ADVERTISEMENT

ಇವರಿಗೆ ಬಂಡೆಗಲ್ಲು ನೀರೇ ಆಸರೆ...

​ಪ್ರಜಾವಾಣಿ ವಾರ್ತೆ
Published 9 ಜೂನ್ 2015, 7:26 IST
Last Updated 9 ಜೂನ್ 2015, 7:26 IST
ಬಾಗೇಪಲ್ಲಿ ತಾಲ್ಲೂಕು ಮಾಡಪಲ್ಲಿ ಗ್ರಾಮಸ್ಥರು ಬಂಡೆಗಲ್ಲುಗಳಲ್ಲಿ ಶೇಖರಣೆಯಾದ ನೀರನ್ನು ಕುಡಿಯುತ್ತಾರೆ.
ಬಾಗೇಪಲ್ಲಿ ತಾಲ್ಲೂಕು ಮಾಡಪಲ್ಲಿ ಗ್ರಾಮಸ್ಥರು ಬಂಡೆಗಲ್ಲುಗಳಲ್ಲಿ ಶೇಖರಣೆಯಾದ ನೀರನ್ನು ಕುಡಿಯುತ್ತಾರೆ.   

ಚಿಕ್ಕಬಳ್ಳಾಪುರ: ಬಾಗೇಪಲ್ಲಿ ತಾಲ್ಲೂಕಿನ ಗಡಿಪ್ರದೇಶದಲ್ಲಿ ವಾಸವಿರುವ ಕೆಲ ಗ್ರಾಮಸ್ಥರು ಕುಡಿಯುವ ನೀರಿಗಾಗಿ ಕಾಡುಮೇಡುಗಳಲ್ಲಿನ ಕೆಲ ಮಳೆನೀರಿನ ಹೊಂಡಗಳನ್ನು ಆಶ್ರಯಿಸಿದ್ದಾರೆ.

ಕುರಿ, ಮೇಕೆಗಳು ಮತ್ತು ಇತರೆ ಜಾನುವಾರುಗಳು ಕುಡಿಯುವ ನೀರನ್ನು ಜನರೂ ನೇರವಾಗಿ ಕುಡಿಯುವುದು ಈ ಪ್ರದೇಶದಲ್ಲಿ ಸಾಮಾನ್ಯ ಸಂಗತಿ ಎನಿಸಿದೆ.

ತಾಲ್ಲೂಕಿನ ಗಡಿಭಾಗದ ಕೊತ್ತಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾಡಪಲ್ಲಿ ಗ್ರಾಮದ ಸುತ್ತಲೂ ಬೆಟ್ಟಗುಡ್ಡ, ಬಂಡೆಗಲ್ಲುಗಳಿಂದ ಆವರಿಸಿಕೊಂಡಿದ್ದು ಮಳೆಗಾಲದಲ್ಲಿ ಅಲ್ಲಲ್ಲಿ ನೀರು ಶೇಖರಣೆಯಾಗುತ್ತದೆ.

ಕೊಳವೆಬಾವಿ ಬತ್ತಿದಾಗ ಅಥವಾ ದೂರದಿಂದ ನೀರು ತರಲು ಸಾಧ್ಯವಾಗದಿದ್ದಾಗ, ಇಲ್ಲಿನ ಗ್ರಾಮಸ್ಥರು ಬಕೆಟ್‌ ಮತ್ತು ಕೊಡಗಳಲ್ಲಿ ಇದೇ ನೀರನ್ನು ಒಯ್ದು ಬಳ್ಳಿಯೊಂದರಿಂದ ನೀರು ಶುದ್ಧೀಕರಿಸಿ ಕುಡಿಯುತ್ತಾರೆ.

ಬಂಡೆಗಲ್ಲು ಮೇಲೆ ಶೇಖರಣೆಯಾಗುವ ನೀರನ್ನು ನಾವು ಕುಡಿಯುವ ವಿಚಾರ ಪಟ್ಟಣ ವಾಸಿಗಳಿಗೆ ಅಚ್ಚರಿ ತರಬಹುದು. ಆದರೆ ನಮ್ಮ ಪಾಲಿಗೆ ಇದೇ ಸರ್ವಸ್ವ. ಕುರಿಗಾಹಿಗಳು ಇದೇ ನೀರನ್ನು ನೇರವಾಗಿ ಕುಡಿದು ಬಾಯಾರಿಕೆ ತಣಿಸಿಕೊಳ್ಳುತ್ತಾರೆ ಎಂದು ಮಾಡಪಲ್ಲಿ ಗ್ರಾಮಸ್ಥ ಎಂ.ಎಲ್‌.ನರಸಿಂಹಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕೆಲ ಬೆಟ್ಟಗುಡ್ಡಗಳ ಮೇಲೆ ಎಂದಿಗೂ ಬತ್ತದ ಹೊಂಡಗಳಿವೆ. ವರ್ಷದ ಯಾವುದೇ ತಿಂಗಳಲ್ಲಿ ಹೋದರೂ ಅಲ್ಲಿ ನೀರು ಇರುತ್ತದೆ. ಖನಿಜಾಂಶದಿಂದ ಕೂಡಿರುವ ಆ ತಂಪಾದ ನೀರು ಕುಡಿಯಲು ಮನಸ್ಸಿಗೆ ಖುಷಿಯಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.