
ಕುಶಾಲನಗರ: ಜೀವನದಿ ಕಾವೇರಿಯ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂಥ ಧಾರ್ಮಿಕ ಕೇಂದ್ರಗಳ ಅಭಿವೃದ್ಧಿಯಾಗಬೇಕು. ಪ್ರವಾಸೋದ್ಯಮ ಕೊಡಗಿನ ಆರ್ಥಿಕ ಶಕ್ತಿ ಆಗಬೇಕು. ಅಭಿವೃದ್ಧಿಯನ್ನು ವಿರೋಧ ಮಾಡಬಾರದು ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು.
ಪಟ್ಟಣದ ಶ್ರೀ ವಾಸವಿ ಕನ್ನಿಕಾಪರಮೇಶ್ವರಿ ಟ್ರಸ್ಟ್, ಆರ್ಯವೈಶ್ಯ ಮಂಡಳಿ ವತಿಯಿಂದ ವಾಸವಿ ಕನ್ನಿಕಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ, ವಾಸವಿ ಸಪ್ತಾಹದ ಅಂಗವಾಗಿ ಶನಿವಾರ ಆಯೋಜಿಸಿದ್ದ 181ನೇ ಮಹಾ ಆರತಿ ಸಂದರ್ಭ ನದಿದಂಡೆಯಲ್ಲಿ ಗಿಡನೆಟ್ಟು ಅವರು ಮಾತನಾಡಿದರು.
ಅತಿಥಿಗಳು ಕಾವೇರಿ ನದಿಗೆ ಸಾಮೂಹಿಕವಾಗಿ ಆರತಿ ಬೆಳಗಿದರು. ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ‘ಮಹಾ ಆರತಿಯಿಂದಗಿ ಕಾವೇರಿ ನದಿ ಸ್ವಲ್ಪ ಸ್ವಚ್ಛವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ಮರ, ಗಿಡ, ಕಲ್ಲು, ಮಣ್ಣು, ನದಿಗಳಿಗೆ ದೇವರ ಸ್ಥಾನಕೊಟ್ಟಿದೆ.ಆದರೆ ಜನಸಂಖ್ಯೆ ಹೆಚ್ಚಿದಂತೆ ಪ್ರಕೃತಿಯ ಮೇಲೆ ದಾಳಿ ಅಧಿಕವಾಗಿ ಪ್ರಕೃತಿಯನ್ನು ಅವನತಿಯ ಕಡೆಗೆ ಕೊಂಡ್ಯೊತ್ತಿದ್ದೇವೆ’ ಎಂದು ಆತಂಕ ವ್ಯಕ್ತಪಡಿಸಿದರು.
ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸರ್ಕಾರ, ಸ್ಥಳೀಯ ಆಡಳಿತಗಳ ಜತೆಯಲ್ಲಿ ನಾಗರಿಕರಿಗೂ ಜವಾಬ್ದಾರಿ ಇದೆ. ಜನಸಂಖ್ಯೆ ಹೆಚ್ಚಿದಂತೆ ಬಡಾವಣೆಗಳ ಸಂಖ್ಯೆ ಕೂಡ ವೃದ್ದಿಸುತ್ತಿದೆ. ಕಲುಷಿತ ನೀರು ನದಿ ಸೇರುತ್ತಿದೆ, ನದಿ ತಟ ಆಕ್ರಮಣಗೊಳ್ಳುತ್ತಿದೆ. ನದಿ ಬಫರ್ ಜೋನ್ ಅತಿಕ್ರಮಣ ಸಲ್ಲದು. ನದಿ ಕಲುಷಿತಗೊಳಿಸುವವರು, ನದಿ ತಟ ಆಕ್ರಮಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಿದೆ ಎಂದರು. ನದಿ ಸಂರಕ್ಷಣೆಗೆ ನಿರಂತರ ಪ್ರಯತ್ನ ಅಗತ್ಯವಿದೆ ಎಂದರು.
ಮಾಜಿ ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಸಮಾಜಕ್ಕೆ ಆರ್ಯವೈಶ್ಯ ಸಮುದಾಯ ವಾಸವಿ ಸಪ್ತಾಹದ ಮೂಲಕ ಸಾರ್ವಜನಿಕ ಕಾರ್ಯಗಳನ್ನು ಕೈಗೊಂಡಿರುವುದು ಶ್ಲಾಘನೀಯ ಎಂದರು. ಪಾಸ್ಟಿಕ್ ಬಳಕೆ ನಿಯಂತ್ರಣ, ಕಸ ತ್ಯಾಜ್ಯ ನಿರ್ವಹಣೆಗೆ ಎಲ್ಲರೂ ಮುಂದಾದಾಗ ಮಾತ್ರ ಸ್ವಚ್ಚ ಪರಿಸರ ನಿರ್ಮಾಣ ಸಾಧ್ಯ ಎಂದರು.
ಕಾವೇರಿ ನದಿ ಸ್ವಚ್ಚತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಪ್ರತಿಯೊಬ್ಬರೂ ನದಿಗೆ ಮಾಲೀಕರಾದಾಗ ಮಾತ್ರ ನದಿ ಸಂರಕ್ಷಣೆ ಸಾಧ್ಯ. ನದಿ ಸಂರಕ್ಷಣೆಗೆ ಕಾನೂನು ರೂಪುಗೊಳ್ಳಬೇಕಿದೆ ಎಂದು ಆಗ್ರಹಿಸಿದರು.
ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಹಾಗೂ ಆರ್ಯವೈಶ್ಯ ಮಂಡಳಿ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು.
ವಾಸವಿ ಟ್ರಸ್ಟ್ ಕಾರ್ಯದರ್ಶಿ ಪ್ರವೀಣ್, ಪ್ರಮುಖರದ ವಿ.ಎನ್.ವಸಂತಕುಮಾರ್, ವಿವಿಧ ಸಂಘಸಂಸ್ಥೆಗಳ ಪ್ರಮುಖರು, ಕಾಂಗ್ರೆಸ್, ಬಿಜೆಪಿ ಮುಖಂಡರು , ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡಿದ್ದರು.
ವೈಜ್ಞಾನಿಕ ಕ್ರಮ ಅಗತ್ಯ: ಸಂಸದ
ಕೊಡಗಿನ ಕಾವೇರಿ ನಾಡಿನ ಜೀವನದಿಯಾಗಿದೆ. ಲಕ್ಷಾಂತರ ರೈತರಿಗೆ ಹಾಗೂ ಬೆಂಗಳೂರಿನಂತ ನಗರಕ್ಕೆ ನೀರು ಒದಗಿಸುತ್ತಿದೆ. ನದಿಗಳೊಂದಿಗೆ ಭಾವನಾತ್ಮಕವಾಗಿ ಮುಂದುವರಿಯೋಣ. ಇದು ರಾಜಕೀಯ ವಿಷಯವಲ್ಲ ಬದುಕಿನ ವಿಷಯವಾಗಿದೆ.ಇಂತಹ ಸಂದರ್ಭದಲ್ಲಿ ಕಾವೇರಿಗೆ ಆರತಿ ಅರ್ಥಪೂರ್ಣವಾಗಿದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದರು. ಪ್ರಕೃತಿಯೊಂದಿಗೆ ಮಾನವನ ಭಾವನಾತ್ಮಕ ಸಂಬಂಧ ವೃದ್ಧಿಸಿದಾಗ ಮಾತ್ರ ಪರಿಸರ ಸಂರಕ್ಷಣೆ ಸಾಧ್ಯ. ನದಿಗಳ ಸಂರಕ್ಷಣೆ ನಿಟ್ಟಿನಲ್ಲಿ ವೈಜ್ಞಾನಿಕವಾಗಿ ತಾರ್ಕಿಕ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ರಾಜ್ಯದಲ್ಲಿ ಕಾವೇರಿಗೆ ತಾಯಿ ಸ್ಥಾನ ಕಲ್ಪಿಸಿದ್ದು ಎಲ್ಲರೂ ಕೂಡ ಕಾವೇರಿ ರಕ್ಷಣೆಗೆ ಪಣ ತೊಡಬೇಕಿದೆ. ಇಲ್ಲಿನ ನದಿ ತಟದ ಆರತಿ ಕ್ಷೇತ್ರ ಅಭಿವೃದ್ಧಿಗೆ ಅಗತ್ಯ ಕ್ರಮವಹಿಸುತ್ತೇನೆ ಎಂದು ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.