ADVERTISEMENT

ಕಿರುಕುಳ: ಅಂಚೆ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 9:47 IST
Last Updated 21 ಡಿಸೆಂಬರ್ 2012, 9:47 IST
ಕೋಲಾರ: ಅಂಚೆ ಅಧೀಕ್ಷಕರು ತಮ್ಮ ಕೆಳಗಿನ ಅಂಚೆ ನೌಕರರನ್ನು ತುಚ್ಛವಾಗಿ ಕಾಣುತ್ತಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಅಂಚೆ ನೌಕರರ ಸಂಘ ಹಾಗೂ ಜಿಡಿಎಸ್ ಸಂಘಟನೆ ಕೋಲಾರ ವಿಭಾಗದ ನೌಕರರು ಗುರುವಾರ ಪ್ರತಿಭಟನೆ ನಡೆಸಿದರು.
ವಿಭಾಗೀಯ ಅಂಚೆ ಕಚೇರಿ ಎದುರು ಧರಣಿ ನಡೆಸಿದ ಅಂಚೆ ನೌಕರರು, ಹಿರಿಯ ಅಂಚೆ ಅಧೀಕ್ಷಕ ಎಚ್.ಆರ್.ವೀರನ್‌ಗೌಡ ವಿರುದ್ಧ ಘೋಷಣೆ ಕೂಗಿದರು.

ಜಿಡಿಎಸ್ ನೌಕರರನ್ನು ಹೆಚ್ಚುವರಿ ಭತ್ಯೆ ನೀಡದೆ ಕಾನೂನು ಬಾಹಿರವಾಗಿ ದುಡಿಸಿಕೊಳ್ಳಲಾಗುತ್ತಿದೆ. ನೌಕರರ ಮೇಲೆ ವಿನಾಕಾರಣ ಪೊಲೀಸ್ ದೂರು ದಾಖಲಿಸಲಾಗುತ್ತಿದೆ. ಸಣ್ಣ ತಪ್ಪುಗಳಿಗೂ ಅಮಾನತು, ವರ್ಗಾವಣೆಯಂತಹ ಶಿಕ್ಷೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಮಹಿಳಾ ನೌಕರರನ್ನು ಒತ್ತಾಯಪೂರ್ವಕವಾಗಿ ದುಡಿಸಿಕೊಳ್ಳಲಾಗುತ್ತಿದೆ. ಮಹಿಳೆಯರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ, ಅನಾಗರಿಕರಂತೆ ನಡೆಸಿಕೊಳ್ಳುತ್ತಿದ್ದಾರೆ. ಇಲಾಖೆ ನೌಕರರಿಗೆ ಸಕಾಲಕ್ಕೆ ರಜೆ ಮಂಜೂರು ಮಾಡದೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದರು.

ಕಿರುಕುಳ ನೀಡುತ್ತಿರುವ ಅಧಿಕಾರಿ ಮೇಲೆ ಕ್ರಮ ಕೈಗೊಳ್ಳಬೇಕು. ಅಂಚೆ ನೌಕರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದರು. ಸಂಘಟನೆ ಪದಾಧಿಕಾರಿಗಳಾದ ಕೆ.ಸಿ.ಅಣ್ಣಪ್ಪ, ಎಸ್.ಎಸ್.ಮಂಜುನಾಥ್, ಪುಟ್ಟನರಸಿಂಹಮೂರ್ತಿ, ಆನಂದ್, ವೀರಭದ್ರಪ್ಪ, ಷಫೀಉಲ್ಲಾ, ತೊಟ್ಲಿ ಕೃಷ್ಣಪ್ಪ, ಜನ್ನಘಟ್ಟ ಕಲ್ಯಾಣಿ, ಮುದುವಾಡಿ ಮೀನಾಕುಮಾರಿ, ಶಾರದಮ್ಮ, ಅರಹಳ್ಳಿ ನಾಗರಾಜ್, ರವಿಕುಮಾರ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.