ADVERTISEMENT

ಗುಣಮಟ್ಟ ನಿರ್ವಹಣೆ ಕಡ್ಡಾಯ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2012, 8:35 IST
Last Updated 10 ಫೆಬ್ರುವರಿ 2012, 8:35 IST

ಕೋಲಾರ: ಕರ್ನಾಟಕ ಹಾಲು ಮಹಾಮಂಡಲದಲ್ಲಿ ಈಗ ಹಾಲಿನ ಗುಣಮಟ್ಟ ನಿರ್ವಹಣೆ ಕಡ್ಡಾಯ ಜವಾಬ್ದಾರಿ ಎಂದು ಗುಣನಿಯಂತ್ರಣ ವಿಭಾಗದ ಉಪನಿರ್ದೇಶಕಿ ಯು.ಎಚ್. ತುಳಸಿ ತಿಳಿಸಿದರು.

ನಗರದ ಹೊರವಲಯದ ತೇರಳ್ಳಿ ಬೆಟ್ಟದಲ್ಲಿರುವ ಆದಿಮ ಸಾಂಸ್ಕೃತಿಕ ಸಂಘಟನೆ ಆವರಣದಲ್ಲಿ ಕೋಲಾರ-ಚಿಕ್ಕಬಳ್ಳಾಪುರ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ ಅಧಿಕಾರಿಗಳಿಗೆ ಏರ್ಪಡಿಸಿರುವ ವಿಶೇಷ ತರಬೇತಿಯ 2ನೇ ದಿನವಾದ ಗುರುವಾರ ಅವರು `ಪ್ರಜಾವಾಣಿ~ ಜೊತೆ ಮಾತನಾಡಿದರು.

ಮೊದಲು ಗುಣಮಟ್ಟ ನಿಯಂತ್ರಣ, ನಿರ್ವಹಣೆ ಐಚ್ಛಿಕ ವಿಷಯವಾಗಿತ್ತು. ಆದರೆ ಆಹಾರ ಸಂರಕ್ಷಣೆ ಮತ್ತು ಗುಣಮಟ್ಟ ಕಾಯ್ದೆ 2011 ಜಾರಿ ಹಿನ್ನೆಲೆಯಲ್ಲಿ ಅದು ಕಡ್ಡಾಯ ಜವಾಬ್ದಾರಿಯಾಗಿ ಮಾರ್ಪಟ್ಟಿದೆ. ಹೀಗಾಗಿ ಹಾಲು ಉತ್ಪಾದಕರ ಮಟ್ಟದಿಂದ ಸಂಘಗಳವರೆಗೆ ಗುಣಮಟ್ಟ ಕಾಪಾಡುವುದು ಅವಶ್ಯ ಎಂದು ಹೇಳಿದರು.

ಮಹಾಮಂಡಳ 46-47 ಲಕ್ಷ ಲೀಟರ್ ಹಾಲನ್ನು ಉತ್ಪಾದಿಸುತ್ತಿದೆ. ಅಷ್ಟೂ ಹಾಲನ್ನು ಅದೇ ರೂಪದಲ್ಲಿ ಬಳಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ, ಹಲವು ಕೈಗಳ ಮೂಲಕ ಸಾಗಣೆಯಾಗುವ ಹಂತದಲ್ಲಿ ಹಾಲಿಗೆ ಸೇರಿಕೊಳ್ಳುವ ಸೂಕ್ಷ್ಮಾಣು ಜೀವಿಗಳನ್ನು ನಿಯಂತ್ರಿಸುವುದೂ ಅವಶ್ಯ. ಹಾಗೆ ಮಾಡುತ್ತಲೇ ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟ ಕಾಪಾಡಬೇಕಾದ ಸವಾಲು ಎದುರಾಗಿದೆ ಎಂದು ವಿವರಿಸಿದರು.

ಪ್ರಸ್ತುತ ಮಹಾಮಂಡಲದಲ್ಲಿ ಉತ್ಪಾದನೆಯಾಗುತ್ತಿರುವ ಹಾಲಿನ ಗುಣಮಟ್ಟ ಉತ್ತಮವಾಗಿದೆ. ಆದರೆ ಇನ್ನಷ್ಟು ಉತ್ತಮಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ, ತಳಹಂತದಲ್ಲಿ ಉತ್ಪಾದಕರೊಡನೆ ನೇರ ಸಂಪರ್ಕ ಗಳಿಸಿ ಕೆಲಸ ಮಾಡುವ ಸಹಕಾರ ಸಂಘಗಳ ಅಧಿಕಾರಿಗಳ ಕಾರ್ಯ ವೈಖರಿಯೂ ಬದಲಾಗಬೇಕಾಗಿದೆ. ಗುಣಮಟ್ಟ ಹೆಚ್ಚಿಸಲು ಮೊದಲಿಗೆ ಅವರು ಸಿದ್ಧರಾಗಬೇಕು ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.