ADVERTISEMENT

ಚೇತರಿಸಿಕೊಂಡ ಟೊಮೆಟೊ ಬೆಲೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 10:40 IST
Last Updated 16 ಸೆಪ್ಟೆಂಬರ್ 2011, 10:40 IST

ಶ್ರೀನಿವಾಸಪುರ: ಈ ಮಧ್ಯೆ ಪಾತಾಳಕ್ಕೆ ಇಳಿದು ಹೋದ ಟೊಮೆಟೊ ಬೆಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ. ಮಾರುಕಟ್ಟೆಗಳಲ್ಲಿ 15 ಕೆಜಿ ಟೊಮೆಟೊ ಬಾಕ್ಸೊಂದು ರೂ. 150 ರಂತೆ ಮಾರಾಟವಾಗುತ್ತಿದೆ. ಇದರಿಂದ ಟೊಮೆಟೊ ಬೆಳೆಗಾರರಲ್ಲಿ ಬೆಲೆ ಇನ್ನಷ್ಟು ಏರುವ ಭರವಸೆ ಮೂಡಿದೆ.

ಈ ಬಾರಿ ಟೊಮೆಟೊ ಬೆಳೆ ಮಾಡಿ ಕೈಸುಟ್ಟುಕೊಂಡವರೇ ಹೆಚ್ಚು. ಪ್ರತಿ ಎಕರೆಗೆ ಸಾವಿರಾರು ರೂ. ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದ ರೈತರು ಕೊನೆಗೆ  ಬೆಳೆ ಬಿಡಿಸಿದ ಕೂಲಿಯೂ ಹೊರಡದೆ ಕಂಗಾಲಾಗಿದ್ದರು. ಬೆಲೆ ಕುಸಿತದ ಪರಿಣಾಮ ಹಣ್ಣಾದ ಟೊಮೆಟೊ ತೋಟಗಳಲ್ಲಿಯೇ ಕೊಳೆಯುತ್ತಿತ್ತು. ಕೊಳೆತ ಟೊಮೆಟೊದಿಂದ ನೆಲಕ್ಕೆ ಆಗುವ ಪಾಯವನ್ನು ತಪ್ಪಿಸಲು ಬಹುತೇಕ ರೈತರು ಗಿಡಗಳನ್ನು ಟೊಮೆಟೊ ಸಹಿತವಾಗಿ ಕಿತ್ತು ತೋಟಗಳಿಂದ ಹೊರಗೆ ಎಸೆದಿದ್ದರು.

 ಈಗ  ಬೆಲೆಯಲ್ಲಿ ಸ್ವಲ್ಪ ಚೇತರಿಕೆ ಕಂಡುಬಂದಿರುವುದರಿಂದ ಅನುಪಯುಕ್ತವೆಂದು ಬಿಟ್ಟದ್ದ  ಟೊಮೆಟೊ ಬಿಡಿಸಿ ಮಾರುಟ್ಟೆಗೆ ಸಾಗಿಸಲಾಗುತ್ತಿದೆ. ಬೆಲೆ ಬಾರದೆ ಬೇಸರಗೊಂಡ ಬೆಳೆಗಾರರು ತೋಟ ನಿರ್ಲಕ್ಷಿಸಿದ ಪರಿಣಾಮ ಈಗ ಮಾರುಕಟ್ಟೆಗೆ ಟೊಮೆಟೊ ಆವಕದ ಪ್ರಮಾಣ ಕುಸಿದಿದೆ.

ಈ ಮಧ್ಯೆ ನಾಟಿ ಮಾಡಲಾದ ಟೊಮೆಟೊ ಬೆಳೆ ಕಾಯಿ ಕಟ್ಟಲು ಇನ್ನಷ್ಟು ಕಾಲ ಬೇಕಾಗಿದೆ. ಇದು  ಬೆಲೆ ಏರಿಕೆ ಕಾರಣವಾಗಿದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.

ಪ್ರತಿ ದಿನ ಮಾರುಕಟ್ಟೆ ತುಂಬುತ್ತಿದ್ದ ಪ್ರಮಾಣದಲ್ಲಿ ಟೊಮೆಟೊ ಬರುತ್ತಿಲ್ಲ. ಇದರಿಂದ ಬೇಡಿಕೆ ಹೆಚ್ಚಾಗಿದೆ. ಮಳೆಯೇನಾದರೂ ಆರಂಭವಾದರೆ ಟೊಮೆಟೊ ಬೆಳೆಗೆ ಪೆಟ್ಟಾಗುತ್ತದೆ. ಅದು ಇನ್ನಷ್ಟು ಬೆಲೆ ಏರಿಕೆಗೆ ಕಾರಣವಾಗುತ್ತದೆ ಎಂಬುದು ರೈತರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.