ADVERTISEMENT

ಮಡಿಕೇರಿ: 23ರಂದು ಅರೆಭಾಷೆಯ ಮೊದಲ ಪೂರ್ಣ ಪ್ರಮಾಣದ ಯಕ್ಷಗಾನ ಕೃತಿಗಳ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 20 ಜುಲೈ 2022, 7:38 IST
Last Updated 20 ಜುಲೈ 2022, 7:38 IST
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿದರು.   

ಮಡಿಕೇರಿ: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯು ಅರೆಭಾಷೆಯ ಮೊದಲ ಪೂರ್ಣ ಪ್ರಮಾಣದ ಯಕ್ಷಗಾನ ಪ್ರಸಂಗಗಳೆನಿಸಿದ ಭವ್ಯಶ್ರೀ ಕುಲ್ಕುಂದ ಅವರ 'ಯಕ್ಷಜೊಂಪೆ' ಹಾಗೂ ಮಾಧವ ಪೆರಾಜೆ ಅವರ 'ವೀರಮಣಿ ಕಾಳಗ' ಕೃತಿಗಳನ್ನು ಹೊರತಂದಿದೆ.

'ಜುಲೈ 23ರಂದು ಬೆಳಿಗ್ಗೆ 11 ಗಂಟೆಗೆ ಕೊಡಗು ಜಿಲ್ಲೆಯ ಪೆರಾಜೆ ಗ್ರಾಮದ ಅನ್ನಪೂರ್ಣೇಶ್ವರಿ ಕಲಾಮಂದಿರದಲ್ಲಿ ಈ ಕೃತಿಗಳ ಜತೆಗೆ 'ಅರೆಭಾಷೆಯ ಪಾರಂಪರಿಕಪ ವಸ್ತುಕೋಶ', ಜಯಪ್ರಕಾಶ್ ಕುಕ್ಕೇಟಿ ಅವರ 'ಸಾಹೇಬ್ರು ಬಂದವೇ', ದೇವಜನ ಗೀತಾ ಮೋಂಟಡ್ಕ ಅವರ 'ಕಿರಗೂರಿನ ಗಯ್ಯಾಳಿಗ', ದಾಮೋದರ ಕುಯಿಂತೋಡು ಅವರ 'ನೆಂಪುನ ಒರ್ತೆ', ಪಿ.ಜೆ.ಅಂಬೆಕಲ್ ಅವರ 'ಗೂಡೆ ಬೇಕಾಗುಟ್ಟು', ಭವಾನಿಶಂಕರ ಅಡ್ತಲೆ ಅವರ 'ಕತೆಗಳ ಅಟ್ಟುಳಿ' ಅರೆಭಾಷೆಯ ಕೃತಿಗಳೂ ಬಿಡುಗಡೆಯಾಗಲಿವೆ' ಎಂದು ಅಕಾಡೆಮಿಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

'ಅರೆಭಾಷಿಗ ಜನ ಸಮುದಾಯದವರು ಹಿಂದೆ ಉಪಯೋಗಿಸುತ್ತಿದ್ದ 150 ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಛಾಯಾಚಿತ್ರ ತೆಗೆದು ಆ ವಸ್ತುಗಳ ವಿವರಗಳನ್ನು ಅರೆಭಾಷೆ ಪಾರಂಪರಿಕ ವಸ್ತುಕೋಶದಲ್ಲಿ ಪ್ರಕಟಿಸಲಾಗಿದ್ದು, ಇದೊಂದು ಮಹತ್ವದ ಕೃತಿ ಎಂದರು.

ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಅಂಬಳಿಕೆ ಹಿರಿಯಣ್ಣ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಮಾಧವ ಪೆರಾಜೆ, ಮಡಿಕೇರಿ ತಾಲ್ಲೂಕಿನ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಪೆರಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಚಂದ್ರಕಲಾ ಬಳ್ಳಡ್ಕ, ಪೆರಾಜೆಯ ಗೌಡ ಗ್ರಾಮ ಸಮಿತಿಯ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ ಎಂದರು.

ಅಕಾಡೆಮಿಯ ಸದಸ್ಯರಾದ ಧನಂಜಯ ಅಗೋಳಿಕಜೆ, ಬೈತಡ್ಕ ಜಾನಕಿ ಬೆಳ್ಯಪ್ಪ, ಚೊಕ್ಕಾಡಿ ಪ್ರೇಮರಾಘವಯ್ಯ ಇದ್ದರು.

26ರಂದು ಪ್ರತಿಭಟನೆ
ಮಡಿಕೇರಿ:
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜು.26ರಂದು ಬೆಳಿಗ್ಗೆ 10 ಗಂಟೆಗೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕೊಡಗು ಜಿಲ್ಲಾ ಟೈಲರ್ಸ್ ಅಸೋಸಿಯೇಷನ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅಸೋಸಿಯೇಷನ್ ನ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಿ.ನಂದೀಶ್ ತಿಳಿಸಿದರು.

ಸ್ತ್ರೀ-ಪುರುಷ ಹೊಲಿಗೆ ಕೆಲಸಗಾರರಿಗೆ ಜೀವನ ಭದ್ರತೆಯನ್ನು ಒದಗಿಸಲು ಟೈಲರ್ ಕ್ಷೇಮನಿಧಿ ಮಂಡಳಿ ರಚಿಸಬೇಕು ಎಂದು ಅವರು ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.

ಸಂಘಟನೆಯ ಮಡಿಕೇರಿ ಕ್ಷೇತ್ರ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಕಾರ್ಯಧ್ಯಕ್ಷೆ ನವೀನಾ ಕುಮಾರಿ, ಸದಸ್ಯರಾದ ಸಿರಾಜ್ ಸಜೀವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT