ADVERTISEMENT

2029ರ ವೇಳೆಗೆ 2 ಲಕ್ಷ ಸಂಘಗಳ ಡಿಜಿಟಲೀಕರಣ: ಸಂಸದ ಯದುವೀರ್ ಒಡೆಯರ್

ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ಶತಮಾನೋತ್ಸವ ಸಮಾರಂಭ

​ಪ್ರಜಾವಾಣಿ ವಾರ್ತೆ
Published 12 ಜನವರಿ 2026, 6:20 IST
Last Updated 12 ಜನವರಿ 2026, 6:20 IST
ಶಾಸಕ ಎ.ಎಸ್.ಪೊನ್ನಣ್ಣ ಅವರು ಶತಸಂಭ್ರಮ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿದರು
ಶಾಸಕ ಎ.ಎಸ್.ಪೊನ್ನಣ್ಣ ಅವರು ಶತಸಂಭ್ರಮ ಕಟ್ಟಡ ನಿರ್ಮಾಣಕ್ಕೆ ಭಾನುವಾರ ಭೂಮಿಪೂಜೆ ನೆರವೇರಿಸಿದರು   

ಮಡಿಕೇರಿ: ಈಗಾಗಲೇ 17 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಡಿಜಿಟಲೀಕರಣ ಕಾರ್ಯ ಪೂರ್ಣಗೊಂಡಿದ್ದು, 2029ರ ವೇಳೆಗೆ 2 ಲಕ್ಷ ಸಂಘಗಳು ಡಿಜಿಟಲೀಕರಣಗೊಳ್ಳಲಿವೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಮಡಿಕೇರಿಯ ಗೌಡ ಸಮಾಜದಲ್ಲಿ ನಡೆದ ಕೊಡಗು ವಿದ್ಯಾ ಇಲಾಖಾ ನೌಕರರ ಪತ್ತಿನ ಸೌಹಾರ್ದ ಸಹಕಾರಿ ಸಂಘದ ‘ಶತಸಂಭ್ರಮ’ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಕೇಂದ್ರ ಸರ್ಕಾರ ನೂತನ ಸಹಕಾರಿ ಕಾಯ್ದೆಯನ್ನು ಜಾರಿಗೆ ತಂದು, ಇದೇ ಪ್ರಥಮ ಬಾರಿಗೆ ಸಹಕಾರ ಖಾತೆಯನ್ನು ರಚಿಸಿ, ಗೃಹ ಸಚಿವ ಅಮಿತ್ ಶಾ ಅವರೇ ಸಹಕಾರ ಸಚಿವರಾಗಿ ಹಲವು ಸುಧಾರಣೆಗಳನ್ನು ತರಲು ಮುಂದಾಗಿದ್ದರಿಂದ ಇದು ಸಾಧ್ಯವಾಗಿದೆ. ಕಾಲೇಜುಗಳಲ್ಲಿ ಸಹಕಾರಿ ಕೋರ್ಸ್‌ಳು ಅರಿವು ಮೂಡಿಸುತ್ತಿವೆ. ಸಹಕಾರ ಚಳುವಳಿಯ ಮೂಲಕ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕು ಎಂದು ಅವರು ಕರೆ ನೀಡಿದರು.

ADVERTISEMENT

ಸಹಕಾರಿ ಸಂಸ್ಥೆಯೊಂದು ಶತಮಾನೋತ್ಸವ ಆಚರಿಸಿಕೊಳ್ಳುತ್ತಿರುವುದು ದೊಡ್ಡ ಮೈಲಿಗಲ್ಲಾಗಿದೆ. ಸಂಘದ ಸ್ಥಾಪಕ ಅಧ್ಯಕ್ಷ ಪಟ್ಟಡ ಎಂ.ಉತ್ತಪ್ಪ ಹಾಗೂ ಸ್ಥಾಪಕ ಕಾರ್ಯದರ್ಶಿ ತೇಲಂಪಡ ಎಂ.ಕಾರ್ಯಪ್ಪ ಅವರನ್ನು ಸ್ಮರಿಸಿ ಗೌರವ ಅರ್ಪಿಸಲೇಬೇಕಾಗಿದೆ. ಸಂಸ್ಥೆಯ ಯಶಸ್ಸಿಗೆ ಈ ಹಿಂದಿನ ಮತ್ತು ಈಗಿನ ಆಡಳಿತ ಮಂಡಳಿಯ ಕೊಡುಗೆಯೂ ಇದೆ ಎಂದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಸಂಘದ ಸದಸ್ಯರಿಗೆ ಹಾಗೂ ಹಿರಿಯ ಸದಸ್ಯರಿಗೆ ಏನೇ ಸಮಸ್ಯೆ ಎದುರಾದರೂ ತಕ್ಷಣ ಸ್ಪಂದಿಸುವ ಕೆಲಸವನ್ನು ಆಡಳಿತ ಮಂಡಳಿ ಮಾಡಬೇಕು, ಇದಕ್ಕೆ ನನ್ನ ಸಂಪೂರ್ಣ ಸಹಕಾರವಿದೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುಜಾ ಕುಶಾಲಪ್ಪ ಮಾತನಾಡಿ, ಶತಸಂಭ್ರಮ ಭವನ ನಿರ್ಮಾಣಕ್ಕೆ ಜುಲೈ ಅಥವಾ ಆಗಸ್ಟ್ ತಿಂಗಳಿನಲ್ಲಿ ಎಂಎಲ್‌ಸಿ ಅನುದಾನದಿಂದ ₹ 5 ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಅಧ್ಯಕ್ಷ ಜಿ.ನಂಜನಗೌಡ ಮಾತನಾಡಿ, ಸಂಘ ನೂರು ವರ್ಷಗಳನ್ನು ಪೂರೈಸಿರುವುದರ ಹಿಂದೆ ಹಲವು ಕಷ್ಟ ನಷ್ಟ, ನೋವುಗಳಿರುತ್ತದೆ. ಮೈಸೂರು ವಲಯದ ಎರಡು ಸಹಕಾರ ಸಂಘಗಳು ಮಾತ್ರ ಶತಮಾನೋತ್ಸವವನ್ನು ಕಂಡಿವೆ. ಬ್ಯಾಂಕ್‌ಗಳು ಗೌರವ ನೀಡುವುದಿಲ್ಲ ಎನ್ನುವ ಕಾರಣಕ್ಕಾಗಿ ಸಹಕಾರ ಚಳುವಳಿಯ ಮೂಲಕ ಆರ್ಥಿಕ ಸೇವೆಯನ್ನು ಆರಂಭಿಸಲಾಯಿತು. ಸಿದ್ದನಗೌಡ ಅವರು ಸಹಕಾರಿ ಕ್ಷೇತ್ರದ ಪಿತಾಮಹರಾಗಿದ್ದಾರೆ. ಕೆಎಂಎಫ್ ನಂತಹ ಬೃಹತ್ ಸಂಸ್ಥೆಯನ್ನು ನೀಡಿದ ಹೆಮ್ಮೆ ಸಹಕಾರಿ ಕ್ಷೇತ್ರಕ್ಕೆ ಸಲ್ಲುತ್ತದೆ ಎಂದು ತಿಳಿಸಿದರು.

ಸಂಘದ ಅಧ್ಯಕ್ಷ ಎಚ್.ಎಸ್.ಚೇತನ್ ಮಾತನಾಡಿ, ಸದಸ್ಯರೇ ಸಂಸ್ಥೆಯ ಜೀವಾಳವಾಗಿದ್ದಾರೆ. ಸದಸ್ಯರ ಸಕ್ರಿಯ ಪಾಲ್ಗೊಳ್ಳುವಿಕೆ ಮತ್ತು ಕಾಳಜಿ ಸಂಘದ ಬೆಳವಣಿಗೆಗೆ ಕಾರಣವಾಗಿದೆ. ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರು ಸಹಕಾರಿ ಕ್ಷೇತ್ರಕ್ಕೂ ಸೈ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ’ ಎಂದು ಹೇಳಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಮಂಗಳೂರಿನ ಕೆಐಒಸಿಎಲ್ ಲಿಮಿಟೆಡ್‌ನ ಡೆಪ್ಯೂಟಿ ಜನರಲ್ ಮ್ಯಾನೇಜರ್ ತೇಲಪಂಡ ಎಂ.ಕಾರ್ಯಪ್ಪ, ಹಿರಿಯರಾದ ಪಟ್ಟಡ ಎ.ಪೂವಣ್ಣ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಸಿ.ನಟೇಶ, ಕೊಡಗು ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಟಿ.ಆರ್.ಶರವಣಕುಮಾರ್, ರಾಜ್ಯ ನೌಕರರ ಸಂಘದ ಹಾಸನ ಜಿಲ್ಲಾಧ್ಯಕ್ಷ ಬಿ.ಪಿ.ಕೃಷ್ಣೇಗೌಡ, ಹಿರಿಯ ಸಹಕಾರಿ ಹಾಗೂ ವಕೀಲ ಬಸವರಾಜ್ ಸಂಗಪ್ಪನವರ್, ಉದ್ಯಮಿ ನಾಪಂಡ ಮುತ್ತಪ್ಪ, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಭಾಗಹಿಸಿದ್ದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ‘ಶತಸಂಭ್ರಮ ಭವನ’ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.

ಹಿರಿಯ ನೂರು ಸಹಕಾರಿಗಳನ್ನು ಶಾಸಕ ಡಾ.ಮಂತರ್ ಗೌಡ ಗೌರವಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ವೈವಿಧ್ಯಮಯ ಮನೋರಂಜನಾ ಕಾರ್ಯಕ್ರಮಗಳು ನಡೆದವು.

ಕಾರ್ಯಕ್ರಮದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿದರು
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಭಿಕರು ಭಾಗವಹಿಸಿದ್ದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.