ADVERTISEMENT

ಕಡಿಮೆಯಾಗುತ್ತಿದೆ ಮಣ್ಣಿನ ರಸಸಾರ: ಪರೀಕ್ಷೆ ಮಾಡಿಸಲು ಕೃಷಿ ವಿಜ್ಞಾನಿಗಳ ಮನವಿ

ಕೆ.ಎಸ್.ಗಿರೀಶ್
Published 5 ಡಿಸೆಂಬರ್ 2024, 6:31 IST
Last Updated 5 ಡಿಸೆಂಬರ್ 2024, 6:31 IST
ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ತಜ್ಞರು ಮಣ್ಣು ಪರೀಕ್ಷೆ ಮಾಡುತ್ತಿರುವುದು
ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ತಜ್ಞರು ಮಣ್ಣು ಪರೀಕ್ಷೆ ಮಾಡುತ್ತಿರುವುದು   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿನ ಮಣ್ಣು ವರ್ಷದಿಂದ ವರ್ಷಕ್ಕೆ ತನ್ನ ಗುಣಮಟ್ಟ ಕಳೆದುಕೊಳ್ಳುತ್ತಿದ್ದು, ಎಚ್ಚೆತ್ತುಕೊಳ್ಳದೇ ಹೋದರೆ ರಾಜ್ಯದ ಇತರೆ ಜಿಲ್ಲೆಗಳಲ್ಲಿರುವಂತೆ ಸಾರಹೀನವಾಗುವ ಭೀತಿ ಮೂಡಿದೆ. ಹಾಗಾಗಿ, ಎಲ್ಲ ರೈತರು, ಬೆಳೆಗಾರರು ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಂಡು, ಕೃಷಿ ತಜ್ಞರ ಸಲಹೆಯ ಪ್ರಕಾರವೇ ಭೂಮಿಗೆ ರಸಗೊಬ್ಬರ ಹಾಕಬೇಕಿದೆ.

‘ಸಾಮಾನ್ಯವಾಗಿ ಮಣ್ಣಿನ ರಸಸಾರ ಕಾಫಿ ಬೆಳೆಗೆ 6.1ರಿಂದ 6.3ರವರೆಗೆ ಇರಬೇಕಿದೆ. ಆದರೆ, ಮಣ್ಣಿನ ರಸಸಾರ ನಿಗದಿತ ಪ್ರಮಾಣಕ್ಕಿಂತಲೂ ತೀರಾ ಕಡಿಮೆ ಇರುವುದು ಪರೀಕ್ಷೆಗಳಿಂದ ಗೊತ್ತಾಗಿದೆ’ ಎಂದು ಚೆಟ್ಟಳ್ಳಿಯಲ್ಲಿರುವ ಕಾಫಿ ಸಂಶೋಧನಾ ಉಪಕೇಂದ್ರ ಹಾಗೂ ಗೋಣಿಕೊಪ್ಪಲಿನಲ್ಲಿರುವ ಕೃಷಿ ವಿಜ್ಞಾನ ಕೇಂದ್ರದ ತಜ್ಞರು ಹೇಳುತ್ತಾರೆ. ಇದು ನಿಜಕ್ಕೂ ಕೊಡಗಿನ ಮಣ್ಣಿಗೆ ಎಚ್ಚರಿಕೆಯ ಕರೆ ಗಂಟೆ ಎನಿಸಿದೆ. ಈಗಲೇ ಎಚ್ಚೆತ್ತುಕೊಂಡು ಕೃಷಿ ವಿಜ್ಞಾನಿಗಳ ಸಲಹೆ ಪ್ರಕಾರ ಮಣ್ಣು ಸಂರಕ್ಷಣಾ ವಿಧಾನಗಳನ್ನು ಅನುಸರಿಸಿದರೆ ಸುಸ್ಥಿರವಾದ ಇಳುವರಿ ಖಂಡಿತ ಸಾಧ್ಯವಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದ ಮಣ್ಣು ವಿಜ್ಞಾನಿ ಡಾ.ನಡಾಫ್, ‘ಕೇವಲ ಮಣ್ಣಿನ ರಸಸಾರ ಮಾತ್ರವಲ್ಲ ಸಾವಯದ ಪ್ರಮಾಣವೂ ಕಡಿಮೆ ಇರುವುದು ಪರೀಕ್ಷೆಗಳಿಂದ ಗೊತ್ತಾಗಿದೆ. ಹೆಚ್ಚಿನ ಜನರು ಯಾವುದೇ ಮಣ್ಣು ಪರೀಕ್ಷೆ ಮಾಡದೇ ತಮಗೆ ತಿಳಿದಂತೆ ಅಥವಾ ಬೇರೆ ಯಾರೋ ಹೇಳಿದಂತೆ ರಸಗೊಬ್ಬರಗಳನ್ನು ಹಾಕುವುದರಿಂದ ಮಣ್ಣು ಮತ್ತಷ್ಟೂ ಸತ್ವ ಕಳೆದುಕೊಳ್ಳುತ್ತಿದೆ. ಹಾಗಾಗಿ, ಕಡ್ಡಾಯವಾಗಿ ಎಲ್ಲರೂ ಮಣ್ಣು ಪರೀಕ್ಷೆ ಮಾಡಿಸಿಯೇ ರಸಗೊಬ್ಬರ ಹಾಕಬೇಕು’ ಎಂದು ಹೇಳುತ್ತಾರೆ.

ADVERTISEMENT

ಒಂದೇ ಎಸ್ಟೇಟ್‌ನಲ್ಲಿ 5ರಿಂದ 6 ಕಡೆಯ ಮಣ್ಣುಗಳನ್ನಾದರೂ ‍ಪರೀಕ್ಷೆಗೆ ಒಳಪಡಿಸಬೇಕಿದೆ. ತಜ್ಞರ ಶಿಫಾರಸ್ಸುಗಳನ್ನು ಪಾಲಿಸಬೇಕಿದೆ.

ಹೆಚ್ಚು ಮಳೆ ಸುರಿದಾಗ ಸಾಮಾನ್ಯವಾಗಿ ಹರಿಯುವ ಹೊಳೆಯ ನೀರಿನ ಬಣ್ಣ ಕೆಂಪಾಗುವುದು ಸಹ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಮಣ್ಣಿನ ಮೇಲ್ಮೈ ಪದರ ಬಹಳ ಸುಲಭವಾಗಿ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದೆ. ಇದರಿಂದ ಎಲೆಗಳು ಉದುರಿ ಅಲ್ಲಿಯೇ ಕೊಳೆತು ತಯಾರಾದ ಸಾವಯವ ಅಂಶಗಳೂ ಹೊಳೆ ಪಾಲಾಗುತ್ತಿದೆ. ಇದನ್ನು ತಪ್ಪಿಸಲು ತಜ್ಞರ ಸಲಹೆಯ ಪ್ರಕಾರ ಇಳಿಜಾರಿನಲ್ಲಿ, ಸಮತಟ್ಟು ಭೂಮಿಯಲ್ಲಿ ಹಾಗೂ ಎತ್ತರದ ಪ್ರದೇಶದಲ್ಲಿ ಮಣ್ಣು ಸಂರಕ್ಷಣಾ ಕ್ರಮಗಳನ್ನು ಕೈಗೊಂಡರೆ ಮಣ್ಣಿನ ಸವಕಳಿ ತಪ್ಪಿಸಬಹುದು.

ಸದ್ಯ, ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರದಲ್ಲಿ ₹ 150 ಶುಲ್ಕ ಪಡೆದು ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ. ವರ್ಷಕ್ಕೆ 3,500 ಮಣ್ಣು ಮಾದರಿಗಳನ್ನು ಇಲ್ಲಿ ಪರೀಕ್ಷಿಸಲಾಗುತ್ತಿದೆ. ಕೃಷಿ ಇಲಾಖೆಗೆ ಸೇರಿದ ಮಣ್ಣು ಪರೀಕ್ಷಾ ಕೇಂದ್ರವು ಕೂಡಿಗೆಯಲ್ಲಿದ್ದು, ₹ 200 ಪಡೆದು, ಮಣ್ಣು ಪರೀಕ್ಷೆ ಮಾಡಲಾಗುತ್ತಿದೆ. ವರ್ಷಕ್ಕೆ ಸುಮಾರು 6ರಿಂದ 8 ಸಾವಿರ ಮಣ್ಣನ್ನು ಪರೀಕ್ಷಿಸಲಾಗುತ್ತಿದೆ.

ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ₹ 300 ಶುಲ್ಕ ಪಡೆದು ಮಣ್ಣು ಪರೀಕ್ಷೆ ಮಾಡಲಾಗುತ್ತಿದ್ದು, ವರ್ಷಕ್ಕೆ 900ರಿಂದ 1,200 ಮಾದರಿಗಳನ್ನು ಪರೀಕ್ಷಿಸಲಾಗುತ್ತಿದೆ.

ಕೃಷಿ ಇಲಾಖೆಯ ಶಾಲಾ ಮಣ್ಣು ಪರೀಕ್ಷಾ ಯೋಜನೆಯ ಅಂಗವಾಗಿ ವಿರಾಜಪೇಟೆ ತಾಲ್ಲೂಕಿನ ಬಾಳಗೂಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳು ರೈತರ ಜಮೀನುಗಳಿಗೆ ತೆರಳಿ ಪರೀಕ್ಷೆಗೆಂದು ಮಣ್ಣು ತೆಗೆಯುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿತರು
ಕೊಡಗಿನಲ್ಲಿ ಇನ್ನೂ ಮೂಡಬೇಕಿದೆ ವೈಜ್ಞಾನಿಕ ಅರಿವು ಆದ್ಯತೆ ವಿಷಯವಾಗಬೇಕಿದೆ ಮಣ್ಣು ಸಂರಕ್ಷಣೆ  ಎಲ್ಲ ಬೆಳೆಗಾರರೂ ಕಡ್ಡಾಯವಾಗಿ ಮಣ್ಣು ಪರೀಕ್ಷೆ ಮಾಡಿಸಲು ಸಲಹೆ
ಅವೈಜ್ಞಾನಿಕವಾಗಿ ಗೊಬ್ಬರ ಹಾಕುವುದನ್ನು ಬಿಡಬೇಕು. ಮಣ್ಣು ಪರೀಕ್ಷೆ ಮಾಡಿಸಿಯೇ ಶಿಫಾರಸ್ಸಿನ ಪ್ರಕಾರ ಗೊಬ್ಬರ ನೀಡಬೇಕು. ಪ್ಲಾಸ್ಟಿಕ್ ತ್ಯಾಜ್ಯವನ್ನು ಮಣ್ಣಿನಿಂದ ದೂರ ಹಾಕಬೇಕು
ಡಾ.ನಡಾಫ್ ಮಣ್ಣು ವಿಜ್ಞಾನಿ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಉಪಕೇಂದ್ರ
ಕನಿಷ್ಠ 3 ವರ್ಷಕ್ಕೆ ಒಮ್ಮೆಯಾದರೂ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಎಲ್ಲ ಬೆಳೆಗಾರರೂ ಮಾಡಿಸಲೇಬೇಕು. ಸಾವಯವ ಗೊಬ್ಬರವನ್ನು ಮಣ್ಣಿಗೆ ಸೇರ್ಪಡೆ ಮಾಡಬೇಕು
ಡಾ.ಕೆ.ವಿ.ವೀರೇಂದ್ರಕುಮಾರ್ ವಿಜ್ಞಾನಿ ಸಸ್ಯ ಸಂರಕ್ಷಣೆ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ
ಮಣ್ಣಿನಲ್ಲಿ ಸಾವಯವ ಇಂಗಾಲ ಹಾಗೂ ಲಘು ಪೋಷಾಕಾಂಶಗಳು ಕಡಿಮೆಯಾಗುತ್ತಿವೆ. ಪ್ರತಿ 2ರಿಂದ 3 ವರ್ಷಗಳಿಗೆ ಒಮ್ಮೆಯಾದರೂ ಮಣ್ಣು ಪರೀಕ್ಷೆ ಮಾಡಿಸಬೇಕು
ಚಂದ್ರಶೇಖರ್ ಕೃಷಿ ಇಲಾಖೆಯ ಜಂಟಿ ನಿರ್ದೇಶಕ
ಕೇಂದ್ರ ಸರ್ಕಾರದ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ ಕೊಡಗು ಜಿಲ್ಲೆಯಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗಿದೆ. ಮಕ್ಕಳಿಗೆ ಮಣ್ಣು ಪರೀಕ್ಷೆಯ ಪ್ರಾಯೋಗಿಕ ಅರಿವು ಮೂಡಿಸಲಾಗಿದೆ
ಮೈತ್ರಿ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ
ಕೊಡಗಿನಲ್ಲಿ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ
ಕೇಂದ್ರ ಸರ್ಕಾರದ ಶಾಲಾ ಮಣ್ಣು ಆರೋಗ್ಯ ಕಾರ್ಯಕ್ರಮ ಕೊಡಗು ಜಿಲ್ಲೆಯಲ್ಲಿ ಕೃಷಿ ಇಲಾಖೆಯ ಮೂಲಕ ಜಾರಿಯಾಗಿದ್ದು ವಿರಾಜಪೇಟೆ ತಾಲ್ಲೂಕಿನ ಬಾಳಗೋಡುವಿನ ಏಕಲವ್ಯ ಮಾದರಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಮಣ್ಣಿನ ಪರೀಕ್ಷೆ ವಿಶ್ಲೇಷಣೆಗಳನ್ನು ಕಲಿಸಲಾಗಿದೆ. ಪರಿಸರ ದಿನಾಚರಣೆಯಂದು ಈ ಯೋಜನೆಗೆ ಚಾಲನೆ ನೀಡಲಾಯಿತು. ಕೃಷಿ ಇಲಾಖೆ ಗೋಣಿಕೊಪ್ಪಲಿನ ಕೃಷಿ ವಿಜ್ಞಾನ ಕೇಂದ್ರ ಹಾಗೂ ಶಾಲೆಯ ವತಿಯಿಂದ 25 ಮಕ್ಕಳಿಗೆ ಮಣ್ಣು ಪರೀಕ್ಷೆಯ ತರಬೇತಿ ನೀಡಲಾಯಿತು. 50 ರೈತರ ಜಮೀನುಗಳಿಗೆ ಮಕ್ಕಳನ್ನು ಕರೆದುಕೊಂಡು ಹೋಗಿ ಅವರಿಂದಲೇ ಮಾದರಿಯನ್ನು ಸಂಗ್ರಹಿಸಲಾಯಿತು. ಜಮೀನಿನಲ್ಲಿ ಮಣ್ಣಿನ ಮಾದರಿಯನ್ನು ತೆಗೆಯುವ ವಿಧಾನವನ್ನು ಪ್ರಾಯೋಗಿಕವಾಗಿ ಕಲಿಸಲಾಯಿತು. ಬಳಿಕ ಸರ್ಕಾರ ನೀಡಿದ್ದ ಕಿಟ್‌ಗಳ ಮೂಲಕ ಸಂಗ್ರಹಿಸಿದ ಮಣ್ಣನ್ನು ವಿಶ್ಲೇಷಿಸಲಾಯಿತು. ಇದರಲ್ಲಿ ವಿದ್ಯಾರ್ಥಿಗಳೇ ವಿಶ್ಲೇಷಣೆ ಮಾಡಿ ರೈತರಿಗೆ ಸಲಹೆ ನೀಡಿದ್ದು ವಿಶೇಷವಾಗಿತ್ತು. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಈ ಯೋಜನೆಯ ಕೃಷಿ ಇಲಾಖೆಯ ನೋಡಲ್ ಅಧಿಕಾರಿ ಹಾಗೂ ಆತ್ಮ ಯೋಜನೆಯ ಉಪಯೋಜನಾ ನಿರ್ದೇಶಕಿ ಮೈತ್ರಿ ‘ಈ ಯೋಜನೆಯ ಮೂಲಕ ಮಕ್ಕಳಿಗೆ ಮಣ್ಣು ಪರೀಕ್ಷೆಯ ಪ್ರಾಯೋಗಿಕ ವಿಧಾನವನ್ನು ಕಲಿಸಲಾಯಿತು. ಮಕ್ಕಳೇ ಮಣ್ಣನ್ನು ವಿಶ್ಲೇಷಣೆ ಮಾಡಿದ್ದು ಈ ಯೋಜನೆಯ ವಿಶೇಷ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.