ADVERTISEMENT

ಎತ್ತಿನ ಹೊಳೆ ಯೋಜನೆ ವಿರೋಧಿಸಿ ಧರಣಿ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2014, 9:12 IST
Last Updated 4 ಮಾರ್ಚ್ 2014, 9:12 IST

ಕೋಲಾರ: ಎತ್ತಿನಹೊಳೆ ಯೋಜನೆಗೆ ರಾಜ್ಯ ಸರ್ಕಾರ ಶಂಕುಸ್ಥಾಪನೆ ಮಾಡಿರುವುದನ್ನು ವಿರೋಧಿಸಿ ರೈತ ಸಂಘ–ಹಸಿರು ಸೇನೆ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸೋಮವಾರ ಖಾಲಿ ಪೈಪ್‌ಗಳಿಗೆ ಪೂಜೆ ಮಾಡಿ, ಧರಣಿ ನಡೆಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರ ಸಚಿವ ಎಂ.ವೀರಪ್ಪ ಮೊಯಿಲಿ ಸೇರಿ­ದಂತೆ ಜಿಲ್ಲೆಯ ಹಲ ಜನಪ್ರತಿನಿಧಿಗಳ ಮುಖವಾಡ ತೊಟ್ಟ ಕಾರ್ಯಕರ್ತರು ‘ಚುನಾವಣೆಯಲ್ಲಿ ಜನರನ್ನು ಓಟಿಗೋಸ್ಕರ ಯಾಮಾರಿಸಲು ಈ ಶಂಕುಸ್ಥಾಪನೆ’ ಎಂಬ ಫಲಕವನ್ನು ಖಾಲಿ ಪೈಪಿಗೆ ಕಟ್ಟಿ, ಪೂಜೆ ಸಲ್ಲಿಸುವ ಮೂಲಕ ಎತ್ತಿನ ಹೊಳೆ ಯೋಜನೆ ಶಂಕುಸ್ಥಾಪನೆ ವಿರುದ್ಧ ಪ್ರತಿಭಟಿಸಿದರು.

ಡಾ.ಪರಮಶಿವಯ್ಯ ವರದಿಯಾಧಾರಿತ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಿ ಎಂದು ದಶಕಕ್ಕೂ ಹೆಚ್ಚು ಅವಧಿಯಿಂದ ಜನ ಕೇಳುತ್ತಿದ್ದರೂ ಸರ್ಕಾರ­ಗಳು ಮಾತ್ರ ಓಟಿಗೋಸ್ಕರ ಎತ್ತಿನ ಹೊಳೆ ಯೋಜನೆ ಎಂಬ ಭೂತಕ್ಕೆ ಶಂಕುಸ್ಥಾಪನೆ ಮಾಡಿ ದಿಕ್ಕು ತಪ್ಪಿಸಲು ಮುಂದಾಗಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಿರಂತರ ಹೋರಾಟ, ಪಾದಯಾತ್ರೆಗಳ ಮೂಲಕ ಗಮನ ಸೆಳೆಯುತ್ತಿದ್ದರೂ ಕಾಟಾಚಾರಕ್ಕೆಂಬಂತೆ ಪರಮಶಿವಯ್ಯನವರ ವರದಿ ಕುರಿತು ಸಮೀಕ್ಷಾ ವರದಿ ತಯಾರಿಸಲು ಇಸ್ರೋ ಕಂಪನಿಗೆ ಟೆಂಡರ್ ನೀಡಿದ್ದು, ಅದನ್ನು ಮೂಲೆ ಗುಂಪು ಮಾಡಲಾಯಿತು ಎಂದು ಟೀಕಿಸಿದರು.

ಪರಮಶಿವಯ್ಯನವರ ತಾಂತ್ರಿಕ ವರದಿ ಸಮಿತಿಯಲ್ಲಿ ಸದಸ್ಯರಾಗಿರುವ, ಕೆ.ಸಿ.ರೆಡ್ಡಿ ಮತ್ತು ದೇಸಾಯಿ ಅವರನ್ನು ಸಮಿತಿಯಿಂದ ತೆಗೆಯಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ಕೆ. ಶ್ರೀನಿವಾಸಗೌಡ, ಕೆ.ನಾರಾಯಣಗೌಡ, ನಾಗರಾಜಗೌಡ, ಬಾಬು, ರಂಜಿತ್ ಕುಮಾರ್, ಕೃಷ್ಣೇಗೌಡ, ಮಂಜು, ಎನ್.ಹರೀಶ್, ರಘು, ಬಾಲು, ಆಂಜಿನಪ್ಪ , ಭಕ್ತವತ್ಸಲಂ, ಶ್ರೀನಿವಾಸ್, ರಮೇಶ್, ಮುನ್ನಾ, ಮಂಜು­ನಾಥ್, ಮುನೇಗೌಡ, ರಾಜೇಶ್, ಉದಯ್, ಪ್ರತಾಪ್, ಅಮರನಾರಾ­ಯಣ­ಸ್ವಾಮಿ, ಗಣೇಶ್, ಮೂರ್ತಿ, ರಂಜಿತ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.