ADVERTISEMENT

ದೌರ್ಜನ್ಯ ಕಾಯ್ದೆ: ಮೇಲ್ಮನವಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2018, 12:37 IST
Last Updated 3 ಏಪ್ರಿಲ್ 2018, 12:37 IST

ಮಾಲೂರು: ದಲಿತರ ಮೇಲಿನ ದೌರ್ಜನ್ಯ ಕಾಯ್ದೆ ಹಾಗೂ ಬಡ್ತಿ ಮೀಸಲಾತಿ ವಿಚಾರದಲ್ಲಿ ನ್ಯಾಯಾಲಯಕ್ಕೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಘಟಕದ ಕಾರ್ಯಕರ್ತರು ತಾಲ್ಲೂಕು ಕಚೇರಿ ಮುಂಭಾಗದಲ್ಲಿ ಸೋಮವಾರ ಧರಣಿ ನಡೆಸಿದರು.

ಸಮಿತಿ ತಾಲ್ಲೂಕು ಘಟಕದ ಸಂಚಾಲಕ ವೆಂಕಟೇಶ್ ಮಾತನಾಡಿ, ‘ಸಂವಿಧಾನ ಬದಲಾವಣೆ ಹಾಗೂ ಮೀಸಲಾತಿ ರದ್ದತಿಯ ವಿಚಾರವಾಗಿ ಕೆಲವರು ಮನಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅಲ್ಲದೆ ದಲಿತ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಪ್ಪಿಸಿ ದಲಿತರಿಗೆ ರಕ್ಷಣೆ ನೀಡಲು ದೌರ್ಜನ್ಯ ತಡೆ ಕಾಯ್ದೆ ಮುಂದುವರಿಸಬೇಕು’ ಎಂದು ಆಗ್ರಹಿಸಿದರು. ನಂತರ ಉಪ ತಹಶೀಲ್ದಾರ್ ರಾಮಚಂದ್ರಪ್ಪ ಅವರಿಗೆ ಮನವಿ ಸಲ್ಲಿಸಿದರು.

ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಚವ್ವೇನಹಳ್ಳಿ ವಿಜಿ, ತಾಲ್ಲೂಕು ಸಂಚಾಲಕ ನಾರಾಯಣ ಸ್ವಾಮಿ, ತಿರುಮಲೇಶ್, ಎ. ನಾರಾ ಯಣಸ್ವಾಮಿ, ಕೃಷ್ಣಪ್ಪ, ಗೋಪಿ, ನಾರಾ ಯಣಸ್ವಾಮಿ, ಎಚ್.ವೈ. ವೆಂಕಟೇಶಪ್ಪ, ಟಿ.ಡಿ.ಮುನಿರಾಜು, ಬೈರೇಗೌಡ, ಮಂಜುನಾಥ ನಾಯ್ಡು ಇದ್ದರು.

ADVERTISEMENT

ಹೋರಾಟ ಅನಿವಾರ್ಯ

ನಂಗಲಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ದೌರ್ಜನ್ಯ ತಡೆ ಕಾಯ್ದೆ ಅಡಿ ದೂರು ದಾಖಲಾದ ತಕ್ಷಣ ಆರೋಪಿಯನ್ನು ಬಂಧಿಸಬಾರದು ಎಂದು ಸುಪ್ರೀಂ ಕೋರ್ಟ್‌ ನೀಡಿರುವ ತೀರ್ಪನ್ನು ಮರು ಪರಿಶೀಲಿಸುವಂತೆ ಮೇಲ್ಮನವಿ ಸಲ್ಲಿಸಬೇಕು ಎಂದು ದಲಿತ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೆಂಕಟನಾರಾಯಣ್ ಹೇಳಿದರು.ನಗರದ ನರಸಿಂಹತೀರ್ಥ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯಲ್ಲಿ ಮಾತನಾಡಿ, ಸುಪ್ರೀಂ ಕೋರ್ಟ್‌ ತೀರ್ಪಿನಿಂದ ದಲಿತ ಹಾಗೂ ಬುಡಕಟ್ಟು ಸಮುದಾಯಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ದಲಿತರ ಮೇಲೆ ದೌರ್ಜನ್ಯ ಹೆಚ್ಚಾಗಲಿವೆ. ದಲಿತ ವಿರೋಧಿ ಧೋರಣೆ ಬಿಟ್ಟು, ಎಲ್ಲರ ಹಿತ ಕಾಪಾಡಬೇಕು ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಸೇನೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾದ ಕಾಡೇನಹಳ್ಳಿ ಕೆ.ವಿ ರಮೇಶ್, ಕೆ, ತ್ಯಾಗರಾಜ್, ಪ್ರಮುಖರಾದ ಜನಾರ್ದನ್, ಆರ್ ಸುಬ್ರಮಣಿ, ಹನುಮನಹಳ್ಳಿ ಸೋಮಶೇಖರ್, ಯುವ ಘಟಕದ ಅಧ್ಯಕ್ಷ ಬಲ್ಲ ಸುಬ್ರಮಣಿ, ಗಾಂಧಿಪುರ ಪ್ರವೀಣ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.