ADVERTISEMENT

ಡಿ.ಸಿ ಕಚೇರಿ ಎದುರು ವಿದ್ಯಾರ್ಥಿಗಳ ಪ್ರತಿಭಟನೆ

ಐಟಿಐ ಪರೀಕ್ಷೆ: ಅಧಿಕಾರಿಗಳ ತಪ್ಪಿನಿಂದ ಶೂನ್ಯ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 24 ಜೂನ್ 2015, 8:57 IST
Last Updated 24 ಜೂನ್ 2015, 8:57 IST
ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.
ಕೋಲಾರ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ವೇದಿಕೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.   

ಕೋಲಾರ: 2015ರ ಫೆಬ್ರುವರಿಯಲ್ಲಿ ನಡೆದ ಐಟಿಐ ಮೊದಲ ಸೆಮಿಸ್ಟರ್‌ ಪರೀಕ್ಷಾ ಪ್ರಕ್ರಿಯೆಗೆ ನಿಯೋಜನೆಗೊಂಡಿದ್ದ ಸಿಬ್ಬಂದಿಯ ತಪ್ಪಿನಿಂದ ಜಿಲ್ಲೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ ಎಂದು ಆರೋಪಿಸಿ ಸ್ವಾಮಿ ವಿವೇಕಾನಂದ ವಿದ್ಯಾರ್ಥಿ ವೇದಿಕೆ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಮಂಗಳವಾರ ಪ್ರತಿಭಟಿಸಿದರು.

ನಗರದ ಹೇಮಾದ್ರಿ ಐಟಿಐ ಕಾಲೇಜು ಪರೀಕ್ಷಾ ಕೇಂದ್ರಕ್ಕೆ ನಿಯೋಜನೆಗೊಂಡಿದ್ದ ನೋಡೆಲ್‌ ಅಧಿಕಾರಿಗಳಾದ ಆರ್ಮುಗಂ ಮತ್ತು ರಾಧಮ್ಮ ಅವರು ವಿಷಯ ಸಂಕೇತದ ಬಗ್ಗೆ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
‘ಪರೀಕ್ಷಾ ಸಿಬ್ಬಂದಿ ನೀಡಿದ ವಿಷಯ ಸಂಕೇತವನ್ನೇ ವಿದ್ಯಾರ್ಥಿಗಳು ಓಎಂಆರ್ ಶೀಟ್‌ನಲ್ಲಿ ನಮೂದಿಸಿದ್ದಾರೆ. ಆದರೆ, ಅದು ತಪ್ಪು ಸಂಕೇತವಾಗಿದ್ದ ಕಾರಣ ಗಣಕೀಕೃತ ಮೌಲ್ಯಮಾಪನದಲ್ಲಿ ಎಲ್ಲಾ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದಾರೆ. ಒಂಬತ್ತಕ್ಕೂ ಹೆಚ್ಚು ಕಾಲೇಜುಗಳಿಗೆ ಶೂನ್ಯ ಫಲಿತಾಂಶ ಬಂದಿದೆ ಎಂದು ವೇದಿಕೆಯ ಅಧ್ಯಕ್ಷ ಹರೀಶ್‌ ತಿಳಿಸಿದರು.

ನಗರದ ಪವನ್‌ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ಓಎಂಆರ್‌ ಶೀಟ್‌ನಲ್ಲಿ ಸರಿಯಾದ ವಿಷಯ ಸಂಕೇತ ನಮೂದಿಸಿದ ಕಾರಣ ಎಲ್ಲರೂ ಉತ್ತೀರ್ಣರಾಗಿದ್ದಾರೆ ಎಂದು ವಿವರಿಸಿದರು. ‘ಪರೀಕ್ಷಾ ಕೇಂದ್ರದ ನೋಡೆಲ್‌ ಅಧಿಕಾರಿಗಳು ಐಟಿಐ ಮೊದಲ ಸೆಮಿಸ್ಟರ್‌ಗೆ ಬದಲಾಗಿ ಮೂರನೇ ಸೆಮಿಸ್ಟರ್‌ನ ವಿಷಯ ಸಂಕೇತವನ್ನು ವಿದ್ಯಾರ್ಥಿಗಳಿಗೆ ಕೊಟ್ಟಿದ್ದಾರೆ.

ವಿದ್ಯಾರ್ಥಿಗಳು ಸರಿ ಉತ್ತರ ಬರೆದರೂ ವಿಷಯ ಸಂಕೇತ ಅದಲು ಬದಲಾದ ಕಾರಣ ಈ ಗೊಂದಲ ಸೃಷ್ಟಿಯಾಗಿದೆ. ಪರೀಕ್ಷಾ ಸಿಬ್ಬಂದಿ ಮಾಡಿದ ತಪ್ಪಿಗೆ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ’ ಎಂದು ಹೇಳಿದರು.

ಕೋಲಾರ, ಶ್ರೀನಿವಾಸಪುರ, ಮುಳಬಾಗಿಲು, ಭಟ್ರಹಳ್ಳಿಯ ಸುಮಾರು 9 ಐಟಿಐ ಕಾಲೇಜುಗಳ ವಿದ್ಯಾರ್ಥಿಗಳು ಹೇಮಾದ್ರಿ ಕಾಲೇಜು ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದರು. ಆ ಎಲ್ಲಾ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದು, ಪೋಷಕರು ಆತಂಕಗೊಂಡಿದ್ದಾರೆ.
ಈ ಬಗ್ಗೆ ಕಾಲೇಜು ಆಡಳಿತ ಮಂಡಳಿ ಹಾಗೂ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಕಾಲೇಜುಗಳ ಪ್ರಾಂಶುಪಾಲರು ಉತ್ತರಪತ್ರಿಕೆಯ ಮರುಮೌಲ್ಯಮಾಪನಕ್ಕೆ ವಿದ್ಯಾರ್ಥಿಗಳಿಂದ ತಲಾ ₨ 3 ಸಾವಿರ ಪಡೆಯುತ್ತಿದ್ದಾರೆ. ಆದರೆ, ಬಡ ವಿದ್ಯಾರ್ಥಿಗಳಿಗೆ ಹಣ ಕೊಡಲು ಸಾಧ್ಯವಾಗುತ್ತಿಲ್ಲ. ಹಗಲಿರುಳು ಕಷ್ಟಪಟ್ಟು ಓದಿ ಪರೀಕ್ಷೆ ಬರೆದರೂ ಅನುತ್ತೀರ್ಣರಾಗಿರುವುದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಉತ್ತರಪತ್ರಿಕೆಗಳನ್ನು ಮರುಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಬೇಕು. ಈ ಗೊಂದಲಕ್ಕೆ ಕಾರಣರಾದ ಆರ್ಮುಗಂ ಮತ್ತು ರಾಧಮ್ಮ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕು ಎಂದು ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಆರ್‌.ಎಸ್‌.ಪೆದ್ದಪ್ಪಯ್ಯ ಅವರಿಗೆ ಮನವಿ ಸಲ್ಲಿಸಿದರು.

ನಂತರ ಮಾತನಾಡಿದ ಪೆದ್ದಪ್ಪಯ್ಯ, ಕಾಲೇಜುಗಳ ಆಡಳಿತ ಮಂಡಳಿ ಸದಸ್ಯರು ಹಾಗೂ ವಿದ್ಯಾರ್ಥಿ ಮುಖಂಡರ ಜತೆ ಬುಧವಾರ (ಜೂನ್‌ 24) ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.ವೇದಿಕೆಯ ಸದಸ್ಯರಾದ ನವೀನ್‌, ರವಿ. ಶಿವು ಹಾಗೂ ನಗರದ ವಿವಿಧ ಐಟಿಐ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT