ ಅಲ್ಲ. ನೆಗಡಿ ಬಂತೆಂದು ಮೂಗನ್ನೇ ಕತ್ತರಿಸುವುದು ಸರಿಯಲ್ಲ. ಸಮಸ್ಯೆಗಳಿಗೆ ಪರಿಹಾರ ಹುಡುಕಬೇಕು. ಸಫಾರಿ ಬೇಕು. ಅದರೆ ಪ್ರಾಣಿಗಳಿಗೆ ತೊಂದರೆಯಾಗಬಾರದು
-ಬಿ.ಆರ್.ನಾಗೇಂದ್ರಪ್ರಸಾದ್ ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ.
----
ನಿಯಂತ್ರಿತ ಸಫಾರಿ ಇರಲಿ ಸಫಾರಿ ಮೇಲೆ ಸಂಪೂರ್ಣ ನಿಷೇಧ ಹೇರುವುದು ಸರಿಯಲ್ಲ. ಸಫಾರಿ ಬೇಕು ಎಂದರೆ ಅದು ಅನಿಯಂತ್ರಿತವಾದ ಸಫಾರಿ ಅಲ್ಲ. ನಿಯಂತ್ರಿತವಾದ ಸೀಮಿತವಾದ ಸಫಾರಿ ಇರಲಿ. ಪ್ರಾಣಿಗಳಿಗೆ ತೊಂದರೆಯಾಗದಂತಹ ಸಫಾರಿ ಇರಲಿ.
-ಕರ್ನಲ್ ಸಿ.ಪಿ.ಮುತ್ತಣ್ಣ ಪರಿಸರವಾದಿ ಹಾಗೂ ಪರಿಸರ ಮತ್ತು ಆರೋಗ್ಯ ಫೌಂಡೇಷನ್‌ನ ಅಧ್ಯಕ್ಷ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.