ADVERTISEMENT

ಐದು ವರ್ಷದಲ್ಲಿ ಶಾಶ್ವತ ನೀರಾವರಿ: ಎಚ್‌ಡಿಕೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2012, 4:46 IST
Last Updated 1 ಡಿಸೆಂಬರ್ 2012, 4:46 IST

ಪ್ರಜಾವಾಣಿ ವಾರ್ತೆ
ಕೋಲಾರ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ಗೆ ಬಹುಮತ ದೊರೆತು ಸರ್ಕಾರ ರಚಿಸಿದರೆ ಐದು ವರ್ಷದೊಳಗೆ ಬಯಲು ಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ, ಪಕ್ಷದ ರಾಜ್ಯ ಘಟಕದ ಆಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದರು.

ತ್ಲ್ಲಾಲೂಕಿನ ಸುಗಟೂರಿನಲ್ಲಿ ಶುಕ್ರವಾರ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಆವರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ಬಯಲು ಸೀಮೆ ಜಿಲ್ಲೆಗಳು ಶಾಶ್ವತ ನೀರಾವರಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಫಲ ಸಿಗಬೇಕಿದೆ ಎಂದರು.

ಅನಿಶ್ಚಿತ ಮಳೆ, ಬತ್ತಿದ ಕೆರೆ ಕುಂಟೆಗಳ ನಡುವೆಯೇ ಜಿಲ್ಲೆಯ ರೈತರು ಕೃಷಿ, ತೋಟಗಾರಿಕೆ, ಹೈನುಗಾರಿಕೆ ನಡೆಸುತ್ತಿರುವುದು  ಏಕಕಾಲಕ್ಕೆ ಸಂಕಟ ಮತ್ತು ಸಂತಸ ಪಡುವ ವಿಷಯಗಳು. ನೀರಿನ ಕೊರತೆ ನಡುವೆಯೂ ಕೃಷಿ ಚಟುವಟಿಕೆಗಳನ್ನು ಮುಂದುವರಿಸುತ್ತಿರುವುದು ಶ್ಲಾಘನೀಯ. ಇಂಥ ಜಿಲ್ಲೆಗೆ ಶಾಶ್ವತ ನೀರಾವರಿ ಆತ್ಯಗತ್ಯ ಎಂದರು.

ನೆರೆಯ ಅಂಧ್ರ ಮತ್ತು ತಮಿಳುನಾಡು ರಾಜ್ಯಗಳು ಕರ್ನಾಟಕದ ನೀರಿಗಾಗಿ ಆಗ್ರಹಿಸುತ್ತಿರುವುದರಿಂದ ರಾಜ್ಯದಲ್ಲಿ ಕಷ್ಟದ ಪರಿಸ್ಥಿತಿ ಇದೆ.
ಆಂಧ್ರಪ್ರದೇಶದಲ್ಲಿ ಸಾವಿರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನೀರಾವರಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಾದರೆ ನಮ್ಮ ರಾಜ್ಯಕ್ಕೆ ಏಕೆ ಸಾಧ್ಯವಾಗುವುದಿಲ್ಲ ಎಂದು ಪ್ರಶ್ನಿಸಿದರು.

ಕೇಂದ್ರದ ನಿಲುವುಗಳ ಪರಿಣಾಮವಾಗಿ ರೇಷ್ಮೆ ಬೆಳೆಯುವ ಜಿಲ್ಲೆಗಳ ರೈತರಿಗೆ ಹೆಚ್ಚು ತೊಂದರೆಯಾಗಿದೆ. ಈ ನಿಟ್ಟಿನಲ್ಲಿ ರೇಷ್ಮೆ ಬೆಳೆಗಾರರ ಸ್ನೇಹಿಯಾಗಿರುವ ಯೋಜನೆಗಳನ್ನು ಜಾರಿಗೊಳಿಸಲು ಪಕ್ಷ ಉದ್ದೇಶಿಸಿದೆ ಎಂದರು.

ಟೀಕೆ: ಇತ್ತೀಚೆಗೆ ಶ್ರೀನಿವಾಸಪುರದಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ವಿಧಾನಸಭೆ ಮಾಜಿ ಸ್ಪೀಕರ್. ರಮೇಶಕುಮಾರ್, ತಾವು ಮತ್ತು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಕ್ರಮವಾಗಿ ಸಂಸತ್ತು ಮತ್ತು ವಿಧಾನಸಭೆಯಲ್ಲಿ ತಾವು ಪ್ರತಿನಿಧಿಸುವ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಮಾತನಾಡಿಲ್ಲ ಎಂದು ಆರೋಪಿಸಿದ್ದಾರೆ.
ಸಮಸ್ಯೆಗಳ ಬಗ್ಗೆ ಮಾತನಾಡುವುದನ್ನು ರಮೇಶಕುಮಾರ್ ಆವರಿಂದ ನಾನು ಕಲಿಯಬೇಕಿಲ್ಲ ಎಂದು ನುಡಿದರು.

ತಾವು ಮುಖ್ಯಮಂತ್ರಿಯಾದ ಹೊಸತರಲ್ಲಿ, ಗಣಿ ಉದ್ಯಮಿಗಳಿಂದ ಲಂಚ ಪಡೆದ ಆರೋಪ ಎದುರಾಗಿತ್ತು. ಆ ವೇಳೆಯಲ್ಲಿ ನಡೆದ ಸಭೆಯೊಂದರಲ್ಲಿ ಪಾಲ್ಗೊಂಡಿದ್ದ ರಮೇಶಕುಮಾರ್, ಪ್ರತಿನಿಧಿಯೊಬ್ಬರನ್ನು `ಐ ವಿಲ್ ಕಿಲ್ ಯೂ' ಎಂದು ಬೆದರಿಸಿದರು. ಕೊಲ್ಲುವ ಬೆದರಿಕೆ ಒಡ್ಡುವ ರಾಜಕಾರಣವನ್ನು ನಾವು ಮಾಡುವುದಿಲ್ಲ. ಇನ್ನು ಮುಂದೆ ಅಂಥ ರಾಜಕಾರಣಕ್ಕೆ ಆವಕಾಶವೂ ದೊರಕುವುದಿಲ್ಲ ಎಂದು ನುಡಿದರು.

ರಾಜ್ಯದಲ್ಲಿ ರೈತಪರ ಸರ್ಕಾರವನ್ನು ತರುವ ಸವಾಲನ್ನು ಪಕ್ಷ ಸ್ವೀಕರಿಸಿದೆ. ಆದರ ಪ್ರಯುಕ್ತ ರಾಜ್ಯಾದ್ಯಂತ ಕಾರ್ಯಕರ್ತರ ಸಮಾವೇಶಗಳನ್ನು ಸಂಘಟಿಸಲಾಗುತ್ತಿದೆ ಎಂದರು.
ಮಾಜಿ ಸಚಿವ ಕೆ.ಶ್ರೀನಿವಾಸಗೌಡ, ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿದರು. ಜಿಲ್ಲಾ ಪಂಚಾಯತಿ ಅಧ್ಯಕ್ಷೆ ಚೌಡೇಶ್ವರಿ, ಸದಸ್ಯೆ ಮಂಗಮ್ಮ ಮುನಿಸ್ವಾಮಿ, ಮುಖಂಡರಾದ ಗೋಪಾಲಕೃಷ್ಣ, ಬಾಲಾಜಿ ಚೆನ್ನಯ್ಯ, ಬಣಕನಹಳ್ಳಿ ನಟರಾಜ್, ನಿವೃತ್ತ ಐಪಿಎಸ್ ಆಧಿಕಾರಿ ಎಂ.ಸಿ.ನಾರಾಯಣಗೌಡ, ಆರ್.ಚೌಡರೆಡ್ಡಿ, ಮುನಿನಾರಾಯಣಪ್ಪ, ಶಶಿಕುಮಾರ, ಬಿ.ಎಂ.ಮುಬಾರಕ್, ಇ.ಗೋಪಾಲಪ್ಪ, ಸಿದ್ದೇಗೌಡ, ರಾಜೇಶ್ವರಿ, ಈರಪ್ಪ, ಎಸ್.ಆರ್.ರುದ್ರಸ್ವಾಮಿ, ಸುರೇಶಬಾಬು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.